×
Ad

ಮಗುವನ್ನು ಒಂದು ಕೈಯಲ್ಲಿ ಹಿಡಿದು ಟ್ರಕ್ ಹತ್ತಲು ಪರದಾಡುತ್ತಿರುವ ಕಾರ್ಮಿಕ

Update: 2020-05-12 14:39 IST

ರಾಯಪುರ್: ಅದಾಗಲೇ ಜನರಿಂದ ತುಂಬಿ ತುಳುಕುತ್ತಿದ್ದ ಟ್ರಕ್ ಒಂದನ್ನು ಹತ್ತಲು ಪುರುಷರು, ಮಹಿಳೆಯರು ಹಾಗೂ ಮಕ್ಕಳು ಪರದಾಡುತ್ತಿರುವ ನಡುವೆಯೇ ತಾಯಿ ತನ್ನ ಕೈಗೆ ನೀಡಿದ ಮಗುವನ್ನು ಒಂದು ಕೈಯ್ಯಿಂದ ಮೇಲಕ್ಕೆತ್ತಿ ಇನ್ನೊಂದು ಕೈಯ್ಯಲ್ಲಿ ಹಗ್ಗವನ್ನು ಗಟ್ಟಿಯಾಗಿ ಹಿಡಿದುಕೊಂಡ ವ್ಯಕ್ತಿಯೊಬ್ಬ ಟ್ರಕ್ ಹತ್ತಲು ನಡೆಸುತ್ತಿರುವ ಯತ್ನದ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ವಿಡಿಯೋ ಲಾಕ್ ಡೌನ್‍ನಿಂದ ವಲಸಿಗ ಕಾರ್ಮಿಕರು ಪಡುತ್ತಿರುವ ಬವಣೆಯನ್ನು ಕಣ್ಣಿಗೆ ಕಟ್ಟುವಂತೆ ತೋರಿಸಿದೆ.

ಆ ವ್ಯಕ್ತಿ ನಂತರ ತನ್ನ ಕೈಯ್ಯಲ್ಲಿದ್ದ ಮಗುವನ್ನು ಟ್ರಕ್‍ನೊಳಗಿದ್ದ ಕಾರ್ಮಿಕನ ಕೈಗೆ ನೀಡುತ್ತಿರುವುದೂ ಛತ್ತೀಸಗಢದಲ್ಲಿ ತೆಗೆಯಲಾಗಿರುವ ಈ 20 ಸೆಕೆಂಡ್ ಅವಧಿಯ ವೀಡಿಯೋದಲ್ಲಿ ಕಾಣಿಸುತ್ತದೆ.

ಸೀರೆ ಉಟ್ಟ ಇನ್ನೊಬ್ಬಳು ಮಹಿಳೆ ಟ್ರಕ್ ಏರಲು ಪರದಾಡುತ್ತಿರುವುದರು ಹಾಗೂ ರಸ್ತೆಯಲ್ಲಿ ನಿಂತಿದ್ದ ಕಾರ್ಮಿಕನೊಬ್ಬನ ಕೈಯ್ಯಿಂದ ಇನ್ನೊಬ್ಬ ವ್ಯಕ್ತಿ ಮಗುವನ್ನು ಪಡೆಯಲು ಕೈಚಾಚುತ್ತಿರುವುದೂ ಈ ವೀಡಿಯೋದಲ್ಲಿ ಕಾಣಿಸುತ್ತದೆ.

ಈ ವೀಡಿಯೋದಲ್ಲಿ ಕಾಣಿಸಿರುವ ಕಾರ್ಮಿಕರು ತೆಲಂಗಾಣದಿಂದ ಹೊರಟಿದ್ದರು.  ತಮ್ಮ ಮನೆಗೆ ಹೋಗಲು ಬೇರೆ ಯಾವುದೇ ದಾರಿ ಕಾಣದ ಅವರೆಲ್ಲರೂ ಈ ಟ್ರಕ್‍ನ ಮೊರೆ ಹೋಗಿದ್ದರು.

“ನಾವೇನು ಮಾಡುವುದು ? ನಾವು ಅಸಹಾಯಕರು. ನಮಗೆ ಜಾರ್ಖಂಡ್‍ಗೆ ಹೋಗಬೇಕು. ಬೇರೆ ದಾರಿಯಿಲ್ಲ'' ಎಂದು ಹಿರಿಯ ವ್ಯಕ್ತಿಯೊಬ್ಬ ಹೇಳುತ್ತಾನೆ.

“ಇವರಿಗೆ ಪ್ರಯಾಣದ ಬೇರೆ ಸವಲತ್ತಿಲ್ಲ. ಸರಕಾರ ಅವರಿಗಾಗಿ ವಿಶೇಷ ಬಸ್ಸುಗಳ ಏರ್ಪಾಟು ಮಾಡಬೇಕು, ನಾನು ಸಾರಿಗೆ ಇಲಾಖೆಯವನಾದರೂ ನಾನೇನೂ ಮಾಡುವ ಹಾಗಿಲ್ಲ'' ಎಂದು ಹತ್ತಿರದಲ್ಲಿಯೇ ನಿಂತಿದ್ದ ಸಾರಿಗೆ ಇಲಾಖೆ ಅಧಿಕಾರಿಯೊಬ್ಬರು ತಮ್ಮ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News