‘ಲಾಕ್ ಡೌನ್ ನಡುವೆ ಮುಸ್ಲಿಂ ಮಹಿಳೆಯರಿಂದ ಶಾಪಿಂಗ್’ ಎಂದು ವೈರಲ್ ಆಗುತ್ತಿರುವ ವಿಡಿಯೋ 2015ರದ್ದು

Update: 2020-05-06 15:25 GMT

ಬುರ್ಖಾಧಾರಿ ಮಹಿಳೆಯರು ಕಟ್ಟಡವೊಂದರ ಮೊದಲ ಮಹಡಿಯಿಂದ ಇಳಿಯುತ್ತಿರುವ ವಿಡಿಯೋವೊಂದು ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ದೇಶವ್ಯಾಪಿ ಲಾಕ್‍ಡೌನ್ ಇರುವಾಗ ಶಾಂಪಿಂಗ್ ನಲ್ಲಿ ನಿರತರಾಗಿದ್ದ ಮಹಿಳೆಯರ ಬಂಧನ ಎನ್ನುವ ಶೀರ್ಷಿಕೆಯೊಂದಿಗೆ ಈ ವಿಡಿಯೊವನ್ನು ಹರಿಯಬಿಡಲಾಗುತ್ತಿದೆ.  

ಆಬೀರ್ ಹಯಾತ್ ಅನ್ಸಾರಿ ಎಐಎಂಐಎಂ ಎಂಬ ಖಾತೆಯಿಂದ ಈ ವಿಡಿಯೊ ತುಣುಕು ಶೇರ್ ಮಾಡಲಾಗಿದ್ದು, “ಧರ್ಮ, ಧರ್ಮ ಮತ್ತು ಕೇವಲ ಧರ್ಮ” ಎಂಬ ಶೀರ್ಷಿಕೆ ನೀಡಲಾಗಿತ್ತು. ಈ ಮಹಿಳೆ ಲಾಕ್‍ಡೌನ್ ವೇಳೆ ಶಾಪಿಂಗ್‍ಗಾಗಿ ಹೊರಬಂದಿದ್ದಾರೆ. ಪೊಲೀಸರು ಮಳಿಗೆಯ ಮಾಲಕರನ್ನು ಹೊರಹಾಕಿ ಮಹಿಳೆಯನ್ನು ಅಂಗಡಿಯ ಒಳಗೆ ಕೂಡಿಹಾಕಿದರು ಎಂದು ಟ್ವೀಟ್ ಮಾಡಲಾಗಿತ್ತು. ಆ ಟ್ವೀಟ್ ಇದೀಗ ಡಿಲೀಟ್ ಆಗಿದ್ದರೂ, ಅದೇ ಶೀರ್ಷಿಕೆಯನ್ನು ಹಲವರು ಬಳಸಿಕೊಂಡಿದ್ದಾರೆ.

ವಾಸ್ತವವೇನು?

ಲೈಕ್ ಆಲ್ ಪೇಜ್ ಎಂಬ ಫೇಸ್‍ ಬುಕ್ ಪೇಜ್‍ನಿಂದಲೂ ಇದನ್ನು ಶೇರ್ ಮಾಡಲಾಗಿದೆ. ಈ  ಬಗ್ಗೆ altnews.in ಫ್ಯಾಕ್ಟ್ ಚೆಕ್ ನಡೆಸಿದೆ. ಗೂಗಲ್ ಮ್ಯಾಪ್‍ನ ಲೊಕೇಶನ್ ಪ್ರಕಾರ ಈ ವಾಣಿಜ್ಯ ಸಂಕೀರ್ಣ ಇರುವುದು ಪಾಕಿಸ್ತಾನದ ಕರಾಚಿಯ ರಕ್ಷಣಾ ಪ್ರಾಧಿಕಾರದ ವಾಣಿಜ್ಯ ಪ್ರದೇಶದಲ್ಲಿ. ಇದು ಹಾಟ್ ಎನ್ ಸ್ಪೈಸಿ ಎನ್ನುವ ಕಟ್ಟಡದ ಬಲಪಕ್ಕಕ್ಕಿದೆ. ಗೂಗಲ್ ಮ್ಯಾಪ್ಸ್ ಪ್ರಕಾರ ಎರಡೂ ಮಳಿಗೆಗಳು ಖಡ್ಡಾ ಮಾರುಕಟ್ಟೆಯಲ್ಲಿವೆ.

ಇಷ್ಟೇ ಅಲ್ಲದೆ ಗೂಗಲ್ ಹುಡುಕಾಟ ನಡೆಸಿದಾಗ ಈ ವಿಡಿಯೋ 2015ರದ್ದು ಎನ್ನುವುದು ಖಚಿತವಾಗಿದೆ. ಜಿಬ್ರಾನ್ ವಘಾನಿ ಎಂಬಾತ 2015ರ ಜೂನ್ 13ರಂದು ಈ ವಿಡಿಯೊ ಶೇರ್ ಮಾಡಿದ್ದರು. ಇದಕ್ಕೆ 1.8 ಲಕ್ಷ ಲೈಕ್ ಬಂದಿತ್ತು ಹಾಗೂ 5 ಸಾವಿರ ಮಂದಿ ಶೇರ್ ಮಾಡಿದ್ದರು. ಇದೀಗ 5 ವರ್ಷಗಳಷ್ಟು ಹಳೆಯ ವಿಡಿಯೋವನ್ನು ಮತ್ತೆ ಶೇರ್ ಮಾಡುತ್ತಾ ಟ್ರೋಲ್ ಗಳು ಲಾಕ್ ಡೌನ್ ಉಲ್ಲಂಘಿಸಿ ಮುಸ್ಲಿಂ ಮಹಿಳೆಯರಿಂದ ಶಾಪಿಂಗ್ ಎಂದು ಸುಳ್ಳು ಹರಡುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News