×
Ad

ಲಾಕ್‍ಡೌನ್ ಕಟ್ಟುನಿಟ್ಟಾಗಿ ಜಾರಿಯಾದರೆ ದೇಶದಲ್ಲಿ ಕೊರೋನ ಪೀಡಿತರ ಸಂಖ್ಯೆ 30 ಲಕ್ಷಕ್ಕೆ ನಿಲ್ಲುವ ನಿರೀಕ್ಷೆ

Update: 2020-05-10 10:58 IST
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ: ಮೂರನೇ ಹಂತದ ಲಾಕ್‍ಡೌನ್ ಕಟ್ಟುನಿಟ್ಟಾಗಿ ಜಾರಿಯಾದಲ್ಲಿ, ಮುಂದಿನ ಅಕ್ಟೋಬರ್ ವೇಳೆಗೆ ಭಾರತದಲ್ಲಿ ಕೊರೋನ ಸೋಂಕಿತರ ಸಂಖ್ಯೆ 30 ಲಕ್ಷಕ್ಕೆ ನಿಲ್ಲುವ ನಿರೀಕ್ಷೆ ಇದೆ ಎಂದು ಮುಂಬೈ ಮೂಲದ ಅಧ್ಯಯನ ಸಂಸ್ಥೆಯೊಂದರ ವರದಿ ಹೇಳಿದೆ. ಮೊದಲ ಎರಡು ಹಂತದ ಲಾಕ್‍ಡೌನ್ ಜಾರಿಯಾಗದೇ ಇದ್ದಲ್ಲಿ, ಭಾರತದ ಕೊರೋನಾ ಸೋಂಕಿತರ ಸಂಖ್ಯೆ 17 ಕೋಟಿ ಆಗುತ್ತಿತ್ತು ಎಂದು ಇಂಟರ್‍ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ಪಾಪ್ಯುಲೇಶನ್ ಸೈನ್ಸ್ ಅಭಿಪ್ರಾಯಪಟ್ಟಿದೆ.

ಆದರೆ ಪ್ರಸ್ತುತ ಜಾರಿಯಲ್ಲಿರುವ ಲಾಕ್‍ಡೌನ್‍ನಿಂದ ದೊಡ್ಡ ಪ್ರಯೋಜನವೇನೂ ಇಲ್ಲ. ಮೇ 24ರವರೆಗೆ ಲಾಕ್‍ಡೌನ್ ವಿಸ್ತರಿಸಿದರೆ ಪುನರುತ್ಪತ್ತಿ ದರ 0.975 ಆಗಲಿದೆ ಹಾಗೂ 31ರವರೆಗೆ ಲಾಕ್‍ಡೌನ್ ವಿಸ್ತರಿಸಿದರೆ 0.945 ಆಗಲಿದೆ ಎಂದು ಅಂದಾಜಿಸಿದೆ. ಸೋಂಕು ಹರಡುವಿಕೆ ಪ್ರಮಾಣ ಇಳಿಮುಖವಾದಲ್ಲಿ ಇದು 0.01% ಆದಲ್ಲಿ ಭಾರತದಲ್ಲಿ ಜುಲೈ ವೇಳೆಗೆ ಸೋಂಕಿತರ ಸಂಖ್ಯೆ 1.4 ಲಕ್ಷಕ್ಕೆ ಸೀಮಿತವಾಗಬಹುದು ಎಂದು ವರದಿ ಹೇಳಿದೆ. ಮೇ 31ರವರೆಗೆ ಲಾಕ್‍ಡೌನ್ ವಿಸ್ತರಿಸುವ ಜತೆಗೆ ಕಟ್ಟುನಿಟ್ಟಾಗಿ ಜಾರಿಯಾಗಲು ಕ್ರಮ ಕೈಗೊಳ್ಳಬೇಕು ಎಂದು ವರದಿ ಸಲಹೆ ಮಾಡಿದೆ.

''ಈ ಅಂದಾಜಿಸುವಿಕೆಯಿಂದ ಸ್ಪಷ್ಟವಾಗಿ ತಿಳಿದುಬರುವ ಅಂಶವೆಂದರೆ ಗರಿಷ್ಠ ಸೋಂಕಿನ ದರವನ್ನು ಕಡಿಮೆ ಮಾಡುವಲ್ಲಿ ಎರಡು ಹಂತದ ಲಾಕ್‍ಡೌನ್ ಪ್ರಯೋಜನವಾಗಿದೆ. ಇಲ್ಲದಿದ್ದರೆ ದೇಶದಲ್ಲಿ ಗರಿಷ್ಠ ಸೋಂಕಿತರ ಸಂಖ್ಯೆ 140 ದಶಲಕ್ಷ ಆಗುತ್ತಿತ್ತು” ಎಂದು ಐಐಪಿಎಸ್ ಪ್ರೊಫೆಸರ್ ಅಭಿಷೇಕ್ ಸಿಂಗ್ ಹೇಳಿದ್ದಾರೆ. ಮೊದಲ ಎರಡು ಹಂತದ ಲಾಕ್‍ಡೌನ್ ಪರಿಣಾಮಕಾರಿಯಾದರೂ, ಮೂರನೇ ಹಂತದ ಲಾಕ್‍ಡೌನ್ ನಿರೀಕ್ಷಿತ ಫಲಿತಾಂಶ ನೀಡಿಲ್ಲ. ಅಕ್ಟೋಬರ್ ವೇಳೆಗೆ ಸೋಂಕಿತರ ಸಂಖ್ಯೆ ಎರಡು ಕೋಟಿಯನ್ನೂ ಮೀರಬಹುದು ಎಂದು ಅಂದಾಜಿಸಲಾಗಿದೆ.

ಲಾಕ್‍ಡೌನ್ ಪೂರ್ವದಲ್ಲಿ ಭಾರತದಲ್ಲಿ ಸೋಂಕು ಹರಡುವಿಕೆ ಪ್ರಮಾಣ 1.862ರಷ್ಟಿತ್ತು. ಅದೇ ಪ್ರವೃತ್ತಿ ಮುಂದುವರಿದಲ್ಲಿ ಗರಿಷ್ಠ 12.9% ಜನರು ಸೋಂಕಿತರಾಗುವ ಸಾಧ್ಯತೆ ಇತ್ತು. ಎರಡು ಲಾಕ್‍ಡೌನ್ ಅವಧಿಯಲ್ಲಿ ಸೋಂಕು ಹರಡುವಿಕೆ ಪ್ರಮಾಣ ಕ್ರಮವಾಗಿ 1.455 ಮತ್ತು 1.200ಗೆ ಇಳಿದಿದೆ ಎಂದು ಅಧ್ಯಯನ ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News