ತಿಲಕರತ್ನೆ ದಿಲ್ಶನ್‌ರ ಸಾರ್ವಕಾಲಿಕ ಶ್ರೇಷ್ಠ ಏಕದಿನ ತಂಡದಲ್ಲಿ ಒಬ್ಬನೇ ಭಾರತೀಯ !

Update: 2020-05-11 05:49 GMT

ಹೊಸದಿಲ್ಲಿ, ಮೇ 11: ಕೊರೋನ ವೈರಸ್ ಕಾರಣ ದಿಂದಾಗಿ ಜಗತ್ತಿನ ಎಲ್ಲಾ ಕ್ರಿಕೆಟ್ ಚಟುವಟಿಕೆಗಳು ಸ್ಥಗಿತಗೊಂಡಿವೆ. ಈ ಸಂದರ್ಭದಲ್ಲಿ ಶ್ರೀಲಂಕಾದ ಮಾಜಿ ಬ್ಯಾಟ್ಸ್‌ಮನ್ ತಿಲಕರತ್ನೆ ದಿಲ್ಶನ್ ಅವರು ಆಯ್ಕೆ ಮಾಡಿರುವ ಸಾರ್ವಕಾಲಿಕ ಶ್ರೇಷ್ಠ ಏಕದಿನ ತಂಡದಲ್ಲಿ ಭಾರತದ ಆಟಗಾರರ ಪೈಕಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಅವರಿಗೆ ಮಾತ್ರ ಸ್ಥಾನ ನೀಡಿದ್ದಾರೆ.

43ರ ಹರೆಯದ ದಿಲ್ಶನ್ ಅವರು ತನ್ನ ತಂಡದ ಮಾಜಿ ಸಹ ಆಟಗಾರ ಸನತ್ ಜಯಸೂರ್ಯ ಮತ್ತು ಸಚಿನ್ ತೆಂಡುಲ್ಕರ್ ಅವರನ್ನು ಆರಂಭಿಕ ಜೋಡಿಯಾಗಿ ಆಯ್ಕೆ ಮಾಡಿದ್ದಾರೆ.

ವೆಸ್ಟ್ ಇಂಡೀಸ್ ದಂತಕಥೆ ಬ್ರಿಯಾನ್ ಲಾರಾ ಮತ್ತು ಶ್ರೀಲಂಕಾದ ಗ್ರೇಟ್ ಮಹೇಲ ಜಯವರ್ಧನೆ ಅವರಿಗೆ ಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನ ನೀಡಲಾಗಿದೆ. ಆಸ್ಟ್ರೇಲಿಯದ ಮಾಜಿ ನಾಯಕ ರಿಕಿ ಪಾಂಟಿಂಗ್ ಮತ್ತು ದಕ್ಷಿಣ ಆಫ್ರಿಕದ ಮಾಜಿ ಆಲ್‌ರೌಂಡರ್ ಜಾಕ್ ಕಾಲಿಸ್ ಮಧ್ಯಮ ಕ್ರಮಾಂಕದಲ್ಲಿ ಸ್ಥಾನ ಪಡೆದಿದ್ದಾರೆ. ದಿಲ್ಶನ್ ಅವರ ಅತ್ಯುತ್ತಮ ಏಕದಿನ ಇಲೆವೆನ್ ತಂಡದ ನಾಯಕನಾಗಿ ಪಾಂಟಿಂಗ್ ಅವರನ್ನು ನೇಮಿಸಲಾಗಿದೆ ಎಂದು ಇಎಸ್ಪಿಎನ್ ಕ್ರಿಕ್‌ಇನ್ಫೋ ವರದಿ ಮಾಡಿದೆ. ದಕ್ಷಿಣ ಆಫ್ರಿಕದ ಮಾಜಿ ನಾಯಕ ಎಬಿ ಡಿವಿಲಿಯರ್ಸ್ ಅವರು ದಿಲ್ಶನ್ ತಂಡದಲ್ಲಿ ಏಳನೇ ಸ್ಥಾನವನ್ನು ಪಡೆದಿದ್ದಾರೆ. ಡಿವಿಲಿಯರ್ಸ್ ಅವರನ್ನು ತಂಡದ ವಿಕೆಟ್ ಕೀಪರ್ ಎಂದು ಹೆಸರಿಸಲಾಗಿದೆ.

ದಿಲ್ಶನ್ ತಮ್ಮ ವೃತ್ತಿಜೀವನದಲ್ಲಿ 10,000 ಕ್ಕೂ ಹೆಚ್ಚು ಏಕದಿನ ರನ್ ಗಳಿಸಿದ್ದಾರೆ. ತನ್ನ ತಂಡದಲ್ಲಿ ದಿಲ್ಶನ್ ಅವರು ಇಬ್ಬರು ವೇಗಿಗಳನ್ನು ಮತ್ತು ಅನೇಕ ಸ್ಪಿನ್ನರ್‌ಗಳಿಗೆ ಸ್ಥಾನ ನೀಡಿದ್ದಾರೆ.

ಪಾಕಿಸ್ತಾನದ ಮಾಜಿ ವೇಗದ ಬೌಲರ್ ವಸೀಂ ಅಕ್ರಮ್, ಆಸ್ಟ್ರೇಲಿಯದ ಶೇನ್ ವಾರ್ನ್, ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ ಮತ್ತು ವೆಸ್ಟ್ ಇಂಡೀಸ್‌ನ ಕರ್ಟ್ನಿ ವಾಲ್ಶ್ ಬೌಲಿಂಗ್ ವಿಭಾಗದಲ್ಲಿ ಇದ್ದಾರೆ.

ಪೂರ್ಣ ತಂಡದ ವಿವರ ಇಂತಿವೆ:

ಸನತ್ ಜಯಸೂರ್ಯ, ಸಚಿನ್ ತೆಂಡುಲ್ಕರ್, ಬ್ರಿಯಾನ್ ಲಾರಾ, ಮಹೇಲ ಜಯವರ್ಧನೆ, ರಿಕಿ ಪಾಂಟಿಂಗ್ (ನಾಯಕ), ಜಾಕ್ ಕಾಲಿಸ್, ಎಬಿ ಡಿವಿಲಿಯರ್ಸ್ (ವಿಕೆಟ್ ಕೀಪರ್), ವಸೀಂ ಅಕ್ರಮ್, ಶೇನ್ ವಾರ್ನ್, ಮುತ್ತಯ್ಯ ಮುರಳೀಧರನ್, ಕರ್ಟ್ನಿ ವಾಲ್ಶ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News