ನಿಮ್ಮ ಸರ್ಕಾರ ರದ್ದು ಮಾಡಿದ್ದು ರೈಲುಗಳನ್ನಲ್ಲ, ಕಾರ್ಮಿಕರ ಮೂಲಭೂತ ಹಕ್ಕುಗಳನ್ನು..!

Update: 2020-05-06 09:22 GMT

ಮಾನ್ಯ ಯಡಿಯೂರಪ್ಪನವರೇ,

ತಾವು ಈ ರಾಜ್ಯದ ಮುಖ್ಯಮಂತ್ರಿಗಳು. ಈ ರಾಜ್ಯದ ಎಲ್ಲಾ ಜನರ ಬದುಕು ಮತ್ತು ಹಕ್ಕುಗಳನ್ನು ಕಾಪಾಡಬೇಕಾದ ಪ್ರಮುಖವಾದ ಹೊಣೆ ತಮ್ಮಮೇಲಿದೆ. ಆದರೆ ನೀವು ಮಾಡುತ್ತಿರುವುದೇನು?...

ವಾಸ್ತವವಾಗಿ, ಹೊರ ರಾಜ್ಯಗಳಿಂದ ವಲಸೆ ಬಂದಿರುವ ಕಾರ್ಮಿಕರು ಅವರವರ ರಾಜ್ಯಗಳಿಗೆ ಹೋಗಲು ವ್ಯವಸ್ಥೆ ಮಾಡಿದ್ದ ಟ್ರೈನುಗಳನ್ನು ರದ್ದು ಮಾಡಿ ಮಾನವೀಯತೆಯ ನೆಲೆಯಲ್ಲೂ ಹಾಗು ಸಂವಿಧಾನದ ನೆಲೆಯಲ್ಲೂ ಘೋರ ತಪ್ಪನ್ನು ಮಾಡಿದ್ದೀರಿ. ಈ ಮೂಲಕ ವಲಸೆ ಕಾರ್ಮಿಕರು ಅವರವರ ಊರುಗಳಿಗೆ ಹೋಗುವ ಹಕ್ಕನ್ನು ಕಸಿದುಕೊಂಡು ಅವರನ್ನು ಕಾನೂನುಬಾಹಿರವಾಗಿ ‘ಒತ್ತೆ ಕಾರ್ಮಿಕರನ್ನಾಗಿಸಲಾಗಿದೆ’. ಅವರ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸಲಾಗಿದೆ. ವಲಸೆ ಕಾರ್ಮಿಕರ ಕಷ್ಟ ಹಾಗು ಕಣ್ಣೀರಿಗಿಂತ ಬಿಲ್ಡರ್ ಕುಳಗಳ ಲಾಭ-ನಷ್ಟದ ಲೆಕ್ಕಾಚಾರಗಳನ್ನು ಹೆಚ್ಚು ಮಾಡಿಕೊಂಡು ಮಾನವತೆಗೆ ಕಳಂಕ ಹಚ್ಚಲಾಗಿದೆ.

ನೀವೇ ಹೇಳಿರುವಂತೆ ರೈಲು ರದ್ದು ಮಾಡಲು ಕಾರಣ ವಲಸೆ ಕಾರ್ಮಿಕರು ಊರಿಗೆ ಹೋಗಿಬಿಟ್ಟರೆ ಈಗ ಪ್ರಾರಂಭಿಸಬೇಕಿರುವ  ನಿರ್ಮಾಣ ಕೆಲಸಗಳಿಗೆ ಅಗ್ಗದ ಕಾರ್ಮಿಕರು ಇಲ್ಲವಾಗುವುದು ಮತ್ತು ಅದರಿಂದ ಆರ್ಥಿಕ ಪುನಶ್ಚೇತನಕ್ಕೆ ತೊಂದರೆಯಾಗುವುದು. ಆದರೆ ಆರ್ಥಿಕತೆ ಎಂದರೇನು ಮುಖ್ಯಮಂತ್ರಿಗಳೇ?, ಅದರ ಗುರಿಯೇನು?, ಬಿಲ್ಡಿಂಗ್ ಗಳು ಮತ್ತು ಬಿಲ್ಡರ್ ಲಾಬಿಗಳ ಲಾಭಗಳು ಮತ್ತು ಅದರಿಂದ ಸರ್ಕಾರಕ್ಕೆ ಬರುವ ತೆರಿಗೆಗಳು ಮಾತ್ರವೇ?, ಆರ್ಥಿಕತೆಯೆಂದರೆ ನಿಮಗೆ ಓಟು ಹಾಕುವ ಕೂಲಿ ಕಾರ್ಮಿಕರ ಬದುಕಲ್ಲವೇ?, ಹಾಗಿದ್ದಲ್ಲಿ ಲಾಕ್ ಡೌನಿನ ಸಂದರ್ಭದಲ್ಲಿ ಮೂರಾಬಟ್ಟೆಯಾಗಿರುವ ಕಾರ್ಮಿಕರ ಬದುಕು ಮತ್ತು ಊರಿಗೆ ತೆರಳಬೇಕೆಂದಿರುವ ಅವರ ತವಕ ಏಕೆ ಕಾಣುತ್ತಿಲ್ಲ?. 

ಹೋಗಲಿ, ಈಗ ಈ ವಲಸೆ ಕಾರ್ಮಿಕರನ್ನು ಊರಿಗೆ ಕಳಿಸಬೇಡಿ ಎಂದು ಸರ್ಕಾರಕ್ಕೆ ಆದೇಶ ನೀಡುತ್ತಿರುವ ಇದೇ ಬಿಲ್ಡರ್ ಗಳು ಲಾಕ್ ಡೌನ್ ನ ಇಡೀ 40 ಕರಾಳ ದಿನಗಳಲ್ಲಿ ಒಮ್ಮೆಯಾದರೂ ತಮಗಾಗಿ ಕೆಲಸ ಮಾಡಿದ ಈ ಕಾರ್ಮಿಕರು ಹೇಗೆ ಬದುಕಿದ್ದಾರೆ ಎಂದು ವಿಚಾರಿಸಿದ್ದಾರೆಯೇ?, ಅವರ ಊಟ-ವಸತಿ-ಔಷಧಿಗಳ ವ್ಯವಸ್ಥೆ ಮಾಡಲು ಮುಂದಾಗಿದ್ದಾರೆಯೇ ?, ಹಾಗೊಂದು ವೇಳೆ ಈ ಕಾರ್ಮಿಕರನ್ನು ಬಿಲ್ಡರ್ ಗಳು ಕಾಳಜಿಯಿಂದ ನೋಡಿಕೊಂಡಿದ್ದ ಪಕ್ಷದಲ್ಲಿ ಬದುಕನ್ನು ಹುಡುಕಿಕೊಂಡು ಬಂದ ಈ ವಲಸೆ ಕಾರ್ಮಿಕರು ಇಲ್ಲಿ ಬದುಕು ಸಾಧ್ಯವಿಲ್ಲ ಎಂದು ಅವಕಾಶ ಸಿಕ್ಕೊಡನೆ ಮೈಲುಗಟ್ಟಲೆ ನಡೆದು ಊರಿಗೆ ತಲುಪಿಸುವ ರೈಲಿಗೇಕೆ  ಕಾಯುತ್ತಿದ್ದರು? 

ಆದರೆ ಅದಕ್ಕೆ ನಿಮ್ಮ ಬಿಲ್ಡರ್ ಮಿತ್ರರು ಹೇಳುವ ಉತ್ತರವಿಷ್ಟೇ.

"ಕಾರ್ಮಿಕರು ಕೆಲಸ ಮಾಡಿದರು. ನಾನು ಸಂಬಳ ಕೊಟ್ಟೆ. ಅಲ್ಲಿಗೆ ನಮ್ಮ ಕಾಂಟ್ರಾಕ್ಟ್ ಮುಗಿಯಿತು. ಮಿಕ್ಕ ವಿಚಾರಕ್ಕೆ ನಮಗೂ ಸಂಬಂಧವಿಲ್ಲ. ಆದ್ದರಿಂದ ಸಂಬಳಕ್ಕೆ ಮಿಗಿಲಾಗಿ ಬೇರೆ ಯಾವುದೇ ವಿಶೇಷ ಸೌಲಭ್ಯಕ್ಕೆ ಒತ್ತಾಯಿಸುವುದು ಅಥವಾ ಹೇರುವುದು ಈ ಕಾಂಟ್ರಾಕ್ಟ್ ಒಪ್ಪಂದದ ಉಲ್ಲಂಘನೆ..."

ಅಮಾನುಷವಾದರೂ ಈಗಿರುವ ಕಾನೂನು ಪ್ರಕಾರ ಅವರು ಸರಿ. ಆದರೆ ಅದೇ ಒಪ್ಪಂದದ ಕಾನೂನಿನ ಪ್ರಕಾರ ತನಗೆ ಬೇಡವಾದಲ್ಲಿ ಕೆಲಸ ಮಾಡದಿರುವ ಹಾಗು ಬೇಕೆಂದಾಗ ತನ್ನ ಊರಿಗೆ ಹೋಗುವ ಹಕ್ಕು ಕಾರ್ಮಿಕರಿಗೂ ಇದೆಯಲ್ಲವೇ ?, ಲಾಕ್ ಡೌನ್ ನ ಸಂದರ್ಭದಲ್ಲಿ ಕಾರ್ಮಿಕರ ಕಾಳಜಿಯನ್ನು ಮಾಡಿ ಎಂದು ಬಿಲ್ಡರ್ ಗಳ ಮೇಲೆ ಯಾವುದೇ ಒತ್ತಡ ಹಾಕದ ನಿಮ್ಮ ಸರ್ಕಾರ ಈಗ ಮಾತ್ರ ಬಿಲ್ಡರ್ ಗಳಿಗೆ ಕಷ್ಟವಾಗುತ್ತದೆ ಊರಿಗೆ ಹೋಗಬೇಡಿ ಎಂದು ಯಾವ ಅಧಿಕಾರದ ಅಥವಾ ಕಾನೂನಿನ ಆಧಾರದಲ್ಲಿ ಕಾರ್ಮಿಕರಿಗೆ ಬಲವಂತ ಮಾಡುತ್ತಿದ್ದೀರಿ?.

ವಾಸ್ತವದಲ್ಲಿ ನಿಗದಿಯಾಗಿದ್ದ ಟ್ರೈನುಗಳನ್ನು ರದ್ದು ಮಾಡುವ ಮೂಲಕ ಕಾನೂನುಬಾಹಿರವಾಗಿ ವಲಸೆ ಕಾರ್ಮಿಕರನ್ನು ‘ಒತ್ತೆ ಕಾರ್ಮಿಕರನ್ನಾಗಿಸಿ’ ಬಿಲ್ಡರ್ ಗಳ ಬಳಿ ‘ಜೀತ’ಕ್ಕೆ ತಳ್ಳಿದಂತಾಗಿದೆ. ನೀತಿ-ನಿಯತ್ತುಗಳಾಚೆ ಈ ಕ್ರಮ ಸಾಂವಿಧಾನಿಕವಾಗಿ ಹಾಗು ಅಪರಾಧ ಸಂಹಿತೆಯ ಭಾಗವಾಗಿ ದೊಡ್ಡ ಅಪರಾಧ. ಏಕೆಂದರೆ ವಲಸೆ ಕಾರ್ಮಿಕರು ಈ ದೇಶದ ನಾಗರಿಕರು ಎಂಬುದನ್ನು ನೀವು ಮರೆತಿದ್ದೀರಿ.

ಈ ದೇಶದ ಸಂವಿಧಾನ ನಿಮ್ಮ ಬಿಲ್ಡರ್ ಸ್ನೇಹಿತರಂತೆ ವಲಸೆ ಕಾರ್ಮಿಕರಿಗೂ ಸಮಾನವಾದ  ಹಲವು ಮೂಲಭೂತ ಹಕ್ಕುಗಳನ್ನು ನೀಡಿದೆ. ಅದರಲ್ಲಿ ‘ಸ್ವಾತಂತ್ರ್ಯ’ ಹಾಗು ‘ಶೋಷಣೆಯ ವಿರುದ್ಧ ಹಕ್ಕುಗಳು’ ಕೂಡ ಇವೆ. ಯಾವುದೇ ರಾಜ್ಯದ ಬಿಲ್ಡರ್ ಗಳು ಕರ್ನಾಟಕಕ್ಕೇ ಬಂದು ವ್ಯವಹಾರ ಮಾಡಲು ಅವಕಾಶವಿರುವಂತೆ ಹಾಗು ಲಾಸ್ ಆದರೆ ಬೇರೆ ರಾಜ್ಯಗಳಿಗೆ ತಮ್ಮ ಬಂಡವಾಳ ಸಮೇತ ‘ವಲಸೆ’ ಹೋಗಲು ಅವಕಾಶವಿರುವಂತೆ, ವಲಸೆ ಕಾರ್ಮಿಕರಿಗೂ ತಮ್ಮ ಶ್ರಮವನ್ನು ಈ ದೇಶದಲ್ಲಿ ಎಲ್ಲಿ ಬೇಕಾದರೂ ಮಾರುವ ಮತ್ತು ಸರಿಯಾದ ಬೆಲೆ ಸಿಗದಿದ್ದಲ್ಲಿ ಅಲ್ಲಿ ತಮ್ಮ ಶ್ರಮವನ್ನು ಮಾರದೆ ಬೇರೆ ಕಡೆ ಮಾರಿಕೊಳ್ಳುವ ಸ್ವಾತಂತ್ರ್ಯವಿದೆ.

ಬಿಲ್ಡರ್ ಗಳ ಲಾಭದ ಸ್ವಾತಂತ್ರ್ಯವನ್ನು ಕಾಪಾಡಬೇಕಾದ ಜವಾಬ್ದಾರಿಯನ್ನು ಮಾತ್ರ ಗುರುತಿಸಿರುವ ನೀವು ಕಾರ್ಮಿಕರ  ಬದುಕುಳಿಯುವ ಸ್ವಾತಂತ್ರ್ಯದ ಹಕ್ಕನ್ನು ಗುರುತಿಸಲಾಗದಿರುವುದು ಸಂವಿಧಾನಕ್ಕೆ ವಿರುದ್ಧ.

ಹಾಗೆಯೇ ಈ ದೇಶದ ಎಲ್ಲಾ ನಾಗರಿಕರಿಗೂ ‘ಶೋಷಣೆಯ ವಿರುದ್ಧ’ ತಮ್ಮನ್ನು ಕಾಪಾಡಿಕೊಳ್ಳುವ ಮೂಲಭೂತ ಹಕ್ಕಿದೆ. ಈ ದೇಶದ ದಿನಗೂಲಿಗಳು, ವಲಸೆ ಕಾರ್ಮಿಕರು ಎಲ್ಲಾ ಬಡವರು ಮತ್ತು ಮಧ್ಯಮವರ್ಗದ ಮಟ್ಟಿಗೆ ಯಾವುದೇ ಮುನ್ನೆಚ್ಚರಿಕೆಗೆ ಹಾಗು ಸಿದ್ಧತೆಗೆ ಅವಕಾಶ ಮಾಡಿಕೊಡದೆ ಸರ್ಕಾರ ಘೋಷಿಸಿದ ಲಾಕ್ ಡೌನ್ ಒಂದು ಶೋಷಣೆ. ಇನ್ನು ಕಳೆದ 40 ದಿನಗಳ ಅವಧಿಯಲ್ಲಿ ಆಹಾರ-ನೀರಿಲ್ಲದಂತೆ ಬದುಕುವಂತೆ ಮಾಡಿದ ಸರ್ಕಾರ ನೀತಿಗಳು ಮತ್ತೊಂದು ಶೋಷಣೆ.

ಇದೀಗ ತಮ್ಮ ಬದುಕನ್ನು ತಾವು ಕಂಡುಕೊಳ್ಳಲು ತಮ್ಮ ತಮ್ಮ ಊರಿಗೆ ಹೋಗುವ ಆಯ್ಕೆಯನ್ನು ರದ್ದುಗೊಳಿಸಿದ್ದು ‘ಶೋಷಣೆಯ ವಿರುದ್ಧ ಮೂಲಭೂತ ಹಕ್ಕಿನ’ ಪ್ರಕಾರ ನಿಮ್ಮ ಸರ್ಕಾರ ಮಾಡಿರುವ ಅತಿ ದೊಡ್ಡ ಹಕ್ಕು ಉಲ್ಲಂಘನೆ.

ಮೂರನೆಯದಾಗಿ ಈ ದೇಶದಲ್ಲಿ ಘನತೆಯಿಂದ ಬದುಕುವ ಹಕ್ಕು ಆರ್ಟಿಕಲ್ 14ಮತ್ತು 21ರಡಿ ಈ ದೇಶದ ಎಲ್ಲಾ ನಾಗರಿಕರಿಗೂ ಇದೆ. ಅದರ ಮುಂದುವರೆದ ಭಾಗವಾಗಿಯೇ ದೇಶಾದ್ಯಂತ "ಬಲವಂತದ-ಜೀತದ ದುಡಿಮೆ ನಿರ್ಬಂಧ ಕಾಯಿದೆ-1976"ನ್ನು (The Bonded Labour System (Abolition) Act, 1976) ಜಾರಿ ಮಾಡಲಾಗಿದೆ. ಇದರ ಪ್ರಕಾರ ಕಾರ್ಮಿಕರ ಮತ್ತು ಉದ್ಯಮದ ನಡುವೆ ಒಂದು ಸಾಂವಿಧಾನಿಕ ಹಾಗು ಕಾನೂನುಬದ್ಧವಾದ ಕರಾರಿಲ್ಲದೆ ಕಾರ್ಮಿಕರ ಅಸಹಾಯಕ ಪರಿಸ್ಥಿತಿಯ ದುರ್ಬಳಕೆ ಮಾಡಿಕೊಂಡು ಬಲವಂತದ ದುಡಿಮೆ ಅಥವಾ ಜೀತ ಮಾಡಿಸುವುದು ಅಪರಾಧ. ನಿಮ್ಮ ಕಾರ್ಮಿಕ ಮಂತ್ರಿಗೆ ಇದು ಗೊತ್ತಿಲ್ಲದಿದ್ದರೂ ಮುಖ್ಯಮಂತ್ರಿಯಾಗಿ ನಿಮಗಿದು ಗೊತ್ತಿರಬೇಕು.

ಈಗ ಟ್ರೈನುಗಳನ್ನು ರದ್ದು ಮಾಡುವ ಮೂಲಕ ಈ ಅಸಹಾಯಕ ವಲಸೆ ಕಾರ್ಮಿಕರು ತಮ್ಮ ಇಚ್ಛೆ ಹಾಗು ಸಮ್ಮತಿಗೆ ವಿರುದ್ಧವಾಗಿ ಬಿಲ್ಡರ್ ಗಳ ಬಳಿ ಬಲವಂತದ ದುಡಿಮೆ ಮಾಡಲೇಬೇಕಾದ ಜೀತಕ್ಕೆ ದೂಡಿದಂತಾಗಿದೆ. ಹೀಗಾಗಿ ಈ ಕಾಯಿದೆಯಡಿಯೂ ನಿಮ್ಮದು ಘನಘೋರ ಅಪರಾಧ.

ನಾವು ರಾಜರ ಕಾಲದಲ್ಲಿಲ್ಲ. ಪ್ರಜಾಪ್ರಭುತ್ವದಲ್ಲಿದ್ದೇವೆ. ಸರ್ಕಾರ ಹಾಗು ಸಮಾಜ ಪ್ರಬಲರ ಇಷ್ಟಕ್ಕೆ ತಕ್ಕಂತೆ ನಡೆಯುವುದಕ್ಕೆ ಕಡಿವಾಣ ಹಾಕಲೆಂದೇ ಈ ದೇಶಕ್ಕೆ ಅಂಬೇಡ್ಕರ್ ನಾಯಕತ್ವದಲ್ಲಿ ಒಂದು ಸಂವಿಧಾನ ರಚಿತವಾಗಿದೆ. ಎಲ್ಲರಿದೂ ಒಂದೇ ಕಾನೂನೆಂಬ ‘ರೂಲ್ ಆಫ್ ಲಾ’ ಇದೆ.

ಹೀಗಾಗಿ ಮುಖ್ಯಮಂತ್ರಿಯಾಗಿ ನೀವು ಕೈಮುಗಿದು ಕೇಳಿದ ತಕ್ಷಣ ಕಾರ್ಮಿಕರ ಹಕ್ಕುಗಳು ಇಲ್ಲವಾಗುವುದಿಲ್ಲ. ಮುಖ್ಯಮಂತ್ರಿಯಾದ ಮಾತ್ರಕ್ಕೆ ನೀವು ವಲಸೆ ಕಾರ್ಮಿಕರ ಹಕ್ಕುಗಳನ್ನು ಉಲ್ಲಂಘಿಸಿ ಬಿಲ್ಡರ್ ಲಾಬಿಗಳ ಪರವಾದ ನಿಲುವುಗಳನ್ನು ತೆಗೆದುಕೊಳ್ಳಲಾಗದು .

ಇದು ಬಿಕ್ಕಟ್ಟಿನ ಸಮಯವೇ ಆಗಿರಬಹುದು. ಆದರೆ ಎಂತಹ ಬಿಕ್ಕಟ್ಟಿನ ಸಮಯದಲ್ಲೂ ಈ ದೇಶದ ನಾಗರಿಕರ ‘ಮೂಲಭೂತ ಹಕ್ಕುಗಳು’ ಅದರಲ್ಲೂ ‘ಜೀವಿಸುವ -ಘನತೆಯಿಂದ ಜೀವಿಸುವ ಹಕ್ಕನ್ನು’ ಯಾವ ಸರ್ಕಾರಗಳು ಕಿತ್ತುಕೊಳ್ಳಲಾಗದು. ಹಾಗೆಯೇ ಬಿಕ್ಕಟ್ಟಿನ ಭಾರವನ್ನು ಈವರೆಗೆ ಲಾಭ ಉಂಡ ವರ್ಗ ಹೆಚ್ಚು ಹೊರಬೇಕೇ ವಿನಾ ಅದನ್ನು ವಂಚನೆ ಹಾಗು ಶೋಷಣೆಗೆ ಗುರಿಯಾಗುತ್ತಲೇ ಬಂದಿರುವ ಕಾರ್ಮಿಕ ವರ್ಗದ ಮೇಲೆ ವರ್ಗಾಯಿಸಬಾರದು. ಹಾಗು ಎಂತಹದ್ದೇ ಬಿಕ್ಕಟ್ಟಿನ ಸಂದರ್ಭ ಜನರ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸಬಾರದು.

ಆದ್ದರಿಂದ ಈ ಕೂಡಲೇ ನೀವು ನಿಮ್ಮ ತಪ್ಪನ್ನು ಗ್ರಹಿಸಿ ಕೂಡಲೇ ವಲಸೆ ಕಾರ್ಮಿಕರನ್ನು ಅವರವರ ಊರುಗಳಿಗೆ ತಲುಪಿಸಲು ಉಚಿತವಾಗಿ ರೈಲು ವ್ಯವಸ್ಥೆಯನ್ನು ಮಾಡಬೇಕೆಂದು ಆಗ್ರಹಿಸುತ್ತೇನೆ

-ಶಿವಸುಂದರ್

Writer - ಶಿವಸುಂದರ್

contributor

Editor - ಶಿವಸುಂದರ್

contributor

Similar News