ಕೊರೋನ ದಾಳಿಯು ಪರ್ಲ್ ಹಾರ್ಬರ್, 9/11ರ ದಾಳಿಗಿಂತಲೂ ಭೀಕರ: ಟ್ರಂಪ್
ವಾಶಿಂಗ್ಟನ್, ಮೇ 7: ಅಮೆರಿಕದ ಮೇಲೆ ಕೊರೋನ ವೈರಸ್ ಸಾಂಕ್ರಾಮಿಕದ ದಾಳಿಯ ಪರಿಣಾಮವು, ದ್ವಿತೀಯ ಮಹಾಯುದ್ಧದ ಅವಧಿಯಲ್ಲಿ ನಡೆದ ‘ಪರ್ಲ್ ಹಾರ್ಬರ್’ ದಾಳಿ ಮತ್ತು 9/11 ಭಯೋತ್ಪಾದಕ ದಾಳಿಯ ಪರಿಣಾಮಗಳಿಗಿಂತಲೂ ಭೀಕರವಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ಹೇಳಿದ್ದಾರೆ.
‘’ಇದು ಪರ್ಲ್ ಹಾರ್ಬರ್ ದಾಳಿಗಿಂತಲೂ ಭೀಕರವಾಗಿದೆ. ಇದು ವಿಶ್ವ ವ್ಯಾಪಾರ ಕೇಂದ್ರದ ಮೇಲೆ ನಡೆದ ದಾಳಿಗಿಂತಲೂ ಭೀಕರವಾಗಿದೆ. ಹೀಗೆ ಆಗಬಾರದಾಗಿತ್ತು’’ ಎಂದು ಶ್ವೇತಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಹೇಳಿದರು.
1941ರಲ್ಲಿ ಹವಾಯಿ ದ್ವೀಪದ ಪರ್ಲ್ ಹಾರ್ಬರ್‌ನಲ್ಲಿದ್ದ ಅಮೆರಿಕದ ನೌಕಾ ನೆಲೆಯ ಮೇಲೆ ಜಪಾನ್ ದಾಳಿ ನಡೆಸಿದ ಅಚ್ಚರಿಯ ದಾಳಿಯ ಬಳಿಕ, ಅಮೆರಿಕ ಎರಡನೇ ಮಹಾಯುದ್ಧಕ್ಕೆ ನೆಗೆಯಿತು. 2001 ಸೆಪ್ಟಂಬರ್ 11ರಂದು ಅಲ್_ಖಾಯಿದ ಉಗ್ರರು ಅಮೆರಿಕದ ಮೇಲೆ ನಡೆಸಿದ ಭಯೋತ್ಪಾದಕ ದಾಳಿಯಲ್ಲಿ ಸುಮಾರು 3,000 ಮಂದಿ ಮೃತಪಟ್ಟಿದ್ದಾರೆ. ಈ ಪೈಕಿ ಹೆಚ್ಚಿನ ಪ್ರಮಾಣದ ಸಾವು-ನೋವುಗಳು ವಿಶ್ವ ವ್ಯಾಪಾರ ಕೇಂದ್ರದ ಅವಳಿ ಗೋಪುರಗಳ ಮೇಲೆ ನಡೆದ ದಾಳಿಯಲ್ಲಿ ಸಂಭವಿಸಿದವು.
ಶ್ವೇತಭವನದ ಕೊರೋನ ವೈರಸ್ ಕಾರ್ಯಪಡೆಯ ಕಾರ್ಯವನ್ನು ನಿಲ್ಲಿಸುವ ತನ್ನ ಸರಕಾರದ ಯೋಜನೆಯನ್ನು ಟ್ರಂಪ್ ಸಮರ್ಥಿಸಿಕೊಂಡಿದ್ದಾರೆ. ಇದರಿಂದ ಕೆಲವು ಅಮೆರಿಕನ್ನರ ಮೇಲೆ ತೀವ್ರ ಪರಿಣಾಮ ಆಗಬಹುದಾದರೂ, ದೇಶ ಮುಂದಿನ ಹಂತಕ್ಕೆ ಹೋಗಿ ಆರ್ಥಿಕ ಚಟುವಟಿಕೆಗಳನ್ನು ಆರಂಭಿಸುವ ಸಮಯ ಸನ್ನಿಹಿತವಾಗಿದೆ ಎಂದು ಅವರು ಹೇಳಿದ್ದಾರೆ.