ಮೇ 7ರಿಂದ ವಿದೇಶಗಳಲ್ಲಿ ಸಿಲುಕಿರುವ ಭಾರತೀಯರನ್ನು ವಾಪಸ್ ಕರೆತರಲಿದೆ ಕೇಂದ್ರ ಸರಕಾರ

Update: 2020-05-04 18:11 GMT

  ಹೊಸದಿಲ್ಲಿ, ಮೇ 7: ಕೊರೋನ ವೈರಸ್ ಹಾವಳಿಯ ಹಿನ್ನೆಲೆಯಲ್ಲಿ ವಿದೇಶದಲ್ಲಿ ಸಿಲುಕಿಕೊಂಡಿರುವ ಭಾರತೀಯರನ್ನು ಕೇಂದ್ರ ಸರಕಾರವು ಮೇ 7ರಿಂದ ಸ್ವದೇಶಕ್ಕೆ ಹಂತಹಂತವಾಗಿ ಕರೆತರಲಿದೆ. ವಿದೇಶದಲ್ಲಿರುವ ಭಾರತೀಯರ ಪ್ರಯಾಣಕ್ಕಾಗಿ ವಿಮಾನ ಹಾಗೂ ನೌಕಾಪಡೆಯ ಹಡಗುಗಳನ್ನು ಬಳಸಿಕೊಳ್ಳಲಾಗುವುದು ಎಂದು ಕೇಂದ್ರ ಸರಕಾರವು ಹೇಳಿಕೆಯೊಂದರಲ್ಲಿ ತಿಳಿಸಿದೆ.

 ಹಣಪಾವತಿಯ ಆಧಾರದಲ್ಲಿ ಅವರಿಗೆ ಈ ಸೇವೆಯನ್ನು ನೀಡಲಾಗುವುದು ಎಂಬುದಾಗಿಯೂ ಅದು ಸ್ಪಷ್ಟಪಡಿಸಿದೆ. ಕೊರೋನಾ ಸೋಂಕಿನ ಯಾವುದೇ ಗುಣಲಕ್ಷಣಗಳನ್ನು ಹೊಂದಿರದವರಿಗೆ ಮಾತ್ರವೇ ಪ್ರಯಾಣಕ್ಕೆ ಅವಕಾಶ ನೀಡಲಾಗುವುದು.

 ಭಾರತೀಯ ರಾಯಭಾರಿ ಹಾಗೂ ಹೈಕಮೀಶನ್ ಕಚೇರಿಗಳು, ವಿದೇಶದಲ್ಲಿ ಸಂಕಷ್ಚಕ್ಕೀಡಾಗಿರುವ ಭಾರತೀಯ ಪೌರರ ಪಟ್ಟಿಯನ್ನು ಸಿದ್ಧಪಡಿಸುತ್ತಿದೆ ಎಂದು ಹೇಳಿಕೆಯು ತಿಳಿಸಿದೆ. ನಿಗದಿತ ವೇಳಾಪಟ್ಟಿಯಲ್ಲಿ ಸಂಚಾರ ನಡೆಸದ ವಾಣಿಜ್ಯ ವಿಮಾನಗಳನ್ನು ಇದಕ್ಕಾಗಿ ಬಳಸಿಕೊಳ್ಳಲಾಗುವುದು ಎಂದು ಅದು ತಿಳಿಸಿದೆ.

  ಪ್ರಯಾಣಿಕರ ವೈದ್ಯಕೀಯ ತಪಾಸಣೆಗಳಪಡಿಸಿದ ಬಳಿಕವೇ ಅವರಿಗೆ ಪ್ರಯಾಣಿಸಲು ಅವಕಾಶ ನೀಡಲಾಗುವುದು. ಪ್ರಯಾಣದ ವೇಳೆ ಎಲ್ಲಾ ಪ್ರಯಾಣಿಕರು, ಕೇಂದ್ರ ಆರೋಗ್ಯ ಹಾಗೂ ನಾಗರಿಕ ವಾಯುಯಾನ ಸಚಿವಾಲಯ ಜಾರಿಗೊಳಿಸಿರುವ ಆರೋಗ್ಯ ನಿಯಮಾವಳಿಗಳನ್ನು ಅನುಸರಿಸಬೇಕಾಗುತ್ತಿದೆ ಎಂದು ಕೇಂದ್ರ ಸರಕಾರ ತಿಳಿಸಿದೆ.

 ಆಗಮನದ ವೇಳೆ, ಎಲ್ಲಾ ಪ್ರಯಾಣಿಕರು ಕಡ್ಡಾಯವಾಗಿ ಆರೋಗ್ಯ ಸೇತು ಆ್ಯಪ್ ಅನ್ನು ಅವರ ಮೊಬೈಲ್ ಫೋನ್‌ನಲ್ಲಿ ಅಳವಡಿಸಿಕೊಳ್ಳಬೇಕೆಂದು ಹೇಳಿಕೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News