ಕೋವಿಡ್-19: ಭಾರತಕ್ಕೆ 7 ಮೆಟ್ರಿಕ್ ಟನ್ ವೈದ್ಯಕೀಯ ಅಗತ್ಯಗಳನ್ನು ರವಾನಿಸಿದ ಯುಎಇ

Update: 2020-05-02 16:59 GMT

ಹೊಸದಿಲ್ಲಿ,ಮೇ 2: ಕೋವಿಡ್-19ರ ವಿರುದ್ಧ ಭಾರತದ ಹೋರಾಟಕ್ಕೆ ನೆರವಾಗಲು ಸಂಯುಕ್ತ ಅರಬ್ ಗಣರಾಜ್ಯ(ಯುಎಇ)ವು ಶನಿವಾರ ಏಳು ಮೆಟ್ರಿಕ್ ಟನ್‌ಗಳಷ್ಟು ವೈದ್ಯಕೀಯ ಅಗತ್ಯಗಳನ್ನು ರವಾನಿಸಿದೆ ಎಂದು ಇಲ್ಲಿಯ ಯುಎಇ ರಾಯಭಾರಿ ಕಚೇರಿಯು ತಿಳಿಸಿದೆ.

ಈ ಪೂರೈಕೆಯು ಕೊರೋನ ವೈರಸ್ ವಿರುದ್ಧ ಹೋರಾಡುತ್ತಿರುವ ಸುಮಾರು 7,000 ವೈದ್ಯಕೀಯ ವೃತ್ತಿಪರರಿಗೆ ನೆರವಾಗಲಿದೆ ಎಂದು ಅದು ಹೇಳಿಕೆಯಲ್ಲಿ ತಿಳಿಸಿದೆ.

ಕೋವಿಡ್-19 ಪಿಡುಗಿನ ವಿರುದ್ಧ ಹೋರಾಡುವ ದೇಶಗಳಿಗೆ ಅಗತ್ಯ ಬೆಂಬಲವನ್ನು ನೀಡಲು ಯುಎಇ ಬದ್ಧವಾಗಿದೆ. ಭಾರತಕ್ಕೆ ಯುಎಇ ನೆರವು ವರ್ಷಗಳಿಂದಲೂ ಉಭಯ ದೇಶಗಳ ನಡುವಿನ ಗಾಢ ಸಂಬಂಧಗಳ ದ್ಯೋತಕವಾಗಿದೆ ಎಂದು ಯುಎಇ ರಾಯಭಾರಿ ಅಹ್ಮದ್ ಅಬ್ದುಲ್ ರಹಮಾನ್ ಅಲ್‌ಬನ್ನಾ ಹೇಳಿದ್ದಾರೆ. ಯುಎಇ ಈವರೆಗೆ 34ಕ್ಕೂ ಅಧಿಕ ದೇಶಗಳಿಗೆ 348 ಟನ್‌ಗೂ ಹೆಚ್ಚಿನ ವೈದ್ಯಕೀಯ ಅಗತ್ಯಗಳನ್ನು ಪೂರೈಸುವ ಮೂಲಕ ಸುಮಾರು 3,48,000 ವೈದ್ಯಕೀಯ ವೃತ್ತಿಪರರಿಗೆ ನೆರವಾಗಿದೆ ಎಂದೂ ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News