ಖಾಸಗಿತನದ ಬಗ್ಗೆ ಕಳವಳ ಪಡಬೇಕಿಲ್ಲ: ಆರೋಗ್ಯ ಸೇತು ಆ್ಯಪ್ ಬಗ್ಗೆ ಜಾವಡೇಕರ್

Update: 2020-05-02 15:50 GMT

ಹೊಸದಿಲ್ಲಿ,ಮೇ 2: ಆರೋಗ್ಯ ಸೇತು ಆ್ಯಪ್ ಯಾರಾದರೂ ಕೋವಿಡ್-19 ಸೋಂಕಿತ ವ್ಯಕ್ತಿ ಸಮೀಪದಲ್ಲಿದ್ದರೆ ಜನರಿಗೆ ಎಚ್ಚರಿಕೆ ನೀಡುವ ಅತ್ಯುತ್ತಮ ವೈಜ್ಞಾನಿಕ ವಿಧಾನವಾಗಿದೆ ಮತ್ತು ಖಾಸಗಿ ವಿಷಯಗಳ ಬಗ್ಗೆ ಜನರು ಕಳವಳ ಪಡುವ ಅಗತ್ಯವಿಲ್ಲ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಅವರು ಶನಿವಾರ ಇಲ್ಲಿ ಸ್ಪಷ್ಟಪಡಿಸಿದರು.

  ಆ್ಯಪ್ ಮೂಲಕ ಖಾಸಗಿ ಮಾಹಿತಿಗಳನ್ನು ಸಂಗ್ರಹಿಸಲಾಗುವ ಸಾಧ್ಯತೆಯ ಬಗ್ಗೆ ಶಂಕೆ ವ್ಯಕ್ತಪಡಿಸಿ ಎಐಎಂಐಎಂ ಸಂಸದ ಅಸದುದ್ದೀನ್ ಉವೈಸಿಯವರು ಮಾಡಿದ್ದ ಟ್ವೀಟ್‌ಗೆ ಪ್ರತಿಕ್ರಿಯಿಸುತ್ತಿದ್ದ ಜಾವಡೇಕರ್, ಕೊರೋನ ವೈರಸ್ ಸೋಂಕಿತರ ಜಾಡನ್ನು ಕಂಡುಹಿಡಿಯಲು ಈ ಆ್ಯಪ್ ಅನ್ನು ವಿಶ್ವಾದ್ಯಂತ ಬಳಸಲಾಗುತ್ತಿದೆ. ವಾಸ್ತವದಲ್ಲಿ ಈ ಆ್ಯಪ್ ಮೂಲಕ ಬಳಕೆದಾರರ ಯಾವುದೇ ಖಾಸಗಿ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿಲ್ಲ. ಬಳಕೆದಾರ ಕೆಮ್ಮು ಅಥವಾ ಶೀತ ಹೊಂದಿದ್ದರೆ ಅಥವಾ ಕೋವಿಡ್-19 ಪರೀಕ್ಷೆಯಲ್ಲಿ ಪಾಸಿಟಿವ್ ವರದಿ ಬಂದಿದ್ದರೆ ಮಾತ್ರ ಕೋರಲಾಗುವ ಮಾಹಿತಿಗಳನ್ನು ಸಲ್ಲಿಸಬೇಕಾಗುತ್ತದೆ. ಆ್ಯಪ್ ಕಾರ್ಯಾಚರಣೆ ಮುಂದಿನ ಒಂದೆರಡು ವರ್ಷಗಳ ಕಾಲ ಮುಂದುವರಿಯಲಿದೆ. ಲಾಕ್‌ಡೌನ್ ಶೀಘ್ರವೇ ಅಂತ್ಯಗೊಳ್ಳಲಿದೆ,ಆದರೆ ಕೊರೋನ ವೈರಸ್ ವಿರುದ್ಧದ ಯುದ್ಧದಲ್ಲಿ ಗೆಲ್ಲುವವರೆಗೂ ಈ ಆ್ಯಪ್ ಶಾಶ್ವತ ನೆರವು ನೀಡಲಿದೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News