ಎರಡನೇ ಹಂತದಲ್ಲಿ 30,000 ಭಾರತೀಯರು ಸ್ವದೇಶಕ್ಕೆ ವಾಪಸ್: ಸಚಿವ ಪುರಿ

Update: 2020-05-13 16:50 GMT

ಹೊಸದಿಲ್ಲಿ,ಮೇ 13: ಕೊರೋನ ವೈರಸ್ ಲಾಕ್‌ಡೌನ್‌ನಿಂದಾಗಿ ವಿದೇಶಗಳಲ್ಲಿ ಸಿಕ್ಕಿ ಹಾಕಿಕೊಂಡಿರುವ ಸುಮಾರು 30,000 ಭಾರತೀಯರನ್ನು ‘ವಂದೇ ಭಾರತ ’ಅಭಿಯಾನದ ಎರಡನೇ ಹಂತದಲ್ಲಿ ಸ್ವದೇಶಕ್ಕೆ ವಾಪಸ್ ಕರೆತರಲಾಗುವುದು ಎಂದು ನಾಗರಿಕ ವಾಯುಯಾನ ಸಚಿವ ಹರ್ದೀಪ ಸಿಂಗ್ ಪುರಿ ಅವರು ತಿಳಿಸಿದ್ದಾರೆ.

ಮೇ 16ರಿಂದ ಮೇ 22ರವರೆಗೆ 31 ದೇಶಗಳಿಗೆ 149 ವಿಮಾನ ಯಾನಗಳನ್ನು ನಿರ್ವಹಿಸಲಾಗುವುದು. ಈ ಪೈಕಿ ಆಸ್ಟ್ರೇಲಿಯಾಕ್ಕೆ ಏಳು,ರಷ್ಯಕ್ಕೆ ಆರು ಮತ್ತು ಕೆನಡಾಕ್ಕೆ ಐದು ಯಾನಗಳು ಕಾರ್ಯಾಚರಿಸಲಿವೆ. ಭಾರತೀಯರನ್ನು ವಾಪಸ್ ಕರೆತರಲಾಗುವ ಇತರ ದೇಶಗಳಲ್ಲಿ ಅರ್ಮೆನಿಯಾ, ಜಪಾನ, ನೈಜೀರಿಯಾ, ಇಟಲಿ, ಜರ್ಮನಿ, ಫ್ರಾನ್ಸ್, ಐರ್ ಲ್ಯಾಂಡ್ ಮತ್ತು ನೇಪಾಳ ಸೇರಿವೆ ಎಂದು ಪುರಿ ಬುಧವಾರ ಟ್ವೀಟಿಸಿದ್ದಾರೆ. ಥೈಲ್ಯಾಂಡ್,ಬೆಲಾರುಸ್,ಬಹರೈನ್ ಮತ್ತು ಬಾಂಗ್ಲಾದೇಶಗಳೂ ಈ ಪಟ್ಟಿಯಲ್ಲಿವೆ ಎಂದು ಏರ್ ಇಂಡಿಯಾ ಅಧಿಕಾರಿಗಳನ್ನು ಉಲ್ಲೇಖಿಸಿ ಸುದ್ದಿಸಂಸ್ಥೆಯು ವರದಿ ಮಾಡಿದೆ.

ಮೊದಲ ಹಂತದ ವಂದೇ ಭಾರತ ಅಭಿಯಾನದಲ್ಲಿ 64 ಯಾನಗಳ ಮೂಲಕ 14,800 ಭಾರತೀಯರನ್ನು ಮರಳಿ ಕರೆತರಲು ಯೋಜಿಸಲಾಗಿತ್ತು. ಬುಧವಾರ ಬೆಳಿಗ್ಗೆಯವರೆಗೆ 8,500 ಭಾರತೀಯರು ಸ್ವದೇಶಕ್ಕೆ ಆಗಮಿಸಿದ್ದಾರೆ. ಉಳಿದ ಯಾನಗಳು ಕಾರ್ಯಾಚರಣೆಯಲ್ಲಿವೆ. ಎರಡನೇ ಹಂತದ ಅಭಿಯಾನದಲ್ಲಿ ಪ್ರಯಾಣಿಕರ ಸಂಖ್ಯೆಯನ್ನು ಇಮ್ಮಡಿಗೊಳಿಸಲಾಗಿದೆ ಎಂದೂ ಪುರಿ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

 ಎರಡನೇ ಹಂತದಲ್ಲಿ ಅಮೆರಿಕ, ಯುಎಇ, ಕೆನಡಾ, ಸೌದಿ ಅರೇಬಿಯ, ಬ್ರಿಟನ್, ಮಲೇಶಿಯಾ, ಒಮನ್, ಕಝಕಸ್ತಾನ್, ಆಸ್ಟ್ರೇಲಿಯಾ,ಉಕ್ರೇನ್,ಕತರ್ ಮತ್ತು ಇಂಡೋನೇಶಿಯಾಗಳಂತಹ ದೇಶಗಳಿಂದ ಏರ್ ಇಂಡಿಯಾ ಮತ್ತು ಏರ್ ಇಂಡಿಯಾ ಎಕ್ಸ್‌ಪ್ರೆಸ್ 149 ಯಾನಗಳನ್ನು ನಿರ್ವಹಿಸಲಿವೆ ಎಂದು ಏರ್ ಇಂಡಿಯಾ ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News