ಲೋಕಪಾಲದ ಸದಸ್ಯ ಜಸ್ಟಿಸ್ ತ್ರಿಪಾಠಿ ಕೊರೋನ ವೈರಸ್ ನಿಂದ ಮೃತ್ಯು
Update: 2020-05-02 22:29 IST
ಹೊಸದಿಲ್ಲಿ: ಲೋಕಪಾಲದ ಸದಸ್ಯರಾಗಿದ್ದ ಜಸ್ಟಿಸ್ ಎ.ಕೆ. ತ್ರಿಪಾಠಿಯವರು ಕೊರೋನ ವೈರಸ್ ಸೋಂಕಿನಿಂದ ಮೃತಪಟ್ಟಿದ್ದಾರೆ ಎಂದು ndtv.com ವರದಿ ಮಾಡಿದೆ. ಅವರಿಗೆ 62 ವರ್ಷ ವಯಸ್ಸಾಗಿದ್ದು, ಇತ್ತೀಚೆಗಷ್ಟೇ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಅವರ ಪುತ್ರಿ ಹಾಗು ಅಡುಗೆಯಾಳು ಕೂಡ ಕೋವಿಡ್ 19 ಸೋಂಕಿಗೊಳಗಾಗಿದ್ದು, ಈಗ ಚೇತರಿಸಿಕೊಂಡಿದ್ದಾರೆ ಎಂದು ವರದಿ ತಿಳಿಸಿದೆ.
ಛತ್ತೀಸ್ ಗಢ ಹೈಕೋರ್ಟ್ ನ ಮಾಜಿ ಮುಖ್ಯ ನ್ಯಾಯಾಧೀಶರಾಗಿದ್ದ ಜಸ್ಟಿಸ್ ತ್ರಿಪಾಠಿಯವರಿಗೆ ಏಮ್ಸ್ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಅವರ ಆರೋಗ್ಯ ಸ್ಥಿತಿ ಗಂಭೀರಾವಸ್ಥೆಗೆ ತಲುಪಿದ್ದು, ವೆಂಟಿಲೇಟರ್ ನಲ್ಲಿ ಇರಿಸಲಾಗಿತ್ತು ಎಂದು ವರದಿಯಾಗಿದೆ.
ಭ್ರಷ್ಟಾಚಾರ ವಿರೋಧಿ ಒಂಬುಡ್ಸ್ ಮನ್ ಲೋಕಪಾಲದ ನಾಲ್ವರು ನ್ಯಾಯಾಂಗ ಸದಸ್ಯರಲ್ಲಿ ಒಬ್ಬರಾಗಿದ್ದರು ಜಸ್ಟಿಸ್ ತ್ರಿಪಾಠಿ.