ಸಜ್ಜನ್ ಕುಮಾರ್‌ಗೆ ಮಧ್ಯಂತರ ಜಾಮೀನು ನೀಡಲು ಸುಪ್ರೀಂ ಕೋರ್ಟ್ ನಕಾರ

Update: 2020-05-13 16:40 GMT

ಹೊಸದಿಲ್ಲಿ,ಮೇ 13: 1984ರ ಸಿಖ್‌ವಿರೋಧಿ ದಂಗೆಗಳಿಗೆ ಸಂಬಂಧಿಸಿದ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಯನ್ನು ಅನುಭವಿಸುತ್ತಿರುವ ಕಾಂಗ್ರೆಸ್ ನಾಯಕ ಸಜ್ಜನ್ ಕುಮಾರ್ ಅವರಿಗೆ ಮಧ್ಯಂತರ ಜಾಮೀನು ನೀಡಲು ಬುಧವಾರ ನಿರಾಕರಿಸಿದ ಸರ್ವೋಚ್ಚ ನ್ಯಾಯಾಲಯವು,ಯಾವುದೇ ದಿನಾಂಕವನ್ನು ನಿಗದಿಗೊಳಿಸದೆ ವಿಚಾರಣೆಯನ್ನು ಮುಂದೂಡಿತು. ಮಾಜಿ ಸಂಸದ ಸಜ್ಜನ್ ಕುಮಾರ್ ಅನಾರೋಗ್ಯದ ಕಾರಣವನ್ನು ಉಲ್ಲೇಖಿಸಿ ಜಾಮೀನು ಕೋರಿದ್ದರು.

 ದಿಲ್ಲಿಯ ಏಮ್ಸ್ ಆಸ್ಪತ್ರೆಯ ವೈದ್ಯಕೀಯ ಮಂಡಳಿಯ ವರದಿಯಂತೆ ಕುಮಾರ ಅವರನ್ನು ಆಸ್ಪತ್ರೆಗೆ ದಾಖಲಿಸುವ ಅಗತ್ಯವಿಲ್ಲ ಎಂದು ಹೇಳಿದ ಸರ್ವೋಚ್ಚ ನ್ಯಾಯಾಲಯವು,ಜಾಮೀನು ಕೋರಿಕೆ ಅರ್ಜಿಯನ್ನು ಜುಲೈನಲ್ಲಿ ಪರಿಶೀಲಿಸಲಾಗುವುದು ಎಂದು ತಿಳಿಸಿತು. 1984,ನ.1ರಂದು ದಿಲ್ಲಿಯಲ್ಲಿ ಗುಂಪಿನಿಂದ ಸಿಖ್ ಕುಟುಂಬವೊಂದರ ಐವರು ಸದಸ್ಯರ ಹತ್ಯೆ ಮತ್ತು ಗುರುದ್ವಾರಾಕ್ಕೆ ಬೆಂಕಿ ಹಚ್ಚಿದ್ದ ಪ್ರಕರಣದಲ್ಲಿ ಕುಮಾರ ಅವರಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಲಾಗಿದೆ.

ದಿಲ್ಲಿ ಉಚ್ಚ ನ್ಯಾಯಾಲಯವು ತನ್ನ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ಬಳಿಕ ಕುಮಾರ ಸರ್ವೋಚ್ಚ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಡಿಸೆಂಬರ್ 2018ರಿಂದಲೂ ತಾನು ಜೈಲಿನಲ್ಲಿದ್ದೇನೆ ಮತ್ತು ಆಗಿನಿಂದ ಸುಮಾರು 10 ಕೆಜಿ ತೂಕವನ್ನು ಕಳೆದುಕೊಂಡಿದ್ದೇನೆ ಎಂದು ಕುಮಾರ ತನ್ನ ಅರ್ಜಿಯಲ್ಲಿ ಹೇಳಿಕೊಂಡಿದ್ದರು.

  ಜಾಮೀನು ಅರ್ಜಿಯನ್ನು ಸಿಬಿಐ ಬಲವಾಗಿ ವಿರೋಧಿಸಿದರೆ,74 ವರ್ಷ ಪ್ರಾಯದ ತನ್ನ ಕಕ್ಷಿದಾರರಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಲಾಗಿದೆ, ಆದರೆ ಕೊರೋನ ವೈರಸ್ ಬಿಕ್ಕಟ್ಟಿನಿಂದಾಗಿ ಅವರನ್ನು ಏಮ್ಸ್‌ಗೆ ಕರೆದೊಯ್ಯಲಾಗುತ್ತಿಲ್ಲ. ಅವರೇನಾದರೂ ಸತ್ತರೆ ಅವರ ಜೀವಾವಧಿ ಶಿಕ್ಷೆಯು ತನ್ನಿಂತಾನೇ ಮರಣ ದಂಡನೆಯಾಗಿ ಪರಿವರ್ತನೆಗೊಳ್ಳಲಿದೆ ಎಂದು ಕುಮಾರ ಪರ ವಕೀಲ ವಿಕಾಸ ಸಿಂಗ್ ವಾದಿಸಿದರು. ಹೀಗೆ ಹೇಳಬೇಡಿ ಎಂದು ನ್ಯಾ.ಬೋಬ್ಡೆ ಅವರಿಗೆ ಚುರುಕು ಮುಟ್ಟಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News