ವಲಸೆ ಕಾರ್ಮಿಕರಿಂದ ರೈಲು ಪ್ರಯಾಣ ಶುಲ್ಕ ವಸೂಲಿಗೆ ಕೇಂದ್ರದ ಆದೇಶ: ವಿಪಕ್ಷಗಳ ಆಕ್ರೋಶ

Update: 2020-05-03 15:02 GMT

ಹೊಸದಿಲ್ಲಿ,ಮೇ 3: ತಮ್ಮ ಊರುಗಳಿಗೆ ಮರಳಲು ವಲಸೆ ಕಾರ್ಮಿಕರು ಶುಲ್ಕ ಪಾವತಿಸುವಂತೆ ಮತ್ತು ರಾಜ್ಯಗಳು ಅದನ್ನು ಸಂಗ್ರಹಿಸುವಂತೆ ಮಾಡಿರುವ ರೈಲ್ವೆ ಸಚಿವಾಲಯದ ಕ್ರಮವು ಸರಕಾರ ಮತ್ತು ಪ್ರತಿಪಕ್ಷಗಳ ನಡುವೆ ಹೊಸ ಸಂಘರ್ಷವನ್ನು ಹುಟ್ಟುಹಾಕುತ್ತಿದೆ.

ದೇಶವ್ಯಾಪಿ ಕೋವಿಡ್-19 ಲಾಕ್‌ಡೌನ್ ಮೇ 17ರವರೆಗೆ ವಿಸ್ತರಣೆಯಾಗಿರುವ ಹಿನ್ನ್ನೆಲೆಯಲ್ಲಿ ಸರಕಾರವು ಅತಂತ್ರ ವಲಸೆ ಕಾರ್ಮಿಕರನ್ನು ತಮ್ಮ ಊರುಗಳಿಗೆ ತಲುಪಿಸಲು ಶುಕ್ರವಾರದಿಂದ ವಿಶೇಷ ರೈಲುಗಳನ್ನು ಓಡಿಸುತ್ತಿದೆ. ಆದರೆ ರಾಜ್ಯಗಳ ಬೇಡಿಕೆಗೆ ವಿರುದ್ಧವಾಗಿ ಅದು ವಲಸೆ ಕಾರ್ಮಿಕರಿಗೆ ಪ್ರಯಾಣ ಶುಲ್ಕವನ್ನು ವಿಧಿಸುತ್ತಿದೆ.

ಸ್ಥಳೀಯ ಸರಕಾರಿ ಅಧಿಕಾರಿಗಳು ತಮ್ಮಿಂದ ಅನುಮತಿ ಪಡೆದಿರುವ ಪ್ರಯಾಣಿಕರಿಗೆ ಟಿಕೆಟ್‌ಗಳನ್ನು ಹಸ್ತಾಂತರಿಸಬೇಕು ಮತ್ತು ಟಿಕೆಟ್ ಶುಲ್ಕಗಳನ್ನು ಸಂಗ್ರಹಿಸಿ ಒಟ್ಟು ಮೊತ್ತವನ್ನು ರೈಲ್ವೆಗೆ ಒಪ್ಪಿಸಬೇಕು ಎಂದು ರೈಲ್ವೆ ಸಚಿವಾಲಯದ ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಟಿಕೆಟ್‌ಗಳನ್ನು ನೀಡಿ ಶುಲ್ಕಗಳನ್ನು ವಸೂಲು ಮಾಡುವ ಹೊಣೆಗಾರಿಕೆ ರಾಜ್ಯ ಸರಕಾರಗಳದ್ದಾಗಿದ್ದು, ಹೆಚ್ಚಿನ ರಾಜ್ಯಗಳು ರಾಜಕೀಯ ದುಷ್ಪರಿಣಾಮದ ಆತಂಕವನ್ನು ಹೊಂದಿವೆ. ಈ ಪೈಕಿ ಹೆಚ್ಚಿನ ರಾಜ್ಯಗಳಲ್ಲಿ ಬಿಜೆಪಿಯೇತರ ಸರಕಾರಗಳಿದ್ದು, ವಲಸೆ ಕಾರ್ಮಿಕರ ಪ್ರಯಾಣ ವೆಚ್ಚವನ್ನು ಕೇಂದ್ರವು ಭರಿಸಬೇಕೆಂದು ಆಗ್ರಹಿಸುತ್ತಿವೆ.

ಬಿಜೆಪಿ ಸರಕಾರವು ತಮ್ಮ ಮನೆಗಳಿಗೆ ಮರಳುತ್ತಿರುವ ಬಡ ಕಾರ್ಮಿಕರಿಂದ ಶುಲ್ಕವನ್ನು ವಸೂಲು ಮಾಡುತ್ತಿರುವುದು ಅತ್ಯಂತ ನಾಚಿಕೆಗೇಡಿನದ್ದಾಗಿದೆ ಎಂದು ಎಸ್‌ಪಿ ಅಧ್ಯಕ್ಷ ಅಖಿಲೇಶ್ ಯಾದವ್ ಅವರು ರವಿವಾರ ಟ್ವೀಟಿಸಿದ್ದರೆ, ಜಾರ್ಖಂಡ್ ಸರಕಾರವು ಟಿಕೆಟ್ ಶುಲ್ಕಗಳನ್ನು ಪಾವತಿಸುವಂತೆ ವಲಸೆ ಕಾರ್ಮಿಕರನ್ನು ಕೇಳುವುದಿಲ್ಲ. ಕೇಂದ್ರ ಸರಕಾರವು ಈ ಶುಲ್ಕಗಳನ್ನು ಭರಿಸದಿದ್ದರೆ ಜಾರ್ಖಂಡ್ ಸರಕಾರವೇ ಮಾರ್ಗವೊಂದನ್ನು ಕಂಡುಕೊಳ್ಳಲಿದೆ ಎಂದು ಮುಖ್ಯಮಂತ್ರಿ ಹೇಮಂತ್ ಸೊರೇನ್ ತಿಳಿಸಿದ್ದಾರೆ.

ಜಿಎಸ್‌ಟಿ ಸಂಗ್ರಹ ಸಾರ್ವಕಾಲಿಕ ಕನಿಷ್ಠವಾಗಿರುವ ಈ ಸಂದರ್ಭದಲ್ಲಿ ಕೇಂದ್ರವು ತನ್ನ ಹಣಕಾಸು ಒತ್ತಡವನ್ನು ರಾಜ್ಯಗಳಿಗೆ ದಾಟಿಸುತ್ತಿರುವಂತಿದೆ ಎಂದು ಹೇಳಿದ ಛತ್ತೀಸ್‌ಗಡ ಸರಕಾರದ ಹಿರಿಯ ಅಧಿಕಾರಿಯೋರ್ವರು,ಪಿಎಂ ಕೇರ್ಸ್ ನಿಧಿ ಇರುವುದು ಏಕೆ ಎಂದು ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News