×
Ad

ಭಾರತದಲ್ಲಿ 75 ಸಾವಿರದ ಗಡಿ ದಾಟಿದ ಕೊರೋನ ಸೋಂಕಿತರ ಸಂಖ್ಯೆ

Update: 2020-05-14 09:20 IST

ಹೊಸದಿಲ್ಲಿ : ದೇಶದಲ್ಲಿ ಕೊರೋನ ವೈರಸ್ ಸೋಂಕಿತರ ಸಂಖ್ಯೆ 75 ಸಾವಿರದ ಗಡಿ ದಾಟಿದ್ದು, ಅತ್ಯಧಿಕ ಕೊರೋನ ವೈರಸ್ ಪ್ರಕರಣಗಳು ಪತ್ತೆಯಾದ ದೇಶಗಳ ಪೈಕಿ ಭಾರತ 12ನೇ ಸ್ಥಾನಕ್ಕೇರಿದೆ. ಬುಧವಾರ ದೇಶದಲ್ಲಿ ಎರಡನೇ ಗರಿಷ್ಠ ಸಂಖ್ಯೆಯ ಪ್ರಕರಣಗಳು ದಾಖಲಾಗಿದ್ದು, ಮಹಾರಾಷ್ಟ್ರದಲ್ಲಿ ಸೋಂಕಿತರ ಸಂಖ್ಯೆ 25 ಸಾವಿರ ದಾಟಿದೆ.

ರವಿವಾರ ದಾಖಲಾದ 4308 ಪ್ರಕರಣಗಳನ್ನು ಹೊರತುಪಡಿಸಿದರೆ ಬುಧವಾರ ದಾಖಲಾದ 3783 ಪ್ರಕರಣಗಳು ದೇಶದಲ್ಲಿ ಒಂದೇ ದಿನ ದಾಖಲಾದ ಗರಿಷ್ಠ ಸಂಖ್ಯೆಯ ಪ್ರಕರಣಗಳೆನಿಸಿವೆ. ಮಹಾರಾಷ್ಟ್ರದಲ್ಲಿ ಒಂದೇ ದಿನ 1495 ಪ್ರಕರಣಗಳು ದಾಖಲಾಗಿರುವುದು ಈ ಏರಿಕೆಗೆ ಮುಖ್ಯ ಕಾರಣ. ಉಳಿದಂತೆ ತಮಿಳುನಾಡು (509), ಗುಜರಾತ್ (364), ದೆಹಲಿ (359), ರಾಜಸ್ಥಾನ (202) ಮತ್ತು ಮಧ್ಯಪ್ರದೇಶ (187) ಗಳಲ್ಲಿ ಕೂಡಾ ಹೆಚ್ಚು ಪ್ರಕರಣಗಳು ದಾಖಲಾಗಿವೆ.

ದೆಹಲಿಯಲ್ಲಿ ಬುಧವಾರ 20 ಸೋಂಕಿತರು ಮೃತಪಟ್ಟಿದ್ದು, ಒಟ್ಟು ಬಲಿಯಾದವರ ಸಂಖ್ಯೆ 100ನ್ನು ದಾಟಿದೆ. ದೇಶಾದ್ಯಂತ ಬುಧವಾರ ಒಟ್ಟು 140 ಮಂದಿ ಮಾರಕ ಸೋಂಕಿನಿಂದ ಜೀವ ಕಳೆದುಕೊಂಡಿದ್ದಾರೆ. ಮಹಾರಾಷ್ಟ್ರದಲ್ಲಿ ಗರಿಷ್ಠ ಅಂದರೆ 54 ಮಂದಿ ಬಲಿಯಾಗಿದ್ದಾರೆ. ಬುಧವಾರ ಮಧ್ಯರಾತ್ರಿವರೆಗೆ ದೇಶದಲ್ಲಿ ಕೊರೋನ ಸೋಂಕಿತರ ಸಂಖ್ಯೆ 78,118.

ಮಹಾರಾಷ್ಟ್ರದಲ್ಲಿ 25,922 ಪ್ರಕರಣಗಳು ದಾಖಲಾಗಿದ್ದು, ಮೃತರ ಸಂಖ್ಯೆ 975. ಕಳೆದ ಎಂಟು ದಿನಗಳಿಂದ ಸತತವಾಗಿ ದಿನಕ್ಕೆ ಒಂದು ಸಾವಿರಕ್ಕಿಂತ ಹೆಚ್ಚು ಪ್ರಕರಣಗಳು ರಾಜ್ಯದಲ್ಲಿ ದಾಖಲಾಗುತ್ತಿವೆ. ಕಳೆದ ಎಂಟು ದಿನಗಳಲ್ಲಿ 10397 ಹೊಸ ಪ್ರಕರಣಗಳು ದಾಖಲಾಗಿದ್ದು, 358 ಮಂದಿ ಮೃತಪಟ್ಟಿದ್ದಾರೆ.

ಹಲವು ದಿನಗಳಿಂದ ಶೂನ್ಯ ಪ್ರಕರಣಗಳು ವರದಿಯಾದ ಕೇರಳದಲ್ಲಿ ಕೂಡಾ ಒಂದೇ ದಿನ 10 ಪ್ರಕರಣ ವರದಿಯಾಗಿದೆ. ತಮಿಳುನಾಡಿನಲ್ಲಿ 509 ಹೊಸ ಪ್ರಕರಣಗಳೊಂದಿಗೆ ಒಟ್ಟು ಪ್ರಕರಣಗಳ ಸಂಖ್ಯೆ 5262ಕ್ಕೇರಿದೆ. ಚೆನ್ನೈ ಮಹಾನಗರದಲ್ಲೇ 380 ಪ್ರಕರಣಗಳು ವರದಿಯಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News