ಲಾಕ್ಡೌನ್ ಉಲ್ಲಂಘಿಸಿ ಹುಟ್ಟುಹಬ್ಬ ಪಾರ್ಟಿ ಆಯೋಜಿಸಿದ ಬಿಜೆಪಿ ನಾಯಕ, ಇತರ ಏಳು ಮಂದಿಯ ಬಂಧನ
ವಡೋದರ : ಲಾಕ್ ಡೌನ್ ನಿಯಮಗಳನ್ನು ಉಲ್ಲಂಘಿಸಿ ಹುಟ್ಟುಹಬ್ಬದ ಪಾರ್ಟಿ ಆಯೋಜಿಸಿದ ಆರೋಪದ ಮೇಲೆ ಬಿಜೆಪಿ ವಾರ್ಡ್ ಅಧ್ಯಕ್ಷರೊಬ್ಬರು ಹಾಗೂ ಇತರ ಏಳು ಮಂದಿಯನ್ನು ವಡೋದರಾದಲ್ಲಿ ಬಂಧಿಸಲಾಗಿದೆ.
ವಡೋದರಾದ ತುಳಸೀವಾಡ್ ಪ್ರದೇಶದ ವಾರ್ಡ್ 7ರ ಬಿಜೆಪಿ ಅಧ್ಯಕ್ಷ ಅನಿಲ್ ಪರ್ಮಾರ್ ಅವರ ನಿವಾಸದಲ್ಲಿ ಮಂಗಳವಾರ ತಡರಾತ್ರಿ ಪಾರ್ಟಿ ಆಯೋಜಿಸಲಾಗಿತ್ತೆನ್ನಲಾಗಿದೆ. ಈ ಸಂತೋಷಕೂಟದ ನಂತರ ಅದರಲ್ಲಿ ಭಾಗವಹಿಸಿದ್ದವರು ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ್ದು ಅವುಗಳು ವೈರಲ್ ಆಗಿವೆ. ಅವರೆಲ್ಲರೂ ಅಕ್ಕಪಕ್ಕ ನಿಂತುಕೊಂಡು ಕೇಕ್ ತಿನ್ನುತ್ತಾ ಕ್ಯಾಮರಾಗೆ ಪೋಸ್ ಕೊಟ್ಟ ಫೋಟೋಗಳು ಹಾಗೂ ವೀಡಿಯೋಗಳು ಸಾಕಷ್ಟು ಸಂಚಲನ ಸೃಷ್ಟಿಸಿದ್ದವು. ಇಲ್ಲಿಯ ತನಕ ಒಟ್ಟು ಎಂಟು ಮಂದಿಯನ್ನು ಗುರುತಿಸಿ ಬಂಧಿಸಲಾಗಿದ್ದು ಅವರೆಲ್ಲರನ್ನೂ ನಿಯಮದಂತೆ ವೈದ್ಯಕೀಯ ತಪಾಸಣೆಗೆ ಕಳುಹಿಸಿಕೊಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಿಜೆಪಿ ವಾರ್ಡ್ ಅಧ್ಯಕ್ಷನ ಹೊರತಾಗಿ ಮನೀಶ್ ಪರ್ಮಾರ್, ನಕುಲ್ ಪರ್ಮಾರ್, ದಕ್ಷೇಶ್ ಪರ್ಮಾರ್, ಮೆಹುಲ್ ಸೋಳಂಕಿ, ಚಂದ್ರಶೇಖರ್ ಭ್ರಂಭ್ರೆ, ರಾಕೇಶ್ ಪರ್ಮಾರ್ ಹಾಗೂ ಧವಳ್ ಪರ್ಮಾರ್ ಅವರನ್ನು ಬಂಧಿಸಲಾಗಿದೆ. ಎಲ್ಲರ ವಿರುದ್ಧವೂ ಐಪಿಸಿ ಸೆಕ್ಷನ್ 269, 279 ಹಾಗೂ 188 ಅನ್ವಯ ಪ್ರಕರಣ ದಾಖಲಾಗಿದೆ.