ಮೈಂದಡ್ಕ, ತಾಳೆಹಿತ್ಲು ರಸ್ತೆಯ ಕಾಂಕ್ರೀಟ್ ಕಾಮಗಾರಿಯಲ್ಲಿ ಬಿರುಕು

Update: 2020-05-11 10:20 GMT

ಉಪ್ಪಿನಂಗಡಿ: 34 ನೆಕ್ಕಿಲಾಡಿ ಗ್ರಾಮದ ಮೈಂದಡ್ಕ- ತಾಳೆಹಿತ್ಲು ರಸ್ತೆಯು ಕಾಂಕ್ರೀಟ್ ಕಾಮಗಾರಿಗೊಂಡು ವರ್ಷವಾಗುವ ಮೊದಲೇ ಬಿರುಕು ಬಿಟ್ಟಿದ್ದು, ಇದು ಕಳಪೆ ಕಾಮಗಾರಿಗೆ ಸಾಕ್ಷಿಯಾಗಿದೆ ಎಂಬ ಆರೋಪ ಸಾರ್ವಜನಿಕ ವಲಯದಿಂದ ಕೇಳಿ ಬಂದಿದೆ.

ಪುತ್ತೂರು ತಾಲೂಕು 34 ನೆಕ್ಕಿಲಾಡಿಯ ಮೈಂದಡ್ಕ- ತಾಳೆಹಿತ್ಲು ಪರಿಶಿಷ್ಟ ಪಂಗಡ ಕಾಲನಿ ರಸ್ತೆ ಅಭಿವೃದ್ಧಿಗೆ ಶಾಸಕ ಸಂಜೀವ ಮಠಂದೂರು ಅವರು 10 ಲಕ್ಷ ರೂಪಾಯಿ ಅನುದಾನ ನೀಡಿದ್ದರು. 2018-19ರಲ್ಲಿ ಈ ಕಾಮಗಾರಿಯು ಅನುಮೋದನೆಗೊಂಡಿದ್ದು, ಇಲ್ಲಿನ 205 ಮೀ. ರಸ್ತೆಗೆ ಕಾಂಕ್ರೀಟ್ ಕಾಮಗಾರಿ ನಡೆಸಲಾಗಿತ್ತು. ಆದರೆ ಇಲ್ಲಿ ಕಳಪೆ ಕಾಮಗಾರಿ ನಡೆದಿದ್ದು, ರಸ್ತೆ ನಿರ್ಮಾಣಗೊಂಡು ವರ್ಷವಾಗುವ ಮೊದಲೇ ಈ ರಸ್ತೆಯು ಮಧ್ಯದಲ್ಲೇ ಬಿರುಕು ಬಿಟ್ಟಿದೆ. ರಸ್ತೆಯ ಮಧ್ಯಭಾಗದಲ್ಲಿ ಉದ್ದಕ್ಕೆ ರಸ್ತೆಯು ಬಿರುಕು ಬಿಡುತ್ತಾ ಸಾಗಿದ್ದು, ಈ ಬಿರುಕು ದಿನ ಹೋದ ಹಾಗೆ ಅಗಲವಾಗುತ್ತಲೇ ಹೋಗುತ್ತಿದೆ ಎಂದು ಸಾರ್ವಜನಿಕರು ಆರೋಪಿಸುತ್ತಾರೆ.

ಮಳೆಗಾಲದಲ್ಲಿ ಭೀತಿ: ರಸ್ತೆ ಕಾಂಕ್ರೀಟ್ ಕಾಮಗಾರಿ ಸಂದರ್ಭ ಇಲ್ಲಿ ಚರಂಡಿ ವ್ಯವಸ್ಥೆಯನ್ನು ಗುತ್ತಿಗೆದಾರರು ಮಾಡಿಲ್ಲ. ಇದ್ದ ಚರಂಡಿಯಲ್ಲಿಯೂ ಗಿಡ-ಗಂಟಿಗಳು ಆವರಿಸಿ, ನೀರ ಹರಿವಿಗೆ ತಡೆಯಾಗುತ್ತಿದ್ದು, ಇದನ್ನು ಸ್ವಚ್ಛಗೊಳಿಸುವ ಕೆಲಸಕ್ಕೆ ಗ್ರಾ.ಪಂ. ಮುಂದಾಗಿಲ್ಲ. ಇದರಿಂದ ಈ ಬಾರಿ ಮಳೆಗಾಲದಲ್ಲಿ ಇಳುಜಾರು ಪ್ರದೇಶದಲ್ಲಿರುವ ಈ ರಸ್ತೆಯ ಮೇಲೆಯೇ ಮಳೆ ನೀರು ಹರಿದು ಹೋಗುವ ಸಾಧ್ಯತೆಯಿದ್ದು, ಆ ಸಂದರ್ಭ ಮಳೆನೀರು ರಸ್ತೆಯ ಬಿರುಕಿನ ಮೂಲಕ ಭೂಮಿಯ ಒಳಪದರಕ್ಕೆ ಹೋಗಿ ರಸ್ತೆಯೇ ಇಬ್ಭಾಗವಾಗುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ ಎಂಬ ಆತಂಕವನ್ನು ಸಾರ್ವಜನಿಕರು ವ್ಯಕ್ತಪಡಿಸುತ್ತಿದ್ದಾರೆ.

ಕ್ಯೂರಿಂಗ್ ಆಗದ್ದು ಕಾರಣವೇ?: ಕಾಂಕ್ರೀಟ್ ರಸ್ತೆ ಮಾಡಿದ ಬಳಿಕ ಕೆಲವು ದಿನ ಅದಕ್ಕೆ ನೀರು ಹಾಯಿಸಿ ಅದು ಸರಿಯಾಗಿ ಕ್ಯೂರಿಂಗ್ ಆಗುವಂತೆ ನೋಡಿಕೊಳ್ಳಬೇಕು. ಆದರೆ ಇಲ್ಲಿ ಸರಿಯಾಗಿ ಕ್ಯೂರಿಂಗ್ ನಡೆದಿಲ್ಲ. ಇದುವೇ ಹೀಗೆ ರಸ್ತೆ ಬಿರುಕು ಬಿಡಲು ಕಾರಣ ಎನ್ನುತ್ತಾರೆ ಸಾರ್ವಜನಿಕರು.

ಒಟ್ಟಿನಲ್ಲಿ ಉತ್ತಮ ಬಾಳಿಕೆ ಬರುವ ಕಾಂಕ್ರೀಟ್ ರಸ್ತೆಯು ಗುತ್ತಿಗೆದಾರರ ಕಳಪೆ ಕಾಮಗಾರಿಯಿಂದಾಗಿ ವರ್ಷ ತುಂಬುವ ಬಿರುಕು ಬಿಟ್ಟಿದ್ದು, 10 ಲಕ್ಷ ರೂಪಾಯಿ ಸಾರ್ವಜನಿಕರ ಹಣ ವ್ಯರ್ಥಾ ಪೋಲಾಗುವಂತಾಗಿದೆ.

ಈ ರಸ್ತೆಯು ಗುಣಮಟ್ಟದಿಂದ ಕೂಡಿರದೇ ತೀರಾ ಕಳಪೆಯಾಗಿದ್ದು, ಕಾಟಾಚಾರಕ್ಕೆ ಮಾಡಿ ಮುಗಿಸಿದಂತಿದೆ. ಕಾಂಕ್ರೀಟ್ ರಸ್ತೆಯನ್ನು ಮಾಡುವಾಗ ರಸ್ತೆಯನ್ನು ಲೆವೆಲಿಂಗ್ ಮಾಡಿ ಶೀಟ್ ಹಾಕಿ ಬಳಿಕ ಅದರ ಮೇಲೆ ಕಾಂಕ್ರೀಟ್ ಹಾಕಬೇಕು. ಸಿಮೆಂಟ್, ಜಲ್ಲಿ, ಮರಳಿನ ಮಿಶ್ರಣವನ್ನು ಸರಿಯಾದ ಪ್ರಮಾಣದಲ್ಲಿ ಹಾಕಬೇಕು. ರಸ್ತೆ ಆದ ಬಳಿಕ ಅದನ್ನು ಬಹಳ ದಿನ ನೀರು ಹಾಕಿ ಕ್ಯೂರಿಂಗ್ ಮಾಡಬೇಕು. ಆಗ ಮಾತ್ರ ಕಾಂಕ್ರೀಟ್ ರಸ್ತೆಯು ಸುಮಾರು 30-40 ವರ್ಷ ಬಾಳಿಕೆ ಬರಲು ಸಾಧ್ಯ. ಆದರೆ ಇಲ್ಲಿ ಅದೆಲ್ಲಾ ನಡೆದಿಲ್ಲಾ ಎಂದು ಕಾಣುತ್ತದೆ. ಇಲ್ಲಿ ರಸ್ತೆಯ ಬದಿ ಮಣ್ಣು ತುಂಬಿಸುವ ಕೆಲಸವೂ ಆಗಿಲ್ಲ. ರಸ್ತೆಯನ್ನು ಅಪೂರ್ಣಗೊಳಿಸಿ ತೆರಳಿದಂತಿದೆ. ಆದ್ದರಿಂದಲೇ ವರ್ಷವಾಗುವ ಮೊದಲೇ ಈ ರಸ್ತೆ ಒಡೆದು, ಸಾರ್ವಜನಿಕರ ಹಣ ಪೋಲಾಗುವಂತಾಗಿದೆ. ಮಳೆಗಾಲದಲ್ಲಿ ರಸ್ತೆಯ ಬಿರುಕು ಇನ್ನಷ್ಟು ಹೆಚ್ಚಾಗಿ ರಸ್ತೆಯೇ ಕುಸಿದು ಬೀಳುವ ಭೀತಿ ಇದೆ. ಆದ್ದರಿಂದ ಪ್ರಯೋಗಾಲಯದಲ್ಲಿ ಈ ರಸ್ತೆಯ ಗುಣಮಟ್ಟ ಪರೀಕ್ಷಿಸಬೇಕು. ಕಳಪೆ ಕಾಮಗಾರಿಗೆ ಕಾರಣರಾದವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕು.

- ರೂಪೇಶ್ ರೈ ಅಲಿಮಾರ್, 
ಸಂಚಾಲಕರು, ಕರ್ನಾಟಕ ರಾಜ್ಯ ರೈತ ಸಂಘ
ದ.ಕ. ಜಿಲ್ಲೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News