ಕೊರೋನ ಹಾಟ್‌ಸ್ಪಾಟ್‌ಗಳಿಗೆ ಮಸೀದಿಗಳ ಹೆಸರು: ರೋಗಕ್ಕೂ ಕೋಮುಬಣ್ಣ ನೀಡಿದ ಆದಿತ್ಯನಾಥ್ ಸರಕಾರ

Update: 2020-05-03 16:55 GMT

ಲಕ್ನೋ,ಮೇ 3: ಉತ್ತರ ಪ್ರದೇಶ ಸರಕಾರವು ಲಕ್ನೋದಲ್ಲಿಯ 18 ಹಾಟ್‌ಸ್ಪಾಟ್‌ಗಳ ಪೈಕಿ ಎಂಟಕ್ಕೆ ಮಸೀದಿಗಳ ಹೆಸರು ನೀಡಿದ್ದು,ಇದು ಆ ಪ್ರದೇಶಗಳಲ್ಲಿಯ ಮುಸ್ಲಿಮರಲ್ಲಿ ಕಳವಳಗಳನ್ನು ಮೂಡಿಸಿದೆ. ಇದೇ ವೇಳೆ ಸರಕಾರವು ರೋಗಕ್ಕೂ ಕೋಮುಬಣ್ಣ ನೀಡುತ್ತಿದೆ ಎಂದು ಪ್ರತಿಪಕ್ಷಗಳು ಟೀಕಿಸಿವೆ.

 ಯಾವುದೇ ನಿರ್ದಿಷ್ಟ ಸಮುದಾಯವನ್ನು ಗುರಿ ಮಾಡಿಕೊಂಡಿರುವುದನ್ನು ಸರಕಾರವು ನಿರಾಕರಿಸಿದೆ. ಪಾಸಿಟಿವ್ ಕೇಸ್‌ಗಳಿಂದಾಗಿ ಮಸೀದಿಗಳನ್ನು ಹೆಸರಿಸಲಾಗಿದೆಯಷ್ಟೇ ಎಂದು ಹೇಳಿದ ಹಿರಿಯ ಸರಕಾರಿ ಅಧಿಕಾರಿಯೋರ್ವರು,ಆ ಪ್ರದೇಶಗಳಲ್ಲಿ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ ಮತ್ತು ಇದೇ ಕಾರಣದಿಂದ ಹಾಟ್‌ಸ್ಪಾಟ್‌ಗಳಿಗೆ ಮಸೀದಿಗಳ ಹೆಸರುಗಳನ್ನಿಡಲಾಗಿದೆ. ಬೇರೆ ಯಾವ ಉದ್ದೇಶವೂ ಇಲ್ಲ ಎಂದರು.

ಸರಕಾರವು ಕೊರೋನ ವೈರಸ್ ವಿರುದ್ಧ ಹೋರಾಡುವ ಬಗ್ಗೆ ಕಾಳಜಿ ವಹಿಸಬೇಕು. ಅದು ಹೆಚ್ಚಿನ ಪ್ರಕರಣಗಳು ವರದಿಯಾಗುತ್ತಿರುವ ಪ್ರದೇಶಗಳತ್ತ ಗಮನ ಹರಿಸಬೇಕು. ಆದರೆ ಇದರಲ್ಲಿ ಸರಕಾರವು ವಿಫಲಗೊಂಡಿದೆ. ಜನರು ವಾಸ್ತವಗಳ ಬಗ್ಗೆ ಗಮನ ಹರಿಸುವುದನ್ನು ತಡೆಯಲು ಅದು ಧಾರ್ಮಿಕ ವಿಷಯಗಳೊಂದಿಗೆ ತಳುಕು ಹಾಕುತ್ತಿದೆ. ರೋಗವನ್ನು ಒಂದು ನಿರ್ದಿಷ್ಟ ಸಮುದಾಯದೊಂದಿಗೆ ತಳುಕು ಹಾಕುವುದು ತಾರತಮ್ಯವಾಗುತ್ತದೆ ಎಂದು ಉತ್ತರ ಪ್ರದೇಶ ಕಾಂಗ್ರೆಸ್ ಮುಖ್ಯಸ್ಥ ಅಜಯ ಕುಮಾರ್ ಲಲ್ಲು ಆರೋಪಿಸಿದ್ದಾರೆ.

ಲಕ್ನೋದ ಸದರ ಬಝಾರ್‌ನಲ್ಲಿಯ ಹಾಟ್‌ಸ್ಪಾಟ್‌ನ್ನು ‘ಮಸ್ಜಿದ್ ಅಲಿ ಜಾನ್ ಮತ್ತು ಸುತ್ತುಮುತ್ತಲಿನ ಪ್ರದೇಶಗಳು ’ಎಂದು ಹೆಸರಿಸಲಾಗಿದೆ. ಇದೇ ರೀತಿ ಇತರ ಹಾಟ್‌ಸ್ಪಾಟ್‌ಗಳಿಗೆ ಅಲ್ಲಿಯ ಮಸೀದಿಗಳ ಹೆಸರುಗಳನ್ನಿರಿಸಲಾಗಿದೆ.

ನಾವು ಇವೆಲ್ಲದರಿಂದ ಧರ್ಮವನ್ನು ದೂರವಿರಿಸಬೇಕು. ಪರಿಸ್ಥಿತಿಯು ಈಗಾಗಲೇ ಕೆಟ್ಟಿದೆ,ಅದನ್ನು ಇನ್ನಷ್ಟು ಗೋಜಲುಗೊಳಿಸುವುದು ಏಕೆ ಎಂದು ಹಿರಿಯ ಎಸ್‌ಪಿ ನಾಯಕ ಜುಹಿ ಸಿಂಗ್ ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News