×
Ad

ಕೊರೋನ ವೈರಸ್ : ಭಾರತದಲ್ಲಿ ಒಂದೇ ದಿನ 99 ಮಂದಿ ಸಾವು

Update: 2020-05-03 10:49 IST

ಹೊಸದಿಲ್ಲಿ: ಭಾರತದಲ್ಲಿ ಕೊರೋನ ವೈರಸ್ ಕಾಣಿಸಿಕೊಂಡ ಬಳಿಕ ಗರಿಷ್ಠ ಸಂಖ್ಯೆಯ ಪ್ರಕರಣ ಹಾಗೂ ಗರಿಷ್ಠ ಸಂಖ್ಯೆಯ ಸಾವು ಶನಿವಾರ ಸಂಭವಿಸಿದೆ. ಇದೇ ಮೊದಲ ಬಾರಿಗೆ ಒಂದೇ ದಿನ 2,564 ಪ್ರಕರಣ ದೃಢಪಟ್ಟಿದ್ದು, 99 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ.

ಇದುವರೆಗೆ ಶುಕ್ರವಾರ ದಾಖಲಾಗಿದ್ದ 2333 ಪ್ರಕರಣಗಳೇ ಗರಿಷ್ಠ ಎನಿಸಿತ್ತು. ಭಾರತದಲ್ಲಿ ಸೋಂಕಿತರ ಸಂಖ್ಯೆ 40 ಸಾವಿರದ ಸನಿಹಕ್ಕೆ ಬಂದಿದ್ದು, ಕೇವಲ 211 ಪ್ರಕರಗಳಷ್ಟೇ ಬಾಕಿ. ಜೈಪುರದಲ್ಲಿ 20 ದಿನದ ಶಿಶು ಸೇರಿದಂತೆ ಒಟ್ಟು 1320 ಮಂದಿ ಈ ಸಾಂಕ್ರಾಮಿಕಕ್ಕೆ ಬಲಿಯಾಗಿ ದ್ದಾರೆ. ಇದರ ನಡುವೆಯೂ ಸಮಾಧಾನದ ಅಂಶವೆಂದರೆ ಭಾರತದಲ್ಲಿ ಗುಣಮುಖರಾದವರ ಸಂಖ್ಯೆ 10 ಸಾವಿರವನ್ನು ದಾಟಿದೆ.  ಮಹಾರಾಷ್ಟ್ರ ದಲ್ಲಿ ಸೋಂಕಿತರ ಸಂಖ್ಯೆ ಇಳಿಮುಖವಾಗಿದ್ದರೂ, ದೇಶದ ವಿವಿಧ ಕಡೆಗಳಿಂದ ಹೆಚ್ಚು ಪ್ರಕರಣಗಳು ವರದಿಯಾಗಿವೆ. ಮಹಾರಾಷ್ಟ್ರದಲ್ಲಿ 790 ಹೊಸ ಪ್ರಕರಣ ದೃಢಪಟ್ಟಿದ್ದು, ಇದು ಶುಕ್ರವಾರದ ಸಂಖ್ಯೆಗಿಂತ 218 ಕಡಿಮೆ. ದೆಹಲಿ (384), ತಮಿಳುನಾಡು (231), ಪಂಜಾಬ್ (187), ಪಶ್ಚಿಮ ಬಂಗಾಳ (127) ರಾಜ್ಯಗಳಲ್ಲೂ ಗರಿಷ್ಠ ಪ್ರಕರಣಗಳು ಬೆಳಕಿಗೆ ಬಂದಿವೆ. ಉಳಿದಂತೆ ಗುಜರಾತ್ (333), ಉತ್ತರ ಪ್ರದೇಶ (159) ಹಾಗೂ ರಾಜಸ್ಥಾನ (106)ಗಳಲ್ಲೂ ದೊಡ್ಡ ಸಂಖ್ಯೆಯ ಪ್ರಕರಣಗಳು ದಾಖಲಾಗಿವೆ.

ಮಹಾರಾಷ್ಟ್ರದಲ್ಲಿ ಒಂದೇ ದಿನ 36 ಸಾವು ಸಂಭವಿಸಿದೆ. ಇದರೊಂದಿಗೆ ರಾಜ್ಯದಲ್ಲಿ ಸೋಂಕಿಗೆ ಬಲಿಯಾದವರ ಸಂಕ್ಯೆ 521ಕ್ಕೇರಿದೆ. ಮುಂಬೈನಲ್ಲಿ 27 ಮಂದಿ ಶನಿವಾರ ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 12296 ಆಗಿದೆ.

ದೆಹಲಿಯಲ್ಲಿ 4122 ಪ್ರಕರಣಗಳು ದೃಢಪಟ್ಟಿದ್ದರೆ, ಸಾವಿನ ಸಂಖ್ಯೆ 64ಕ್ಕೇರಿದೆ. ಗುಜರಾತ್‌ನಲ್ಲೂ ಒಂದೇ ದಿನ 26 ಸೋಂಕಿತರು ಮೃತಪಟ್ಟಿದ್ದಾರೆ. ಮಹಾರಾಷ್ಟ್ರ ಬಳಿಕ 5000ಕ್ಕಿಂತ ಹೆಚ್ಚು ಸೋಂಕಿತರನ್ನು ಹೊಂದಿರುವ ಎರಡನೇ ರಾಜ್ಯ ಎಂಬ ಕುಖ್ಯಾತಿಗೆ ಗುಜರಾತ್ ಪಾತ್ರವಾಗಿದೆ.

ಕರ್ನಾಟಕದಲ್ಲಿ 12 ಹೊಸ ಪ್ರಕರಣಗಳೊಂದಿಗೆ ಸೋಂಕಿತರ ಸಂಖ್ಯೆ 600ರ ಗಡಿ ದಾಟಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News