×
Ad

ದೇಶದಲ್ಲಿ ಕೇವಲ 6 ದಿನಗಳಲ್ಲಿ 20 ಸಾವಿರ ಮಂದಿಗೆ ಕೊರೋನ ಸೋಂಕು ದೃಢ !

Update: 2020-05-10 09:09 IST
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ: ಭಾರತದಲ್ಲಿ ಶನಿವಾರ ಸತತ ನಾಲ್ಕನೇ ದಿನ ಮೂರು ಸಾವಿರಕ್ಕಿಂತ ಅಧಿಕ ಕೊರೋನಾ ಸೋಂಕು ಪ್ರಕರಣಗಳು ದಾಖಲಾಗಿದ್ದು, ಸೋಂಕಿತರ ಒಟ್ಟು ಸಂಖ್ಯೆ 60 ಸಾವಿರವನ್ನು ದಾಟಿದೆ. ಮೇ 3ರಂದು 40 ಸಾವಿರ ಇದ್ದ ಪ್ರಕರಣಗಳ ಸಂಖ್ಯೆ ಕೇವಲ ಆರು ದಿನಗಳಲ್ಲಿ 60 ಸಾವಿರಕ್ಕೇರಿದೆ. 

ಶನಿವಾರ ಮೃತಪಟ್ಟ ಸೋಂಕಿತರ ಸಂಖ್ಯೆ 113. ಇದರೊಂದಿಗೆ ದೇಶದಲ್ಲಿ ಸೋಂಕಿಗೆ ಬಲಿಯಾದವರ ಸಂಖ್ಯೆ 2 ಸಾವಿರ ದಾಟಿದೆ.
ಮಹಾರಾಷ್ಟ್ರದಲ್ಲಿ ಗರಿಷ್ಠ (48) ಸಾವು ಸಂಭವಿಸಿದ್ದು, ಒಟ್ಟು ಸಾವಿನ ಶೇಕಡ 42ರಷ್ಟು ಸಾವು ಈ ರಾಜ್ಯದಲ್ಲೇ ವರದಿಯಾಗಿದೆ. 27 ಮಂದಿ ಮುಂಬೈ ಮಹಾನಗರದಲ್ಲೇ ಮೃತಪಟ್ಟಿದ್ದಾರೆ.

ಶನಿವಾರ 3,171 ಪ್ರಕರಣಗಳು ವರದಿಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 6,2915ಕ್ಕೇರಿದೆ. ಆದರೆ ಕಳೆದ ಮೂರು ದಿನಗಳಿಗೆ ಹೋಲಿಸಿದರೆ ಪ್ರಗತಿ ದರ ಇಳಿಕೆಯಾಗಿದೆ. ಎರಡು ದಿನಗಳ ಹಿಂದೆ ಸೋಂಕು ಬೆಳವಣಿಗೆ ದರ 7.1% ಇದ್ದುದು ಶನಿವಾರ 6.8%ಗೆ ಇಳಿದಿದೆ.

ಮಹಾರಾಷ್ಟ್ರದಲ್ಲಿ ಸೋಂಕಿತರ ಸಂಖ್ಯೆ 20 ಸಾವಿರ ದಾಟಿದ್ದು, ನಂತರದ ಮೂರು ಸ್ಥಾನಗಳಲ್ಲಿರುವ ರಾಜ್ಯಗಳ ಒಟ್ಟು ಸಂಖ್ಯೆಯ ಪ್ರಕರಣಗಳು ಈ ರಾಜ್ಯವೊಂದರಲ್ಲೇ ವರದಿಯಾಗಿವೆ.

ದೆಹಲಿಯಲ್ಲಿ 224 ಪ್ರಕರಣಗಳು ವರದಿಯಾಗಿದ್ದು, ಶುಕ್ರವಾರ ಇಲ್ಲಿ 338 ಪ್ರಕರಣಗಳು ಬೆಳಕಿಗೆ ಬಂದಿದ್ದವು. ಮಹಾರಾಷ್ಟ್ರದಲ್ಲಿ ಶನಿವಾರ 1,165 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 20,228 ಹಾಗೂ ಮೃತಪಟ್ಟವರ ಸಂಖ್ಯೆ 780 ಆಗಿದೆ.

ಗುಜರಾತ್ ನಲ್ಲಿ 23 ಸಾವು ಹಾಗೂ 394 ಹೊಸ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಇದರೊಂದಿಗೆ ಮೃತರ ಸಂಖ್ಯೆ 472ಕ್ಕೇರಿದ್ದು, ಒಟ್ಟು ಸೋಂಕಿತರ ಸಂಖ್ಯೆ 7,797 ಆಗಿದೆ. ಅಹ್ಮದಾಬಾದ್‍ನಲ್ಲಿ 280 ಹೊಸ ಪ್ರಕರಣಗಳು ಬೆಳಕಿಗೆ ಬಂದಿವೆ.

ಮತ್ತೊಂದು ಹಾಟ್‍ಸ್ಪಾಟ್ ಎನಿಸಿದ ತಮಿಳುನಾಡಿನಲ್ಲಿ ನಾಲ್ವರು ಮಹಿಳೆಯರನ್ನು ಸೋಂಕು ಬಲಿ ಪಡೆದಿದ್ದು, ಹೊಸದಾಗಿ 526 ಪ್ರಕರಣಗಳು ವರದಿಯಾಗಿವೆ. ರಾಜ್ಯದ ಒಟ್ಟು ಸೋಂಕಿತರ ಸಂಖ್ಯೆ 6,535 ಹಾಗೂ ಮೃತಪಟ್ಟವರ ಸಂಖ್ಯೆ 44ಕ್ಕೇರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News