ಸಿಕ್ಕಿಂ ಗಡಿಭಾಗದಲ್ಲಿ ಭಾರತ-ಚೀನಿ ಸೈನಿಕರ ನಡುವೆ ಘರ್ಷಣೆ: ಹಲವರಿಗೆ ಗಾಯ

Update: 2020-05-10 18:07 GMT

ಹೊಸದಿಲ್ಲಿ,ಮೇ 10: ಉತ್ತರ ಸಿಕ್ಕಿಮ್‌ನಲ್ಲಿ 16,000 ಅಡಿಗೂ ಎತ್ತರದ ಪ್ರದೇಶದಲ್ಲಿ ಗಸ್ತುನಿರತರಾಗಿದ್ದ ಭಾರತದ ಕನಿಷ್ಠ 15-20 ಸೈನಿಕರು ಮತ್ತು ಚೀನಿ ಸೈನಿಕರು ಪರಸ್ಪರ ಹೊಡೆದಾಟಕ್ಕೆ ಇಳಿದ ಘಟನೆ ಶನಿವಾರ ನಡೆದಿದೆ.

ಉಭಯ ಪಡೆಗಳ ನಡುವೆ ಕಲ್ಲು ತೂರಾಟವೂ ನಡೆದಿರಬಹುದು ಎಂದು ವರದಿಗಳು ಹೇಳಿವೆ. ಈ ಪ್ರದೇಶದಲ್ಲಿ ವಾಸ್ತವ ನಿಯಂತ್ರಣ ರೇಖೆಯ ಕುರಿತು ಉಭಯ ದೇಶಗಳು ತಮ್ಮದೇ ಆದ ದೃಷ್ಟಿಕೋನಗಳನ್ನು ಹೊಂದಿವೆ. ಭಾರತೀಯ ಯೋಧರು ಇಡೀ ಘಟನೆಯ ವೀಡಿಯೊ ಚಿತ್ರೀಕರಿಸಿದ್ದಾರೆ.

ಉಭಯ ಕಡೆಗಳ ಆಕ್ರಮಕ ವರ್ತನೆಯಿಂದಾಗಿ ಘರ್ಷಣೆ ನಡೆದಿದ್ದು,ಯೋಧರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಸ್ಥಳೀಯ ಮಟ್ಟದಲ್ಲಿ ಮಾತುಕತೆ ಮತ್ತು ಸಂಧಾನಗಳ ಮೂಲಕ ಉದ್ವಿಗ್ನತೆಯನ್ನು ಶಮನಗೊಳಿಸಲಾಗಿದೆ ಎಂದು ಸೇನೆಯು ಹೇಳಿಕೆಯಲ್ಲಿ ತಿಳಿಸಿದೆ.

ಗಡಿಗಳು ನಿರ್ಧಾರವಾಗಿಲ್ಲ, ಹೀಗಾಗಿ ಗಡಿ ಕಾವಲು ಪಡೆಗಳ ನಡುವೆ ತಾತ್ಕಾಲಿಕ ಮತ್ತು ಅಲ್ಪಾವಧಿಯ ಬಿಕ್ಕಟ್ಟುಗಳು ಉಂಟಾಗುತ್ತಿರುತ್ತವೆ. ಸೈನಿಕರು ಸ್ಥಾಪಿತ ಶಿಷ್ಟಾಚಾರಗಳನ್ವಯ ಇಂತಹ ಬಿಕ್ಕಟ್ಟುಗಳನ್ನು ಪರಸ್ಪರ ಬಗೆಹರಿಸಿಕೊಳ್ಳುತ್ತಾರೆ ಎಂದೂ ಸೇನೆಯು ಹೇಳಿದೆ.

ಈ ಹಿಂದೆ ಇಂತಹುದೇ ಬಿಕ್ಕಟ್ಟು 2017ರಲ್ಲಿ ಉಂಟಾಗಿತ್ತು. ಆಗ ಲಡಾಖ್‌ನ ಪ್ಯಾಂಗಾಂಗ್ ಸರೋವರದ ಪೂರ್ವ ದಂಡೆಯ ಪ್ರದೇಶದಲ್ಲಿ ಭಾರತೀಯ ಮತ್ತು ಚೀನಿ ಸೈನಿಕರು ಪರಸ್ಪರ್ ಹೊಯ್-ಕೈಗಿಳಿದಿದ್ದರು. ಅದೇ ವರ್ಷ ಡೋಕ್ಲಾಂ ಪ್ರಸ್ತಭೂಮಿಯಲ್ಲಿ ಉಂಟಾಗಿದ್ದ ಬಿಕ್ಕಟ್ಟು 73 ದಿನಗಳ ಕಾಲ ಮುಂದುವರಿದಿತ್ತು. ಭಾರತದ ಮಿತ್ರರಾಷ್ಟ್ರ ಭೂತಾನ್‌ಗೆ ಸೇರಿದ ಈ ಪ್ರದೇಶವು ತನ್ನದು ಎಂದು ಚೀನಾ ವಾದಿಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News