×
Ad

ಛತ್ತೀಸ್‌ಗಢದಲ್ಲಿ ಎನ್‌ಕೌಂಟರ್: ಎಸ್‌ಐ ಮೃತ್ಯು, ನಾಲ್ವರು ಶಂಕಿತ ನಕ್ಸಲರು ಹತ

Update: 2020-05-09 23:08 IST

ರಾಯಪುರ: ಛತ್ತೀಸ್‌ಗಢದ ರಾಜನಂದನಗಾಂವ್ ಎಂಬಲ್ಲಿ ಶುಕ್ರವಾರ ರಾತ್ರಿ ನಕ್ಸಲರ ಜತೆ ನಡೆದ ಗುಂಡಿನ ಚಕಮಕಿಯಲ್ಲಿ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಮೃತಪಟ್ಟಿದ್ದಾರೆ. ಘಟನೆಯಲ್ಲಿ ನಾಲ್ವರು ಶಂಕಿತ ನಕ್ಸಲರು ಹತರಾಗಿದ್ದಾರೆ. ಪೊಲೀಸರು ಒಂದು ಎಕೆ-47 ಸೇರಿದಂತೆ ನಾಲ್ಕು ಬಂದೂಕು ವಶಪಡಿಸಿಕೊಂಡಿದ್ದಾರೆ.

ಪಾರ್ಧೋನಿ ಗ್ರಾಮದಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸುವ ವೇಳೆ ರಾತ್ರಿ 10.30ರ ಸುಮಾರಿಗೆ ಚಕಮಕಿ ನಡೆದಿದೆ. ಮಾವೋವಾದಿಗಳ ಬಗ್ಗೆ ಮಾಹಿತಿ ಇದ್ದು, ಅವರ ಪತ್ತೆಗೆ ತಂಡ ರಚಿಸಲಾಗಿತ್ತು. ಪಾರ್ಧೋನಿ ಪ್ರದೇಶವನ್ನು ಸುತ್ತುವರಿದಾಗ ಮಾವೋವಾದಿಗಳು ಗುಂಡಿನ ದಾಳಿ ಆರಂಭಿಸಿದರು ಎಂದು ರಾಜನಂದನಗಾಂವ್ ಎಸ್ಪಿ ಜಿತೇಂದ್ರ ಶುಕ್ಲಾ ಹೇಳಿದ್ದಾರೆ. ಪ್ರತಿಯಾಗಿ ಪೊಲೀಸರೂ ಗುಂಡಿನ ದಾಳಿ ನಡೆಸಿದರು. “ಕಾರ್ಯಾಚರಣೆಯಲ್ಲಿ ನಮ್ಮ ಸಬ್ ಇನ್‌ಸ್ಪೆಕ್ಟರ್ ಶ್ಯಾಮ್ ಕಿಶೋರ್ ಮೃತಪಟ್ಟರು” ಎಂದು ಅವರು ವಿವರಿಸಿದ್ದಾರೆ.

ಶರ್ಮಾ, ಸುರ್ಗುಜಾ ಜಿಲ್ಲೆಯವರಾಗಿದ್ದು, ಮದನ್‌ವಾಡಾ ಠಾಣೆಯ ಉಸ್ತುವಾರಿ ಹೊಂದಿದ್ದರು. ಪೊಲೀಸ್ ಅಧಿಕಾರಿಯ ಕುಟುಂಬಕ್ಕೆ ಛತ್ತೀಸ್‌ಗಢ ಸಿಎಂ ಭೂಪೇಶ್ ಭಗೇಲ್ ಸಾಂತ್ವನ ಹೇಳಿದ್ದಾರೆ.

ನಕ್ಸಲರನ್ನು ವಿಭಾಗೀಯ ಸಮಿತಿ ಸದಸ್ಯ ಅಶೋಕ್, ಸಿಪಿಐ (ಮಾವೋವಾದಿ) ಕ್ಷೇತ್ರ ಸಮಿತಿ ಸದಸ್ಯ ಕೃಷ್ಣ, ಸಂಘಟನೆಗೆ ಸೇರಿದ ಸರಿತಾ ಮತ್ತು ಪ್ರಮೀಳಾ ಎಂದು ಗುರುತಿಸಲಾಗಿದೆ ಎಂದು ಎಸ್ಪಿ ಹೇಳಿದ್ದಾರೆ.

ರಾಜನಂದಗಾಂವ್ ಹೊಸದಾಗಿ ರೂಪುಗೊಂಡ ಮಾವೋವಾದಿಗಳ ವಲಯದ ಭಾಗವಾಗಿದೆ. ನಕ್ಸಲರು ಹೊಸದಾಗಿ ಮಹಾರಾಷ್ಟ್ರ, ಮಧ್ಯಪ್ರದೇಶ ಹಾಗೂ ಛತ್ತೀಸ್‌ಗಢ ಗಡಿ ಪ್ರದೇಶದಲ್ಲಿ ರೆಡ್ ಕಾರಿಡಾರ್ ಸ್ಥಾಪಿಸಿದ್ದಾರೆ ಎನ್ನಲಾಗಿದೆ.

ಕಳೆದ ತಿಂಗಳು ಶಂಕಿತ ನಕ್ಸಲರು ಭದ್ರತಾ ಪಡೆಯ ಇಬ್ಬರು ಸಿಬ್ಬಂದಿಯನ್ನು ಹತ್ಯೆ ಮಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News