ಪ್ಯಾರಾ ಅಥ್ಲೀಟ್ ದೀಪಾ ಮಲಿಕ್ ವಿದಾಯ

Update: 2020-05-12 08:34 GMT

ಹೊಸದಿಲ್ಲಿ, ಮೇ 11: ರಾಷ್ಟ್ರೀಯ ಕ್ರೀಡಾ ಸಂಹಿತೆಯ ಮಾರ್ಗಸೂಚಿಯನ್ನು ಅನುಸರಿಸಿದ ಪ್ಯಾರಾ ಅಥ್ಲೀಟ್ ದೀಪಾ ಮಲಿಕ್ ಭಾರತದ ಪ್ಯಾರಾಲಿಂಪಿಕ್ಸ್ ಸಮಿತಿಯ(ಪಿಸಿಐ) ಅಧ್ಯಕ್ಷ ಸ್ಥಾನ ಉಳಿಸಿಕೊಳ್ಳಲು ಸೋಮವಾರ ನಿವೃತ್ತಿ ನಿರ್ಧಾರ ಪ್ರಕಟಿಸಿದರು.

‘‘ಚುನಾವಣೆಯ ಉದ್ದೇಶದಿಂದ ದೀರ್ಘಸಮಯದ ಹಿಂದೆಯೇ ಪಿಸಿಐಗೆ ಪತ್ರವನ್ನು ಸಲ್ಲಿಸಿದ್ದೆ, ನೂತನ ಸಮಿತಿಯ ಸಿಂಧುತ್ವದ ಬಗ್ಗೆ ಹೈಕೋರ್ಟ್ ಆದೇಶವನ್ನು ನಿರೀಕ್ಷಿಸುತ್ತಿದ್ದೆ. ಇದೀಗ ಸಕ್ರಿಯ ಕ್ರೀಡೆಗಳಿಂದ ನಿವೃತ್ತಿ ಘೋಷಿಸಲು ನಿರ್ಧರಿಸಿದ್ದೇನೆ. ಪ್ಯಾರಾ ಸ್ಪೋರ್ಟ್ಸ್‌ನಲ್ಲಿ ಸೇವೆ ಸಲ್ಲಿಸುವ ಸಮಯಬಂದಿದ್ದು, ಇತರರಿಗೆ ಸಾಧಿಸಲು ಬೆಂಬಲ ನೀಡುವೆ’’ಎಂದು ದೀಪಾ ಮಲಿಕ್ ಟ್ವಿಟರ್‌ನಲ್ಲಿ ಬರೆದಿದ್ದಾರೆ. ‘‘ನಾನು ಈಗಾಗಲೇ ಪತ್ರವೊಂದನ್ನು 2019ರ ಸೆಪ್ಟಂಬರ್ 16ರಂದು ಪಿಸಿಐಗೆ ಸಲ್ಲಿಸಿದ್ದೇನೆ. ಆದರೆ, ಇದೀಗ ಯುವಜನ ವ್ಯವಹಾರ ಹಾಗೂ ಕ್ರೀಡಾ ಸಚಿವಾಲಯಕ್ಕೆ ಪತ್ರವನ್ನು ಸಲ್ಲಿಸಿದ್ದೇನೆ. ನಾನು ಹೈಕೋರ್ಟ್‌ನ ಅನುಮತಿಗಾಗಿ ಕಾಯುತ್ತಿದ್ದೆ. ಫಲಿತಾಂಶವು ಪಿಸಿಐ ಪರವಾಗಿ ಬಂದಿದೆ.ಇದೀಗ ಹೊಸ ಸಮಿತಿಗೆ ಹೈಕೋರ್ಟ್ ಮಾನ್ಯತೆ ನೀಡಿದೆ’’ ಎಂದು ತನ್ನ ನಿರ್ಧಾರದ ಕುರಿತು ದೀಪಾ ವಿವರಿಸಿದರು.

ದೇಶದಲ್ಲಿ ಉದಯೋನ್ಮುಖ ಪ್ಯಾರಾ ಅಥ್ಲೀಟ್‌ಗಳನ್ನು ಪ್ರೋತ್ಸಾಹಿಸುವತ್ತ ಚಿತ್ತಹರಿಸುವ ಅಗತ್ಯವಿದೆ ಎಂದು ಈ ಮೊದಲು ಎಎನ್‌ಐನೊಂದಿಗೆ ನಡೆಸಿದ ಸಂವಹನದಲ್ಲಿ ದೀಪಾ ತಿಳಿಸಿದರು.

ರಾಷ್ಟ್ರೀಯ ಕ್ರೀಡಾ ಸಂಹಿತೆಯ ಪ್ರಕಾರ ಸಕ್ರಿಯ ಅಥ್ಲೀಟ್ ಯಾವುದೇ ಕ್ರೀಡಾ ಒಕ್ಕೂಟದಲ್ಲಿ ಅಧಿಕೃತ ಹುದ್ದೆಯಲ್ಲಿರುವಂತಿಲ್ಲ. ಈ ನಿಯಮದ ಕಾರಣಕ್ಕೆಮಲಿಕ್‌ಗೆ ನಿವೃತ್ತಿ ಘೋಷಿಸುವುದು ಅತ್ಯಂತ ಮುಖ್ಯವಾಗಿತ್ತು. ಸರಕಾರದ ನಿಯಮ ಹಾಗೂ ಮಾರ್ಗಸೂಚಿಯನ್ನು ಅನುಸರಿಸಿದ ದೀಪಾ ಮಲಿಕ್ ಎಲ್ಲರಿಗೂ ಉತ್ತಮ ನಿದರ್ಶನ ಎನಿಸಿದರು.

‘‘ನಾನು ಭಾರದ ಹೃದಯದೊಂದಿಗೆ ಈ ನಿರ್ಧಾರ ತೆಗೆದುಕೊಂಡಿದ್ದೇನೆ. ಆದರೆ, ಉತ್ತಮ ಉದ್ದೇಶದಿಂದ ಈ ನಿರ್ಧಾರಕ್ಕೆ ಬಂದಿರುವೆ. ಕ್ರೀಡೆಗೆ ಏನಾದರೂ ವಾಪಸ್ ನೀಡಬೇಕೆಂಬ ಉದ್ದೇಶದಿಂದ ಈ ತೀರ್ಮಾನಕ್ಕೆ ಬಂದಿರುವುದಕ್ಕೆ ಹೆಮ್ಮೆ ಇದೆ. ಸರಕಾರದ ಕ್ರೀಡಾ ಸಂಸ್ಥೆಯಲ್ಲಿ ಸೇವೆ ಸಲ್ಲಿಸಲು ಬಯಸಿದರೆ, ಅದರ ನಿಯಮಗಳು ಹಾಗೂ ಮಾರ್ಗಸೂಚಿಗಳನ್ನು ಪಾಲಿಸಬೇಕಾಗುತ್ತದೆ’’ ಎಂದು ಮಲಿಕ್ ಹೇಳಿದ್ದಾರೆ. 49ರ ಹರೆಯದ ದೀಪಾ ಮಲಿಕ್ ದೇಶದ ಪ್ಯಾರಾ-ಸ್ಪೋರ್ಟ್ಸ್‌ನ ಧ್ವಜಧಾರಿಣಿಯಾಗಿದ್ದರು. ಕಳೆದ ವರ್ಷದ ಆಗಸ್ಟ್‌ನಲ್ಲಿ ರಾಜೀವ್‌ಗಾಂಧಿ ಖೇಲ್‌ರತ್ನ ಪ್ರಶಸ್ತಿಗೆ ಆಯ್ಕೆಯಾಗಿದ್ದರು. ಈ ಪ್ರತಿಷ್ಠಿತ ಪ್ರಶಸ್ತಿಗೆ ಭಾಜನರಾದ ಭಾರತದ ಮೊದಲ ಪ್ಯಾರಾ-ಅಥ್ಲೀಟ್ ಎನಿಸಿಕೊಂಡಿದ್ದರು.

  ದೀಪಾ ಮಲಿಕ್ ಪ್ಯಾರಾಲಿಂಪಿಕ್ ಗೇಮ್ಸ್‌ನಲ್ಲಿ ಪದಕ ಜಯಿಸಿದ್ದ ಭಾರತದ ಮೊದಲ ಅಥ್ಲೀಟ್. 58 ರಾಷ್ಟ್ರೀಯ ಹಾಗೂ 23 ಅಂತರ್‌ರಾಷ್ಟ್ರೀಯ ಪದಕಗಳನ್ನು ಜಯಿಸಿದ್ದ ದೀಪಾ ಮಲಿಕ್ ಪದ್ಮಶ್ರೀ ಹಾಗೂ ಅರ್ಜುನ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News