×
Ad

ದೇಶದ ಕಾನೂನು-ನ್ಯಾಯವ್ಯವಸ್ಥೆ ಶ್ರೀಮಂತರ, ಪ್ರಬಲರ ಪರ: ಸುಪ್ರೀಂ ಕೋರ್ಟ್ ನ್ಯಾಯಾಧೀಶ ದೀಪಕ್ ಗುಪ್ತಾ

Update: 2020-05-07 13:22 IST

ಹೊಸದಿಲ್ಲಿ : ‘ದೇಶದ ಕಾನೂನು ಹಾಗೂ  ನ್ಯಾಯ ವ್ಯವಸ್ಥೆ ಸಂಪೂರ್ಣವಾಗಿ ಶ್ರೀಮಂತರು ಹಾಗೂ ಪ್ರಬಲರ ಪರವಾಗಿದೆ’ ಎಂದು ಬುಧವಾರ ನಿವೃತ್ತರಾದ ಸುಪ್ರೀಂ ಕೋರ್ಟ್ ನ್ಯಾಯಾಧೀಶ ನ್ಯಾಯಮೂರ್ತಿ ದೀಪಕ್ ಗುಪ್ತಾ ಖೇದ ವ್ಯಕ್ತಪಡಿಸಿದ್ದಾರೆ.

“ಈಗಿನ ದಿನಗಳಲ್ಲಿ ಹಾಗೂ ಈಗಿನ ಕಾಲದಲ್ಲಿ ನ್ಯಾಯಾಧೀಶರು ದಂತದ ಗೋಪುರಗಳಲ್ಲಿ ಬಾಳಲು ಸಾಧ್ಯವಿಲ್ಲ, ಬದಲಾಗಿ  ಜಗತ್ತಿನಲ್ಲಿ ತಮ್ಮ ಸುತ್ತಲೂ ಏನು ನಡೆಯುತ್ತಿದೆ ಎಂಬ ಅರಿವು ಅವರಿಗಿರಬೇಕು'' ಎಂದು ಅವರು ಹೇಳಿದ್ದಾರೆ.

ಬುಧವಾರ ಜಸ್ಟಿಸ್ ದೀಪಕ್ ಗುಪ್ತಾ ಅವರ ಕೊನೆಯ ಕರ್ತವ್ಯ ದಿನವಾಗಿದ್ದರಿಂದ ನಿವೃತ್ತರಾಗುತ್ತಿರುವ ಅವರಿಗೆ ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಶನ್ ಆಯೋಜಿಸಿದ್ದ ವಿದಾಯ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.

“ಶ್ರೀಮಂತರು ಅಥವಾ ಪ್ರಭಾವಿಗಳು ಯಾರಾದರೂ ಜೈಲುಗಂಬಿಯ ಹಿಂದಿದ್ದರೆ  ಅವರು ಆಗಾಗ  ಉನ್ನತ ನ್ಯಾಯಾಲಯದ ಕದ ತಟ್ಟುತ್ತಾ ಇರುತ್ತಾರೆ. ಕೊನೆಗೆ ಅವರ ಪ್ರಕರಣದ  ವಿಚಾರಣೆಯನ್ನು ಶೀಘ್ರಗೊಳಿಸುವಂತಹ ಆದೇಶ ಬರುವ ತನಕ ಇದು ಮುಂದುವರಿಯುತ್ತದೆ. ಅದೇ ಸಮಯ ಬಡ ಕಕ್ಷಿಗಾರನೊಬ್ಬ ಉನ್ನತ ನ್ಯಾಯಾಲಯದ ಕದ ತಟ್ಟುವಷ್ಟು ಆರ್ಥಿಕವಾಗಿ ಸಬಲನಾಗಿಲ್ಲದೇ ಇರುವುದರಿಂದ ಆತನ ಪ್ರಕರಣ ವಿಚಾರಣೆ ಬಾಕಿಯುಳಿಯುತ್ತದೆ'' ಎಂದು ಅವರು ಹೇಳಿದರು.

ಬಡವರ ಪ್ರಕರಣಗಳ ವಿಚಾರಣೆ ಹೆಚ್ಚು ವಿಳಂಬವಾಗದಂತೆ ನೋಡಿಕೊಳ್ಳುವ ಹೊಣೆ ನ್ಯಾಯಾಂಗ ವ್ಯವಸ್ಥೆಗಿದೆ ಎಂದು ಅವರು ಹೇಳಿದರು.

“ನಿಜವಾಗಿಯೂ ನ್ಯಾಯ ದಕ್ಕಬೇಕೆಂದರೆ, ದುರ್ಬಲ ವರ್ಗಗಳಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ನ್ಯಾಯ ದೊರಕಬೇಕು'' ಎಂದು  ಹೇಳಿದ ಅವರು, ನ್ಯಾಯಾಧೀಶರು  ತಮ್ಮ ರಾಜಕೀಯ ಮತ್ತಿತರ ನಂಟುಗಳನ್ನು ಮರೆತು ಕೋರ್ಟುಗಳಲ್ಲಿ ಸಂಪೂರ್ಣವಾಗಿ ಕಾನೂನಿಗೆ ಬದ್ಧವಾಗಿ ವಾದಾಡಬೇಕೆಂದೂ ಸಲಹೆ ನೀಡಿದರು.

ಸ್ವತಂತ್ರ ಕಾರ್ಯನಿರ್ವಹಣೆ, ನಿರ್ಭೀತಿ ಹಾಗೂ ಅಸಾಮಾನ್ಯ ವಿಶ್ವಾಸಾರ್ಹತೆ ನ್ಯಾಯಾಂಗ ಮತ್ತು ನ್ಯಾಯಾಧೀಶರಿಗೆ ಅತ್ಯಗತ್ಯ  ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News