ಬುಕ್ಕಿಗಳ ಭೇಟಿ ವಿವರ ಬಹಿರಂಗಕ್ಕೆ ಉಮರ್ ಅಕ್ಮಲ್ ನಕಾರ: ಪಿಸಿಬಿ

Update: 2020-05-11 05:42 GMT

ಕರಾಚಿ, ಮೇ 11: ಪಾಕಿಸ್ತಾನದ ಬ್ಯಾಟ್ಸ್ ಮನ್ ಉಮರ್ ಅಕ್ಮಲ್ ಅವರು ಶಿಸ್ತು ಸಮಿತಿಯ ಮುಂದೆ ಶಂಕಿತ ಬುಕ್ಕಿಗಳನ್ನು ಎರಡು ಬಾರಿ ಭೇಟಿಯಾಗಿ ಮಾತುಕತೆ ನಡೆಸಿರುವ ವಿವರಗಳನ್ನು ಬಹಿರಂಗಪಡಿಸಲು ನಿರಾಕರಿಸಿದ್ದಾರೆ. ಇದು ವಿಚಾರಣೆಯ ನಂತರ ಅವರಿಗೆ ಮೂರು ವರ್ಷಗಳ ನಿಷೇಧವನ್ನು ನೀಡಿತು ಎಂದು ಪಿಸಿಬಿ ಮೂಲಗಳು ತಿಳಿಸಿವೆ.

ಮೂಲಗಳ ಪ್ರಕಾರ, ಅಕ್ಮಲ್ ಅವರು ಲಾಹೋರ್‌ನ ಡಿಫೆನ್ಸ್ ಹೌಸಿಂಗ್ ಸೊಸೈಟಿಯಲ್ಲಿ ಇಬ್ಬರು ಅಪರಿಚಿತ ವ್ಯಕ್ತಿಗಳನ್ನು ಭೇಟಿಯಾಗಿದ್ದಾರೆ ‘‘ಡಿಎಚ್‌ಎಯಲ್ಲಿ ಸ್ನೇಹಿತರು ಆಯೋಜಿಸಿದ ಪಾರ್ಟಿಗಳಲ್ಲಿ ಈ ಇಬ್ಬರು ಮಹನೀಯರು ತಮ್ಮನ್ನು ಭೇಟಿಯಾದರು ಎಂದು ಉಮರ್ ಹೇಳಿಕೊಂಡಿದ್ದಾರೆ. ಆದರೆ ಈ ಭೇಟಿಯಲ್ಲಿ ಚರ್ಚಿಸಿದ ವಿಷಯವನ್ನು ಭ್ರಷ್ಟಾಚಾರ ನಿಗ್ರಹ ಅಧಿಕಾರಿಗಳಿಗೆ ಹೇಳಲು ನಿರಾಕರಿಸಿದ್ದಾರೆ’’ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಮೂಲಗಳು ತಿಳಿಸಿವೆ.

ಕರಾಚಿಯಲ್ಲಿ ಕಳೆದ ಫೆಬ್ರವರಿಯಲ್ಲಿ ಭ್ರಷ್ಟಾಚಾರ ನಿಗ್ರಹ ವಿಭಾಗದ ಅಧಿಕಾರಿಗಳು ತಮ್ಮ ವರದಿಯನ್ನು ಮೊದಲ ಬಾರಿಗೆ ಮಂಡಿಸಿದಾಗ ಅಕ್ಮಲ್ ಅವರು ಬುಕ್ಕಿಗಳ ಭೇಟಿಯನ್ನು ವರದಿ ಮಾಡದಿರುವ ಮೂಲಕ ತಾನು ತಪ್ಪು ಮಾಡಿದೆ ಎಂದು ಒಪ್ಪಿಕೊಂಡರು. ಆದರೆ ಯಾವುದೇ ವಿವರಗಳನ್ನು ನೀಡುವುದರಿಂದ ಜಾರಿಕೊಂಡರು. ಪಿಸಿಬಿ ಭ್ರಷ್ಟಾಚಾರ ನಿಗ್ರಹ ಸಂಹಿತೆಯಡಿ ಎರಡು ಆರೋಪಗಳಲ್ಲಿ ಅಕ್ಮಲ್ ತಪ್ಪಿತಸ್ಥರೆಂದು ಸಾಬೀತಾಗಿದೆ. ಈ ಕಾರಣದಿಂದಾಗಿ ಕಳೆದ ಎಪ್ರಿಲ್ 27ರಿಂದ 2023ರ ಫೆಬ್ರವರಿ 19ರವರೆಗೆ ಕ್ರಿಕೆಟ್ ಚಟುವಟಿಕೆಗಳಿಗೆ ಅವರಿಗೆ ನಿಷೇಧ ಹೇರಲಾಗಿದೆ.

ಎರಡು ಮೂರು ವರ್ಷಗಳ ನಿಷೇಧದ ವಿರುದ್ಧ ಮೇಲ್ಮನವಿ ಸಲ್ಲಿಸಲು ಅಕ್ಮಲ್‌ಗೆ 14 ದಿನಗಳ ಕಾಲಾವಕಾಶವಿದೆ ಮತ್ತು ಅದನ್ನು ಕೇಳಲು ಪಿಸಿಬಿ ಸ್ವತಂತ್ರ ವಿಚಾರಣಾ ಸಮಿತಿಯನ್ನು ನೇಮಿಸುತ್ತದೆ. ಅಕ್ಮಲ್ ಈ ಬಗ್ಗೆ ಕೆಲವು ವಕೀಲರೊಂದಿಗೆ ಸಮಾಲೋಚಿಸಲು ಪ್ರಾರಂಭಿಸಿದ್ದಾರೆ ಮತ್ತು ಮೇಲ್ಮನವಿ ಸಲ್ಲಿಸಲಿದ್ದಾರೆಂದು ಅಕ್ಮಲ್ ಅವರ ಆಪ್ತ ಮೂಲಗಳು ತಿಳಿಸಿವೆ.

ಎಪ್ರಿಲ್ 27ರಂದು ಶಿಸ್ತು ಸಮಿತಿ ವಿಚಾರಣೆಯ ಮೊದಲು ಅಕ್ಮಲ್ ಸಹ ಸಂಘರ್ಷದ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಪಿಸಿಬಿ ತಿಳಿಸಿದೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಶಿಸ್ತು ಸಮಿತಿಯ ಅಧ್ಯಕ್ಷ, ನ್ಯಾಯಮೂರ್ತಿ (ನಿವೃತ್ತ) ಫಜಲ್-ಎ-ಮಿರಾನ್ ಚೌಹಾಣ್ ಅವರು ತಮ್ಮ ವಿವರವಾದ ತೀರ್ಪಿನಲ್ಲಿ ಅಕ್ಮಲ್ ಪಶ್ಚಾತ್ತಾಪವನ್ನು ತೋರಿಸಲಿಲ್ಲ ಅಥವಾ ಭ್ರಷ್ಟ ವಿಧಾನಗಳನ್ನು ವರದಿ ಮಾಡಲು ವಿಫಲವಾದ ಕಾರಣ ಕ್ಷಮೆಯಾಚಿಸದಿರುವುದನ್ನು ಗಮನಿಸಿದ್ದಾರೆ.

ಅಕ್ಮಲ್ ಅವರು ನ್ಯಾಯಮೂರ್ತಿ ಚೌಹಾಣ್ ಅವರಲ್ಲಿ ತಪ್ಪಿನ ಬಗ್ಗೆ ಮೃದು ಧೋರಣೆ, ದಂಡ ಮತ್ತು ನಿಷೇಧದಲ್ಲಿ ರಿಯಾಯತಿ ತೋರಿಸುವಂತೆ ಮನವಿ ಮಾಡಿದ್ದರು.

ಪಾಕಿಸ್ತಾನ ಸೂಪರ್ ಲೀಗ್‌ನ ಮುನ್ನಾ ದಿನದಂದು ಅಕ್ಮಲ್ ಅವರನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗಿತ್ತು. ಮಾರ್ಚ್ 17ರಂದು ಪಿಸಿಬಿ ಭ್ರಷ್ಟಾಚಾರ ನಿಗ್ರಹ ಸಂಹಿತೆಯ 2.4.4ನೇ ವಿಧಿ ಉಲ್ಲಂಘನೆ ಆರೋಪದ ಮೇಲೆ ಎರಡು ಪ್ರಕರಣಗಳನ್ನು ದಾಖಲಿಸಿಕೊಂಡಿದೆ.

ಅಕ್ಮಲ್ ಪಾಕ್‌ನ ಈಗಿನ ನಾಯಕ ಬಾಬರ್ ಆಝಮ್ ಅವರ ಸೋದರ ಸಂಬಂಧಿಯಾಗಿದ್ದಾರೆ. ಪಾಕಿಸ್ತಾನದ ಮಾಜಿ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಕಮ್ರಾನ್ ಅಕ್ಮಲ್ ಅವರ ಕಿರಿಯ ಸಹೋದರ ಅಕ್ಮಲ್ ಅವರು ಅಕ್ಟೋಬರ್‌ನಲ್ಲಿ ಕೊನೆಯ ಬಾರಿಗೆ ಪಾಕಿಸ್ತಾನ ಪರ ಆಡಿದ್ದರು. ಅವರು 16 ಟೆಸ್ಟ್, 121 ಏಕದಿನ ಮತ್ತು 84 ಟ್ವೆಂಟಿ-20 ಗಳಲ್ಲಿ ಕ್ರಮವಾಗಿ 1,003, 3,194 ಮತ್ತು 1,690 ರನ್ ಗಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News