ಬೂಟಿನಿಂದ ಒದ್ದು, ಲಾಠಿಯಿಂದ ಹಲ್ಲೆ: ವ್ಯಕ್ತಿಗೆ ಉ.ಪ್ರದೇಶ ಪೊಲೀಸರು ಚಿತ್ರಹಿಂಸೆ ನೀಡುತ್ತಿರುವ ವಿಡಿಯೋ ವೈರಲ್

Update: 2020-05-03 09:10 GMT

ಎತ್ವಾ: ಉತ್ತರ ಪ್ರದೇಶದ ಎತ್ವಾ ಜಿಲ್ಲೆಯ ಪೊಲೀಸರು ವ್ಯಕ್ತಿಯೊಬ್ಬನಿಗೆ ಚಿತ್ರಹಿಂಸೆ ನೀಡುತ್ತಿರುವ ವಿಡಿಯೋವೊಂದು ವೈರಲ್ ಆಗುತ್ತಿದೆ.

ಇಬ್ಬರು ಪೊಲೀಸರು ವ್ಯಕ್ತಿಯೊಬ್ಬನಿಗೆ ತೀವ್ರವಾಗಿ ಹೊಡೆದು ಚಿತ್ರಹಿಂಸೆ ನೀಡುತ್ತಿರುವುದು ಬೆಳಕಿಗೆ ಬಂದಿದ್ದು, ನೆಲದಲ್ಲಿ ಬಿದ್ದ ಆ ವ್ಯಕ್ತಿ  ಕ್ಷಮೆ ಮತ್ತು ದಯೆ ತೋರುವಂತೆ ಅಂಗಲಾಚುತ್ತಿರುವ ದೃಶ್ಯ ಇದರಲ್ಲಿದೆ.

ಎರಡು ನಿಮಿಷಗಳ ಈ ವಿಡಿಯೊವನ್ನು ಎತ್ವಾ ಜಿಲ್ಲೆಯ ಒಂದು ಗ್ರಾಮದ ಟೇರೆಸ್‍ನಿಂದ ಚಿತ್ರೀಕರಿಸಲಾಗಿದ್ದು, ಪೊಲೀಸರ ಚಿತ್ರಹಿಂಸೆಯನ್ನು ಸೆರೆಹಿಡಿಯಲಾಗಿದೆ. ಶುಕ್ರವಾರ ಈ ಘಟನೆ ನಡೆದಿದ್ದು, ಪೊಲೀಸ್ ದೌರ್ಜನ್ಯಕ್ಕೆ ಒಳಗಾದ ವ್ಯಕ್ತಿ ಮಾನಸಿಕ ಅಸ್ವಸ್ಥ ಎಂದು ಹೇಳಲಾಗಿದೆ.

ಸಮಾಜವಾದಿ ಪಕ್ಷದ ಹ್ಯಾಂಡಲ್ ಸೇರಿದಂತೆ ಹಲವರು ಇದನ್ನು ಪೋಸ್ಟ್ ಮಾಡಿದ್ದಾರೆ. ವಿಡಿಯೊದಲ್ಲಿ ಕಂಡುಬರುವಂತೆ ಪೊಲೀಸ್ ಪೇದೆಯೊಬ್ಬ ನೆಲದಲ್ಲಿ ಬಿದ್ದ ವ್ಯಕ್ತಿಯ ಮುಖಕ್ಕೆ ತನ್ನ ಬೂಟಿನಿಂದ ಒದೆಯುತ್ತಿದ್ದಾರೆ. ಆಗ ಕೆಲ ಪೊಲೀಸರು ಎದೆಯ ಮೇಲೆ ಬೂಟಿನಿಂದ ಒದ್ದಿದ್ದಾರೆ. ಬಳಿಕ ಅಮಾನುಷವಾಗಿ ಲಾಠಿಯಿಂದ ಥಳಿಸಿ ಚಿತ್ರಹಿಂಸೆ ಮಾಡಲಾಗಿದೆ. ನೋವಿನಿಂದ ವ್ಯಕ್ತಿ ಚೀರಾಡುತ್ತಿದ್ದರೂ ಹೊಡೆಯುವುದು ನಿಲ್ಲಿಸಲಿಲ್ಲ.

ಚಿತ್ರಹಿಂಸೆಗೆ ಒಳಗಾದ ವ್ಯಕ್ತಿ ಸುನೀಲ್ ಯಾದವ್ ಎನ್ನಲಾಗಿದ್ದು, ಈತ ಮಾದಕ ವ್ಯಸನಿ ಎನ್ನಲಾಗಿದೆ. ಘಟನೆ ಬಗ್ಗೆ ವಿವರವಾದ ವರದಿಯನ್ನು ಜಿಲ್ಲಾ ಪೊಲೀಸ್ ಮುಖ್ಯಸ್ಥರಿಗೆ ಸಲ್ಲಿಸಲಾಗಿದೆ ಎಂದು ತಿಳಿದುಬಂದಿದೆ. ಪೊಲೀಸ್ ಪೇದೆಯೊಬ್ಬನನ್ನು ಅಮಾನುಗೊಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News