ನಿಲ್ಲದ ವಲಸಿಗ ಕಾರ್ಮಿಕರ ಕಣ್ಣೀರು: ಬೆಂಗಳೂರು ಬಿಟ್ಟು ಬಂದರೂ, ಊರು ಸೇರಿಲ್ಲ!

Update: 2020-05-04 17:56 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಮೇ 4: ರಾಜಧಾನಿ ಬೆಂಗಳೂರಿನಿಂದ ನಮ್ಮನ್ನು ಕಳಿಸಿಕೊಟ್ಟರು. ಆದರೆ, ಜಿಲ್ಲೆಗೆ ಬಂದರೂ, ನಮ್ಮೂರಿಗೆ ಹೋಗಲು ಆಗುತ್ತಿಲ್ಲ. ಪ್ರಶ್ನಿಸಿದರೆ, ಗ್ರಾಮಗಳಿಗೆ ಇನ್ನು ಬಸ್ಸು ಹೋಗುತ್ತಿಲ್ಲ ಎನ್ನುತ್ತಿದ್ದಾರೆ. ರಾತ್ರಿಯಿಂದ ಬಸ್ ನಿಲ್ದಾಣದಲ್ಲೇ ಉಳಿದುಕೊಂಡಿದ್ದೇವೆ. ಇದು ವಿವಿಧ ಜಿಲ್ಲೆಗಳಿಗೆ ತೆರಳಿರುವ ಕಾರ್ಮಿಕರ ಪರಿಸ್ಥಿತಿ.

ಲಾಕ್‍ಡೌನ್ ನಿಯಮ ಸಡಿಲಗೊಳಿಸಿ, ಬೆಂಗಳೂರಿನಲ್ಲಿ ಸಿಲುಕಿರುವ ಕಾರ್ಮಿಕರನ್ನು ಸ್ವಗ್ರಾಮಗಳಿಗೆ ತೆರಳಲು ರಾಜ್ಯ ಸರಕಾರ ಉಚಿತ ಸಾರಿಗೆ ವ್ಯವಸ್ಥೆ ಕಲ್ಪಿಸಿದೆ. ಅದರಂತೆ ಕಳೆದ ಎರಡು ದಿನಗಳಿಂದ ಸಾವಿರಾರು ಕಾರ್ಮಿಕರು ಬೆಂಗಳೂರಿನಿಂದ ರಾಜ್ಯದ ವಿವಿಧ ಜಿಲ್ಲೆಗಳಿಗೆ ತೆರಳಿದ್ದಾರೆ. ಆದರೆ, ಬಹುತೇಕ ಕಡೆ ಅವರ ಸ್ವಗ್ರಾಮಗಳಿಗೆ ತೆರಳಲು ಬಸ್ ಗಳಿಲ್ಲ. ಅಷ್ಟೇ ಅಲ್ಲದೆ, ಖಾಸಗಿ ವಾಹನಗಳ ಸಂಚಾರಕ್ಕೆ ತಡೆ ಹಿಡಿದಿರುವ ಹಿನ್ನೆಲೆ ಕಾರ್ಮಿಕರು ಮನೆ ಸೇರುವುದು ಕನಸಿನ ಮಾತಾಗಿದೆ.

'ಮನಿಗೆ ಹೋಗಾಕ ಬಸ್ ಇಲ್ಲ': ಶನಿವಾರ ಬೆಂಗಳೂರಿನಿಂದ ಹೊರಟು, ಗದಗ ಬಂದೆವು. ಆದರೆ, ಮನಿಗೆ ಹೋಗಾಕ ಬಸ್, ಆಟೋ ಇಲ್ಲ. ನಾವು ಮಾತ್ರ ಅಲ್ಲ ರೀ, ಜಿಲ್ಲೆಯ ಮುಳುಗುಂದ, ನರಗುಂದ, ರೋಣ, ಗಜೇಂದ್ರಗಡ ತಾಲೂಕಿನ ಊರುಗಳ ಸುಮಾರು 50 ಕ್ಕೂ ಹೆಚ್ಚು ಕಾರ್ಮಿಕರು ಬಸ್ ನಿಲ್ದಾಣದಲ್ಲಿಯೇ ಉಳಿದುಕೊಂಡಿದ್ದೆವು ಎಂದು ಕೂಲಿ ಕಾರ್ಮಿಕ ರಾಜಣ್ಣ ಕಣ್ಣೀರು ಹಾಕಿದರು.

'ಊಟ ಇಲ್ಲ': ಬೆಂಗಳೂರಿನ ಬಸ್ ನಿಲ್ದಾಣಗಳಲ್ಲಿ ನಮಗೆ ಊಟ ಕೊಟ್ಟರು. ಆದರೆ, ಇಲ್ಲಿ ರಾತ್ರಿಯಿಂದ ಹಸಿವಿನಲ್ಲೇ ಕಾಲ ಕಳೆದರೂ, ಊಟ ಸಿಗುತಿಲ್ಲ ಎಂದು ಗದಗಕ್ಕೆ ಬಂದಿಳಿದ ಮತ್ತೋರ್ವ ಕಾರ್ಮಿಕ ಮಂಜುನಾಥ್ ನಾಯಕ್ ಅಸಮಾಧಾನ ವ್ಯಕ್ತಪಡಿಸಿದರು.

'ದುಬಾರಿ ಶುಲ್ಕ': ಒಂದೊಂದು ಖಾಸಗಿ ವಾಹನ ಬಂದರೂ, ಬರೋಬ್ಬರಿ ಸಾವಿರ ರೂಪಾಯಿ ನೀಡಿ ಎನ್ನುತ್ತಾರೆ.ಅಲ್ಲದೆ, ಜಿಲ್ಲೆಯಿಂದ 12ರಿಂದ 20 ಕಿಲೋ ಮೀಟರ್ ಹೋಗಲು ಇಷ್ಟು ದುಬಾರಿ ರೊಕ್ಕ ಕೊಡಬೇಕಾ ನಾವು ಎಂದು ಹಾವೇರಿಗೆ ಬಂದಿಳಿದ ಕಾರ್ಮಿಕರು ಆಕ್ರೋಶ ವ್ಯಕ್ತಪಡಿಸಿದರು.

'ಜಿಲ್ಲಾಡಳಿತ ಏನು ಮಾಡಿಲ್ಲ': ಬೆಂಗಳೂರಿನಿಂದ ಬಂದ ನಮಗೆ ಇಲ್ಲಿನ ಜಿಲ್ಲಾಡಳಿತ ಯಾವುದೇರೀತಿಯ ಸೌಲಭ್ಯ ನೀಡಿಲ್ಲ. ನೀರು, ಶೌಚಾಲಯಕ್ಕೂ ಪರದಾಟ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಊರಿನಲ್ಲಿರುವ ಸಂಬಂಧಿಕರೇ ನಮ್ಮನ್ನು ಕರೆದುಕೊಂಡು ಹೋಗುತ್ತಾರೆ ಎನ್ನುವ ವಿಶ್ವಾಸದಲ್ಲಿಯೇ ಇದ್ದೇವೆ ಎಂದು ಜಿಲ್ಲೆಗಳ ಬಸ್ ನಿಲ್ದಾಣಗಳಲ್ಲಿರುವ ಕಾರ್ಮಿಕರು ಅಳಲು ತೋಡಿಕೊಂಡರು.

'ಕಾಲ್ನಡಿಗೆ ಮೂಲಕವೇ ಊರು ಸೇರುತ್ತೇವೆ'
ಮೊದಲು ಎಲೆಕ್ಟ್ರಾನಿಕ್ ಸಿಟಿಯಿಂದ ಕಾಲ್ನಡಿಗೆ ಆರಂಭಿಸಿ, ಬೆಂಗಳೂರಿನ ಮೆಜೆಸ್ಟಿಕ್‍ಗೆ ಸೇರಿಕೊಂಡೆವು. ಅಲ್ಲಿಂದ ಹೇಗೂ, ಬಸ್ಸಿನಲ್ಲಿ ಗದಗ ಬಂದಿದ್ದೇವೆ. ಆದರೆ, ಇಲ್ಲಿಯೂ ಊರಿಗೆ ಹೋಗಲು ವಾಹನ ಇಲ್ಲ.ಹೀಗಾಗಿ, ಕಾಲ್ನಡಿಗೆ ಮೂಲಕವೇ ಹೋಗಬೇಕು.
-ರಾಜಪ್ಪ, ಕೂಲಿ ಕಾರ್ಮಿಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News