ಕನ್ನಡ ಚಾನೆಲ್ ಗಳ ವಿರುದ್ಧ ಕ್ರಮಕ್ಕೆ ಮುಂದಾದ ರಾಷ್ಟ್ರೀಯ ಮಹಿಳಾ ಆಯೋಗ
ಬೆಂಗಳೂರು : ಕರ್ನಾಟಕ ಸರಕಾರ ಇತ್ತೀಚೆಗೆ ಲಾಕ್ ಡೌನ್ ನಿರ್ಬಂಧ ಸಡಿಲಿಕೆಗೊಳಿಸಿ ಮದ್ಯ ಮಾರಾಟ ಅಂಗಡಿಗಳಿಗೆ ಅನುಮತಿ ನೀಡಿತ್ತು. ಈ ಹಿನ್ನೆಲೆಯಲ್ಲಿ ಮದ್ಯದಂಗಡಿಗಳ ಎದುರು ಮದ್ಯ ಖರೀದಿಗಾಗಿ ಗ್ರಾಹಕರ ಉದ್ದುದ್ದ ಸರತಿಯಿತ್ತು. ಈ ಸಾಲಿನಲ್ಲಿ ನಿಂತಿದ್ದ ಮಹಿಳೆಯರನ್ನು ಅವಹೇಳನಗೈಯ್ಯುವಂತೆ ಹಾಗೂ ಮಹಿಳೆಯರು ಮದ್ಯ ಖರೀದಿಸುವುದು ಅಪರಾಧವೆಂಬಂತೆ ಬಿಂಬಿಸಲು ಯತ್ನಿಸಿದ ಹಲವು ಕನ್ನಡ ಮಾಧ್ಯಮಗಳ ವಿರುದ್ಧ ರಾಷ್ಟ್ರೀಯ ಮಹಿಳಾ ಆಯೋಗ ಆಕ್ರೋಶ ವ್ಯಕ್ತಪಡಿಸಿದೆ.
ಈ ಕುರಿತಂತೆ ಕೆಲವೊಂದು ಮಾಧ್ಯಮಗಳ ವರದಿಗಳ ಕುರಿತು ಅಸಮಾಧಾನ ವ್ಯಕ್ತಪಡಿಸಿರುವ ರಾಷ್ಟ್ರೀಯ ಮಹಿಳಾ ಆಯೋಗದ ಮುಖ್ಯಸ್ಥೆ ರೇಖಾ ಶರ್ಮ ಮಾತನಾಡಿ, “ಭಾರತದ ಸಂವಿಧಾನ ಸರ್ವರಿಗೂ ಸಮಾನ ಹಕ್ಕುಗಳನ್ನು ನೀಡಿದೆ ಹಾಗೂ ಮಹಿಳೆಯರು ಎಂಜಾಯ್ ಮಾಡುವ ಹಾಗಿಲ್ಲ ಎನ್ನುವ ರೀತಿಯಲ್ಲಿ ಏನೂ ಇಲ್ಲ'' ಎಂದಿದ್ದಾರೆ.
ಮದ್ಯ ಖರೀದಿಗೆ ಬಂದ ಮಹಿಳೆಯರನ್ನು ಅವಹೇಳನಗೈಯ್ಯುವ ರೀತಿಯಲ್ಲಿ ಸುದ್ದಿ ಪ್ರಸಾರ ಮಾಡಿದ ಕೆಲ ಟಿವಿ ವಾಹಿನಿ ವರದಿಗಳ ಕುರಿತಂತೆ ಪರಿಶೀಲಿಸುವುದಾಗಿ ಹಾಗೂ ಯಾರಾದರೂ ನಿಯಮ ಉಲ್ಲಂಘಿಸಿದ್ದಲ್ಲಿ ಕ್ರಮ ಕೈಗೊಳ್ಳುವುದಾಗಿಯೂ ಅವರು ಹೇಳಿದ್ದಾರೆ.
ಕೇಬಲ್ ಟೆಲಿವಿಷನ್ ನೆಟ್ವರ್ಕ್ ನಿಯಂತ್ರಣ ಕಾಯಿದೆ 1995 ಅನ್ವಯ ಮಹಿಳೆಯರು ಇನ್ನೊಬ್ಬರಿಗೆ ಅಧೀನರಾಗಿ ಇರುವವರು ಹಾಗೂ ಕುಟುಂಬ ಮತ್ತು ಸಮಾಜದಲ್ಲಿ ಕೆಳಗಿನ ಸ್ತರದ ಅಥವಾ ದ್ವಿತೀಯ ಹಂತದ ಪಾತ್ರ ವಹಿಸುತ್ತಾರೆಂಬ ರೀತಿಯಲ್ಲಿ ಅವರನ್ನು ಬಿಂಬಿಸುವಂತಿಲ್ಲ ಎಂದು ಹೇಳುತ್ತದೆ.
ಟಿವಿ ವಾಹಿನಿಗಳು ಮಹಿಳೆಯೊಬ್ಬಳ ಗುರುತು, ಚಿತ್ರ ಅಥವಾ ವೀಡಿಯೋಗಳನ್ನು ಆಕೆಯ ಅನುಮತಿಯಿಲ್ಲದೆ ತೆಗೆಯುವ ಹಾಗಿಲ್ಲ ಹಾಗೂ ಮಹಿಳೆಯ ಖಾಸಗಿತನವನ್ನು ಗೌರವಿಸಬೇಕು ಎಂದು ಸುದ್ದಿ ಪ್ರಸಾರ ಗುಣಮಟ್ಟ ನಿಯಮಗಳು ತಿಳಿಸುತ್ತವೆ.
ಆದರೆ ಈ ನಿಯಮಗಳ ಹೊರತಾಗಿಯೂ ಹಲವು ಕನ್ನಡ ವಾಹಿನಿಗಳು ಮದ್ಯ ಖರೀದಿಸಲು ಸರತಿ ನಿಂತ ಮಹಿಳೆಯರನ್ನು ತಮ್ಮ ಕಾರ್ಯಕ್ರಮಗಳಲ್ಲಿ ಅವಮಾನಿಸಿವೆ ಎಂದು ಆರೋಪಿಸಲಾಗಿದೆ.
ಕೃಪೆ: newslaundry.com