ಚುನಾವಣೆಯಲ್ಲಿ ಅಕ್ರಮ: ಗುಜರಾತ್ ಶಿಕ್ಷಣ ಸಚಿವರ ಚುನಾವಣಾ ಗೆಲುವು ಅಸಿಂಧುಗೊಳಿಸಿದ ಹೈಕೋರ್ಟ್
ಅಹ್ಮದಾಬಾದ್: ಗುಜರಾತ್ ನ ಬಿಜೆಪಿ ಸರಕಾರಕ್ಕೆ ಭಾರೀ ಹಿನ್ನಡೆಯುಂಟು ಮಾಡುವ ಬೆಳವಣಿಗೆಯಲ್ಲಿ ರಾಜ್ಯದ ಧೋಲ್ಕಾ ವಿಧಾನಸಭಾ ಕ್ಷೇತ್ರದಲ್ಲಿ 2017ರಲ್ಲಿ ನಡೆದ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದ ಹಿರಿಯ ಸಚಿವ ಭೂಪೇಂದ್ರಸಿಂಗ್ ಚುಡಸಮ ಅವರ ಆಯ್ಕೆಯನ್ನು ಗುಜರಾತ್ ಹೈಕೋರ್ಟ್‍ನ ಜಸ್ಟಿಸ್ ಪರೇಶ್ ಉಪಾಧ್ಯಾಯ ನೇತೃತ್ವದ ಪೀಠ ಅಸಿಂಧುಗೊಳಿಸಿದೆ. ಚುನಾವಣೆಯಲ್ಲಿ ಅಕ್ರಮಗಳನ್ನು ನಡೆಸಲಾಗಿದೆ ಎಂಬ ಕಾರಣ ನೀಡಿ ನ್ಯಾಯಾಲಯ ಈ ತೀರ್ಪು ನೀಡಿದೆ.
ಡಿಸೆಂಬರ್ 2017ರಲ್ಲಿ ನಡೆದ ಚುನಾವಣೆಯಲ್ಲಿ ಧೋಲ್ಕಾ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಪರಾಭವಗೊಂಡಿದ್ದ ಅಶ್ವಿನ್ ರಾಥೋಡ್ ಅವರು ಚುಡಸಮ ಅವರು 327 ಮತಗಳ ಅಂತರದಿಂದ ಸಾಧಿಸಿದ್ದ ಗೆಲುವನ್ನು ಪ್ರಶ್ನಿಸಿ ನ್ಯಾಯಾಲಯದ ಕದ ತಟ್ಟಿದ್ದರು. ಚುಡಸಮ ಅವರು ‘ಅಕ್ರಮ ನಡೆಸಿದ್ದಾರೆ ಹಾಗೂ ವಿವಿಧ ಹಂತಗಳಲ್ಲಿ ಚುನಾವಣಾ ಆಯೋಗದ ನಿಯಮಗಳನ್ನು ಉಲ್ಲಂಘಿಸಿದ್ದರು, ಮುಖ್ಯವಾಗಿ ಮತ ಎಣಿಕೆ ಸಂದರ್ಭವೂ ನಿಯಮಗಳನ್ನು ಉಲ್ಲಂಘಿಸಲಾಗಿತ್ತು’ ಎಂದು ರಾಥೋಢ್ ಆರೋಪಿಸಿದ್ದರು.
ಈ ಅಪೀಲಿನ ಹಿನ್ನೆಲೆಯಲ್ಲಿ ನ್ಯಾಯಾಲಯವು ಚುನಾವಣಾ ಆಯೋಗ, ಧೋಲ್ಕ ಕ್ಷೇತ್ರದ ಚುನಾವಣಾಧಿಕಾರಿ ಹಾಗೂ ಚುನಾವಣಾ ವೀಕ್ಷಕರಿಗೆ ನೋಟಿಸ್ ಜಾರಿಗೊಳಿಸಿತ್ತು. ತಾವು ಮತ ಎಣಿಕೆ ಸಂದರ್ಭ ಚುನಾವಣಾ ಆಯೋಗದ ಕೆಲ ನಿಯಮಗಳನ್ನು ಪಾಲಿಸದೇ ಇದ್ದುದರಿಂದ ಚುಡಸಮ ಅವರು ಅಲ್ಪಮತಗಳ ಅಂತರದಿಂದ ಗೆಲುವು ಸಾಧಿಸುವ ಹಾಗಾಯಿತು ಎಂದು ವಿಚಾರಣೆ ಸಂದರ್ಭ ಚುನಾವಣಾ ವೀಕ್ಷಕರು ಒಪ್ಪಿಕೊಂಡಿದ್ದರೆನ್ನಲಾಗಿದೆ.
ವಿಜಯದ ಅಂತರವು ರಿಟರ್ನಿಂಗ್ ಅಧಿಕಾರಿ ತಿರಸ್ಕರಿಸಿದ್ದ ಪೋಸ್ಟಲ್ ಮತಗಳ ಸಂಖ್ಯೆಗಿಂತ (429) ಕಡಿಮೆಯಿದ್ದುದರಿಂದ ಚುನಾವಣಾ ಆಯೋಗದ ನಿಯಮದಂತೆ ಪೋಸ್ಟಲ್ ಮತಗಳನ್ನು ಮರುಪರಿಶೀಲಿಸಬೇಕಿತ್ತು ಎಂದು ನ್ಯಾಯಾಲಯ ಹೇಳಿದೆ.
ಚುಡಸಮ ಅವರು ಗುಜರಾತ್‍ನ ಉನ್ನತ ಮತ್ತು ತಾಂತ್ರಿಕ ಶಿಕ್ಷಣ, ಕಾನೂನು, ನ್ಯಾಯ, ಸಂಸದೀಯ ವ್ಯವಹಾರಗಳು ಹಾಗೂ ನಾಗರಿಕ ವಿಮಾನಯಾನ ಸಚಿವರಾಗಿದ್ದಾರೆ.