ಶ್ರೀಲಂಕಾ: ಮುಸ್ಲಿಮ್ ವಿರೋಧಿ ಹಿಂಸಾಚಾರದಲ್ಲಿ ವಹಿಸಿದ ಪಾತ್ರಕ್ಕಾಗಿ ಕ್ಷಮೆ ಕೋರಿದ ಫೇಸ್‌ಬುಕ್

Update: 2020-05-13 15:09 GMT

ಹಾಂಕಾಂಗ್, ಮೇ 13: ಶ್ರೀಲಂಕಾದಲ್ಲಿ ಎರಡು ವರ್ಷಗಳ ಹಿಂದೆ ನಡೆದ ಭೀಕರ ಮುಸ್ಲಿಮ್ ವಿರೋಧಿ ಹಿಂಸಾಚಾರದಲ್ಲಿನ ತನ್ನ ಪಾತ್ರಕ್ಕಾಗಿ ಸಾಮಾಜಿಕ ಜಾಲತಾಣ ಫೇಸ್‌ಬುಕ್ ಕ್ಷಮೆ ಯಾಚಿಸಿದೆ. ಫೇಸ್‌ಬುಕ್‌ನಲ್ಲಿ ಹರಡಲ್ಪಟ್ಟ ದ್ವೇಷ ಭಾಷಣಗಳು ಮತ್ತು ಊಹಾಪೋಹಗಳು ಹಿಂಸಾಚಾರಕ್ಕೆ ಕಾರಣವಾಗಿರಬಹುದು ಎನ್ನುವುದು ತನಿಖೆಯಲ್ಲಿ ಬಹಿರಂಗವಾದ ಬಳಿಕ ಅದು ಈ ಕ್ರಮ ತೆಗೆದುಕೊಂಡಿದೆ.

ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಮುಸ್ಲಿಮ್ ವಿರೋಧಿ ಭಾವನೆಗಳು ಪ್ರಸಾರಗೊಂಡ ಬಳಿಕ, 2018ರ ಆದಿ ಭಾಗದಲ್ಲಿ ಮುಸ್ಲಿಮ್ ವಿರೋಧಿ ಹಿಂಸಾಚಾರ ಸ್ಫೋಟಿಸಿತು. ಹಿಂಸೆಯನ್ನು ನಿಗ್ರಹಿಸಲು ಶ್ರೀಲಂಕಾ ಸರಕಾರವು ತುರ್ತು ಪರಿಸ್ಥಿತಿಯನ್ನು ಹೇರಿತು ಹಾಗೂ ಫೇಸ್‌ಬುಕ್ ಸೇವೆಯನ್ನು ಸ್ಥಗಿತಗೊಳಿಸಿತು.

ಹಿಂಸಾಚಾರದಲ್ಲಿ ಫೇಸ್‌ಬುಕ್ ವಹಿಸಿದೆ ಎನ್ನಲಾದ ಪಾತ್ರದ ಬಗ್ಗೆ ತನಿಖೆ ನಡೆಸಲು ಅದು ತನಿಖೆಯೊಂದಕ್ಕೆ ಆದೇಶ ನೀಡಿತು. ಫೇಸ್‌ಬುಕ್‌ನಲ್ಲಿ ಪ್ರಸಾರಗೊಂಡ ಉದ್ರೇಕಕಾರಿ ಸಂದೇಶಗಳು ಮುಸ್ಲಿಮರ ವಿರುದ್ಧದ ಹಿಂಸಾಚಾರಕ್ಕೆ ಕಾರಣವಾಗಿರಬಹುದು ಎಂಬ ನಿರ್ಧಾರಕ್ಕೆ ತನಿಖಾಧಿಕಾರಿಗಳು ಬಂದಿದ್ದಾರೆ.

“ನಮ್ಮ ವೇದಿಕೆಯ ದುರ್ಬಳಕೆಗಾಗಿ ನಾವು ವಿಷಾದಿಸುತ್ತೇವೆ” ಎಂದು ಹೇಳಿಕೆಯೊಂದರಲ್ಲಿ ಫೇಸ್‌ಬುಕ್ ತಿಳಿಸಿದೆ ಎಂದು ಬ್ಲೂಮ್‌ಬರ್ಗ್ ನ್ಯೂಸ್ ವರದಿ ಮಾಡಿದೆ. ತನಿಖಾ ವರದಿಯನ್ನು ಮಂಗಳವಾರ ಬಿಡುಗಡೆ ಮಾಡಲಾಗಿದೆ.

ಹಿಂಸಾಚಾರದಲ್ಲಿ ಫೇಸ್‌ಬುಕ್ ವಹಿಸಿದ ಪಾತ್ರವನ್ನು ನಾವು ಗುರುತಿಸಿದ್ದೇವೆ, ಅದ್ಕಾಗಿ ಕ್ಷಮೆ ಕೋರುತ್ತೇವೆ ಎಂದು ಫೇಸ್‌ಬುಕ್ ಹೇಳಿದೆ.

2018ರ ಹಿಂಸಾಚಾರದಲ್ಲಿ ಕನಿಷ್ಠ ಮೂವರು ಮೃತಪಟ್ಟಿದ್ದಾರೆ ಹಾಗೂ 20 ಮಂದಿ ಗಾಯಗೊಂಡಿದ್ದಾರೆ. ಹಿಂಸಾಚಾರದ ಸಂದರ್ಭದಲ್ಲಿ ಮಸೀದಿಗಳು ಮತ್ತು ಮುಸ್ಲಿಮರ ಅಂಗಡಿ ಮತ್ತು ಉದ್ಯಮಗಳಿಗೆ ಬೆಂಕಿ ಕೊಡಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News