×
Ad

ಕೊರೋನ ಯೋಧರಿಗೆ ಗೌರವ ಸಲ್ಲಿಸಲು ಹೂಗಳ ಸುರಿಮಳೆಗರೆದ ಸಶಸ್ತ್ರ ಪಡೆಗಳು

Update: 2020-05-03 11:31 IST

ಹೊಸದಿಲ್ಲಿ, ಮೇ 3: ದೇಶಾದ್ಯಂತ ಕೊರೋನ ವೈರಸ್ ಮಹಾಮಾರಿಯ ವಿರುದ್ಧ ತಮ್ಮ ಪ್ರಾಣವನ್ನೇ ಪಣವಿಟ್ಟು ಹೋರಾಡುತ್ತಿರುವ ವೈದ್ಯಕೀಯ ಸಿಬ್ಬಂದಿ ಹಾಗೂ ಮುಂಚೂಣಿಯ ಕಾರ್ಯಕರ್ತರಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸಲು ಭಾರತೀಯ ವಾಯುಪಡೆ ರವಿವಾರ ದೇಶಾದ್ಯಂತ ವಿಶೇಷ ವಿಮಾನ ಹಾರಾಟಗಳನ್ನು ನಡೆಸಿ ಗೌರವ ಸಲ್ಲಿಸಿತು.

ಮೊದಲಿಗೆ ಜಮ್ಮುಕಾಶ್ಮೀರದ ಶ್ರೀನಗರ ದಾಲ್‌ಸರೋವರದ ಬಳಿ ವಾಯುಪಡೆಯು ಹಾರಾಟ ನಡೆಸಿ ಕೋವಿಡ್ ವೀರರಿಗೆ ಗೌರವನಮನ ಸಲ್ಲಿಸಿತು.

 ಹರ್ಯಾಣದ ಪಂಚಕುಲದಲ್ಲಿರುವ ಸರಕಾರಿ ಆಸ್ಪತ್ರೆಯ ಮೇಲೆ ಬಾನಿನಲ್ಲಿ ವಾಯುಪಡೆಯ ಹೆಲಿಕಾಪ್ಟರ್ ಹಾರಾಟ ನಡೆಸುತ್ತಿದ್ದಾಗ, ಭಾರತೀಯ ಸೇನೆಯ ಬ್ಯಾಂಡ್ ತಂಡವು ವಾದ್ಯಘೋಷಗಳನ್ನು ನಡೆಸಿತು. ಮುಂಬೈ, ಜೈಪುರ, ಲೇಹ್, ಚಂಡೀಗಢ, ಡೆಹ್ರಾಡೂನ್, ಪಟ್ನಾ, ಲಕ್ನೋ ಸೇರಿದಂತೆ ಕೋವಿಡ್-19 ರೋಗಿಗಳು ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಗಳ ಮೇಲೆ ವಾಯುಪಡೆಯ ಹೆಲಿಕಾಪ್ಟರ್‌ಗಳು ಹಾರಾಟ ನಡೆಸಿ ಪುಷ್ಪವೃಷ್ಟಿಗರೆದವು.

ಪಣಜಿಯಲ್ಲಿ ಗೋವಾ ಮೆಡಿಕಲ್‌ ಕಾಲೇಜ್ ಆಸ್ಪತ್ರೆಯಲ್ಲಿ ಭಾರತೀಯ ನೌಕಾಪಡೆಯ ಹೆಲಿಕಾಪ್ಟರ್‌ಗಳು ಹೂ ಮಳೆಗರೆದವು ಮತ್ತು ಸಮುದ್ರದಲ್ಲಿ ಲಂಗರುಹಾಕಿರುವ ನೌಕಾಪಡೆಯ ಹಡಗುಗಳು ದೀಪಗಳನ್ನು ಬೆಳಗಿಸಿ, ಕೋರೋನಾ ವೈರಸ್ ವಿರುದ್ಧ ಹೋರಾಡುತ್ತಿರುವ ಲಕ್ಷಾಂತರ ವೈದ್ಯರು, ಅರೆವೈದ್ಯಕೀಯ ಸಿಬ್ಬಂದಿ ಮತ್ತಿತರ ಮುಂಚೂಣಿಯ ಕಾರ್ಯಕರ್ತರಿಗೆ ಕೃತಜ್ಞತೆ ಅರ್ಪಿಸಿತು.

ದಿಲ್ಲಿಯ ರಾಜ್‌ಪಥ್‌ನಲ್ಲಿ ವಾಯುಪಡೆಯ ಸುಖೋಯ್-30 ಎಂಕೆಐ, ಮಿಗ್-29 ಹಾಗೂ ಜಾಗ್ವಾರ್ ಯುದ್ಧ ವಿಮಾನಗಳನ್ನು ಆಗಸದಲ್ಲಿ ಸುಮಾರು 30 ನಿಮಿಶಗಳ ಕಾಲ ವಿಶೇಷ ವ್ಯೆಹವನ್ನು ರಚಿಸಿ ಹಾರಾಟ ನಡೆಸಿದವು.

 ಕೋರೋನಾ ವೀರರಿಗೆ ಕೃತಜ್ಞತೆ ಅರ್ಪಿಸಲು ಭೂಸೇನೆ, ವಾಯುಪಡೆ ಹಾಗೂ ನೌಕಾಪಡೆಯು ಸರಣಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿವೆಯೆಂದು ತ್ರಿಪಡೆಗಳ ವರಿಷ್ಠ ಬಿಪಿನ್ ರಾವತ್ ಶುಕ್ರವಾರ ಪ್ರಕಟಿಸಿದ್ದರು.

ದಿಲ್ಲಿ ಮತ್ತಿತರ ನಗರಗಳಲ್ಲಿ ಪೊಲೀಸ್ ಸ್ಮಾರಕಗಳಿಗೆ ಪುಷ್ಪಗುಚ್ಛಗಳನ್ನು ಇರಿಸುವ ಮೂಲಕ ಕೋವಿಡ್ ವೀರರಿಗೆ ಕೃತಜ್ಞತೆ ಅರ್ಪಿಸುವ ಕಾರ್ಯಕ್ರಮಗಳು ಆರಂಭಗೊಂಡವು.

ಚಂಡೀಗಢ, ಭೋಪಾಲ್, ಮುಂಬೈ, ಹೈದರಾಬಾದ್, ಬೆಂಗಳೂರು, ಕೊಯಮತ್ತೂರು ಹಾಗೂ ತಿರುವನಂತಪುರಂ ಸೇರಿದಂತೆ ಹಲವು ನಗರಗಳಲ್ಲಿ ವಾಯುಪಡೆಯ ಫೈಟರ್ ಜೆಟ್‌ಗಳು ವಿಶೇಷ ಹಾರಾಟಗಳನ್ನು ನಡೆಸಿ ಕೊರೋನ ಯೋಧರಿಗೆ ಗೌರವಾರ್ಪಣೆ ಸಲ್ಲಿಸಿದವು.

ದೇಶಾದ್ಯಂತ ವಿವಿಧೆಡೆ ಸೇನಾಪಡೆಯ ಬ್ಯಾಂಡ್‌ಗಳು ಕೊರೋನಾ ರೋಗಿಗಳು ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಗಳ ಹೊರಗಡೆ ವಾದ್ಯಘೋಷ ನಡೆಸಿದವು.

ಕೊರೋನಾ ವೈರಸ್ ಪಿಡುಗನ್ನು ನಿಭಾಯಿಸುವಲ್ಲಿ ಇಡೇ ದೇಶವು ಒಗ್ಗಟ್ಟಾಗಿ ನಿಂತುಕೊಂಡಿದೆ ಹಾಗೂ ಪ್ರತಿರೋಧವನ್ನು ಪ್ರದರ್ಶಿಸಿದೆ. ಭಾರತೀಯ ಸಶಸ್ತ್ರಪಡೆಗಳ ಪರವಾಗಿ ವೈದ್ಯರು,ನರ್ಸ್‌ಗಳು, ನೈರ್ಮಲ್ಯ ಕಾರ್ಮಿಕರು, ಪೊಲೀಸರು, ಗೃಹರಕ್ಷಕದಳ,ಡೆಲಿವರಿ ಬಾಯ್‌ಗಳು ಹಾಗೂ ಮಾಧ್ಯಮ ಮಂದಿಗೆ ಕೃತಜ್ಞತೆಯನ್ನು ಅರ್ಪಿಸಲು ಬಯಸುತ್ತೇವೆ.

ಜನರಲ್ ರಾವತ್, ತ್ರಿಪಡೆಗಳ ಸೇನಾ ವರಿಷ್ಠ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News