ಮಂಗಳೂರು: ಮೊಬೈಲ್‌ನಲ್ಲಿ ಜೋರಾಗಿ ಮಾತನಾಡಿದ್ದಕ್ಕೆ ಸಹೋದರರ ಮೇಲೆ ಹಲ್ಲೆ; ದೂರು

Update: 2020-05-07 04:49 GMT

ಮಂಗಳೂರು, ಮೇ 7: ಕ್ಷುಲ್ಲಕ ವಿಚಾರವಾಗಿ ಸಹೋದರರಿಬ್ಬರ ಮೇಲೆ ತಂಡವೊಂದು ಬುಧವಾರ ರಾತ್ರಿ ಚೂರಿಯಿಂದ ಇರಿದು ಹಲ್ಲೆ ನಡೆಸಿರುವ ಬಗ್ಗೆ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಸುರತ್ಕಲ್ ಇಡ್ಯ ನಿವಾಸಿಗಳಾದ ಕಾರ್ತಿಕ್ ಶೆಟ್ಟಿ ಮತ್ತು ಭರತ್ ಶೆಟ್ಟಿ ಹಲ್ಲೆಗೊಳಗಾದವರು. ಆರೋಪಿಗಳಾದ ರಾಹುಲ್, ಚರಣ್ ಹಾಗೂ ಇತರ ಮೂವರು ಹಲ್ಲೆ ನಡೆಸಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

ಕಾರ್ತಿಕ್ ಬುಧವಾರ ರಾತ್ರಿ 10:30ರ ಸುಮಾರಿಗೆ ತನ್ನ ತಮ್ಮ ಭರತ್ ಶೆಟ್ಟಿ ಜೊತೆಗೆ ಹೊಯ್ಗೆ ಬಝಾರ್ ಕಡೆಯಿಂದ ದಕ್ಕೆಯತ್ತ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ವೇಳೆ ಈ ಹಲ್ಲೆ ನಡೆದಿದೆ. ಹೊಯ್ಗೆ ಬಝಾರ್ ಭಗತ್ ಸಿಂಗ್ ರಸ್ತೆ ತಲುಪಿದಾಗ ಕಾರ್ತಿಕ್ ಮೊಬೈಲ್ ಫೋನ್‌ಗೆ ಕರೆಯೊಂದು ಬಂದಿದ್ದು, ಅವರು ಮಾತನಾಡುತ್ತಿದ್ದರೆನ್ನಲಾಗಿದೆ. ಈ ವೇಳೆ ಬೈಕಿನಲ್ಲಿ ಬಂದ ಆರೋಪಿ ರಾಹುಲ್ ಹಾಗೂ ಇನ್ನೋರ್ವ ಕಾರ್ತಿಕ್ ಜೋರಾಗಿ ಮೊಬೈಲ್ ಮಾತನಾಡುತ್ತಿರುವುದನ್ನು ಆಕ್ಷೇಪಿಸಿ ಬೈಯ್ದು ಹೋದರೆನ್ನಲಾಗಿದೆ. ಬಳಿಕ 10 ನಿಮಿಷಗಳ ಬಳಿಕ ಆರೋಪಿಗಳಾದ ರಾಹುಲ್, ಚರಣ್ ಹಾಗೂ ಇತರ ಮೂವರು ಎರಡು ಬೈಕ್‌ಗಳಲ್ಲಿ ಆಗಮಿಸಿ ಕಾರ್ತಿಕ್ ಮೇಲೆ ಚೂರಿಯಿಂದ ಹಲ್ಲೆ ನಡೆಸಿದ್ದರೆನ್ನಲಾಗಿದೆ. ಈ ವೇಳೆ ತಡೆಯಲೆತ್ನಿಸಿದ ಭರತ್ ಮೇಲೂ ತಂಡ ಚೂರಿ ದಾಳಿ ನಡೆಸಿದ್ದಲ್ಲದೆ, ಇಬ್ಬರಿಗೂ ಜೀವ ಬೆದರಿಕೆ ಹಾಕಿ ತೆರಳಿದೆ ಎನ್ನಲಾಗಿದೆ. ಚೂರಿ ದಾಳಿಯಿಂದ ಗಾಯಗೊಂಡ ಇಬ್ಬರು ಅತ್ತಾವರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಕಾರ್ತಿಕ್ ನೀಡಿರುವ ದೂರಿನಂತೆ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News