ದಿಲ್ಲಿ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷ ಝಫರುಲ್ ಇಸ್ಲಾಂ ನಿವಾಸದ ಮೇಲೆ ಪೊಲೀಸ್ ದಾಳಿ
ಹೊಸದಿಲ್ಲಿ: ದಿಲ್ಲಿ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಡಾ. ಝಫರುಲ್ ಇಸ್ಲಾಂ ಖಾನ್ ಅವರ ನಿವಾಸಕ್ಕೆ ದಿಲ್ಲಿ ಪೊಲೀಸ್ ಇಲಾಖೆಯ ವಿಶೇಷ ಸೆಲ್ ಅಧಿಕಾರಿಗಳು ಬುಧವಾರ ದಾಳಿ ನಡೆಸಿ ಅವರ ಮೊಬೈಲ್ ಫೋನ್ ವಶಪಡಿಸಿಕೊಂಡಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಾತ್ಮಕ ಪೋಸ್ಟ್ ಗಳನ್ನು ಮಾಡಲು ಈ ಫೋನ್ ಬಳಸಲಾಗಿತ್ತೆನ್ನಲಾಗಿದ್ದು ಒಂದು ವಾರದ ಹಿಂದೆ ಖಾನ್ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಾಗಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.
ಬುಧವಾರ ಸಂಜೆ ಖಾನ್ ನಿವಾಸಕ್ಕೆ ತಲುಪಿದ ಪೊಲೀಸ್ ತಂಡ ಅವರ ಕೆಲ ಕುಟುಂಬ ಸದಸ್ಯರನ್ನು ಪ್ರಶ್ನಿಸಿದ್ದಾರೆ. ಖಾನ್ ಆ ಸಂದರ್ಭ ಮನೆಯಲ್ಲಿರಲಿಲ್ಲ. ಪ್ರಾಥಮಿಕ ತನಿಖೆ ಪೂರ್ಣಗೊಂಡ ನಂತರ ಅವರನ್ನು ವಿಚಾರಣೆಗೆ ಕರೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ತಾನು 65 ವಯಸ್ಸು ಮೇಲ್ಪಟ್ಟವರಾಗಿರುವರಿಂದ ಹಾಗೂ ಹೃದ್ರೋಗಿಯಾಗಿರುವುದರಿಂದ ಸೈಬರ್ ಸೆಲ್‍ನ ಕಚೇರಿಗೆ ವಿಚಾರಣೆಗೆ ಹಾಜರಾಗಲು ಸಾಧ್ಯವಿಲ್ಲ ಎಂದು ಖಾನ್ ಅವರು ಸೈಬರ್ ಸೆಲ್ ಡಿಸಿಪಿಗೆ ಪತ್ರ ಬರೆದಿದ್ದಾರೆ. ಅದೇ ಸಮಯ ತಾವು ಫೋನ್ ಮೂಲಕ ಮಾತನಾಡಲು ಹಾಗೂ ಯಾವುದೇ ಪ್ರಶ್ನೆಗಳಿಗೆ ಉತ್ತರಿಸಲು ಸಿದ್ಧರಿರುವುದಾಗಿಯೂ ಅವರು ಹೇಳಿದ್ದಾರೆ.
ಸಾಂವಿಧಾನಿಕ ಹುದ್ದೆ ಹೊಂದಿದವರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಾಗಿರುವುದು ಇದೇ ಮೊದಲ ಬಾರಿಯಾಗಿದೆ. ಝಫರುಲ್ ಖಾನ್ ಅವರು ಖ್ಯಾತ ವಿದ್ವಾಂಸ, ನಾಗರಿಕ ಹಕ್ಕು ಕಾರ್ಯಕರ್ತರೂ ಪತ್ರಕರ್ತರೂ ಆಗಿದ್ದಾರೆ.