ವಿಕಾಸ್ ಖನ್ನಾರಿಂದ ಬಡವರಿಗೆ 3,100 ಕ್ವಿಂಟಾಲ್ ಗೂ ಅಧಿಕ ಆಹಾರ ಧಾನ್ಯ ವಿತರಣೆ

Update: 2020-05-13 15:19 GMT
ಪೋಟೊ ಕೃಪೆ:facebook.com/VikasKhannaGroup

ನ್ಯೂಯಾರ್ಕ್,ಮೇ 13: ಕೋವಿಡ್-19 ಬಿಕ್ಕಟ್ಟಿನ ನಡುವೆಯೇ ಭಾರತದಾದ್ಯಂತ 79 ನಗರಗಳಲ್ಲಿ ಬಡವರಿಗೆ 3,100 ಕ್ವಿಂಟಲ್‌ಗೂ ಅಧಿಕ ಆಹಾರ ಧಾನ್ಯಗಳನ್ನು ವಿತರಿಸಿರುವ ಮಿಶೆಲಿನ್ ಸ್ಟಾರ್ ಚೆಫ್ ವಿಕಾಸ್ ಖನ್ನಾ ಅವರು,ಈ ಸಾಂಕ್ರಾಮಿಕ ಪಿಡುಗನ್ನು ಸೋಲಿಸಲು ಜನರಲ್ಲಿ ಏಕತೆ ಮತ್ತು ಒಗ್ಗಟ್ಟಿಗೆ ಕರೆ ನೀಡಿದ್ದಾರೆ.

ನ್ಯೂಯಾರ್ಕ್ ನಿವಾಸಿಯಾಗಿರುವ ಖನ್ನಾ ಭಾರತದಲ್ಲಿ ಕೊರೋನ ವೈರಸ್ ಪ್ರಕರಣಗಳಲ್ಲಿ ಏರಿಕೆ ಮತ್ತು ವೈರಸ್ ಹರಡುವಿಕೆಯನ್ನು ನಿಯಂತ್ರಿಸಲು ಸರಕಾರವು ಲಾಕ್‌ಡೌನ್ ಹೇರಿಕೆ ಹಿನ್ನೆಲೆಯಲ್ಲಿ ಆಹಾರ ಧಾನ್ಯಗಳನ್ನು ಖರೀದಿಸಿ ಅನಾಥಾಶ್ರಮಗಳು, ವೃದ್ಧಾಶ್ರಮಗಳು ಮತ್ತ ಕುಷ್ಠರೋಗಿಗಳ ಕೇಂದ್ರಗಳಿಗೆ ವಿತರಿಸಲು ಪೂರೈಕೆ ಸರಪಳಿಯನ್ನು ಸೃಷ್ಟಿಸಲು ಎಪ್ರಿಲ್‌ನಲ್ಲಿ ಉಪಕ್ರಮವನ್ನು ಆರಂಭಿಸಿದ್ದರು.

ಖ್ಯಾತ ಬಾಣಸಿಗ, ಜೊತೆಗೆ ಲೇಖಕ ಹಾಗೂ ಚಿತ್ರ ನಿರ್ಮಾಪಕರೂ ಆಗಿರುವ ಖನ್ನಾ ಒಂದು ತಿಂಗಳಿಗೂ ಕಡಿಮೆ ಅವಧಿಯಲ್ಲಿ ಅಕ್ಕಿ,ಬೇಳೆ ಮತ್ತು ಗೋಧಿ ಹುಡಿ ಸೇರಿದಂತೆ 3,100 ಕ್ವಿಂ.ಗೂ ಅಧಿಕ ಆಹಾರಧಾನ್ಯಗಳನ್ನು ಖರೀದಿಸಿ ವಿತರಿಸುವಲ್ಲಿ ಯಶಸ್ವಿಯಾಗಿದ್ದಾರೆ.

 ಆಹಾರ ಧಾನ್ಯ ವಿತರಣೆಯ ಸಂಗ್ರಹ, ಪ್ಯಾಕೇಜಿಂಗ್ ಮತ್ತು ವಿತರಣೆಗೆ ಸಹಕಾರಕ್ಕಾಗಿ ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯಾ ಪಡೆ (ಎನ್‌ಆರ್‌ಡಿಎಫ್)ಗೆ ಖನ್ನಾ ಕೃತಜ್ಞತೆಗಳನ್ನು ಸಲ್ಲಸಿದ್ದಾರೆ.

ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಖನ್ನಾ,”ನಾನೇನೂ ಉಪಕಾರವನ್ನು ಮಾಡುತ್ತಿಲ್ಲ. ನಾನು ನನ್ನ ದೇಶಕ್ಕೆ ಮರಳಿ ನೀಡುತ್ತಿದ್ದೇನೆ. ಅಡುಗೆ ಕೋಣೆಯ ಹೊರತಾಗಿ ಬಾಣಸಿಗನಿಗೆ ಅಪಾರ ಹೊಣೆಗಾರಿಕೆಯೂ ಇರುತ್ತದೆ ಮತ್ತು ಕೊರೋನ ಬಿಕ್ಕಟ್ಟು ನನ್ನ ಹೊಣೆಗಾರಿಕೆಯನ್ನು ನಿಭಾಯಿಸಲು ಅವಕಾಶವನ್ನು ಕಲ್ಪಿಸಿದೆ“ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News