ಅರ್ಜುನ ಪ್ರಶಸ್ತಿಗೆ ಜಸ್‌ಪ್ರೀತ್ ಬುಮ್ರಾ ಪ್ರಬಲ ಆಕಾಂಕ್ಷಿ

Update: 2020-05-14 05:33 GMT

ಹೊಸದಿಲ್ಲಿ: ಈ ವರ್ಷದ ಪ್ರತಿಷ್ಠಿತ ಅರ್ಜುನ ಪ್ರಶಸ್ತಿಗಾಗಿ ಬಿಸಿಸಿಐ ನಾಮನಿರ್ದೇಶನದ ಪಟ್ಟಿಗೆ ಭಾರತದ ವೇಗದ ಬೌಲರ್ ಜಸ್‌ಪ್ರೀತ್ ಬುಮ್ರಾ ಸೇರ್ಪಡೆಯಾಗುವ ನಿರೀಕ್ಷೆಯಲ್ಲಿದ್ದಾರೆ. 2019ರಲ್ಲಿ ಹಿರಿತನದ ಆಧಾರದಲ್ಲಿ ರವೀಂದ್ರ ಜಡೇಜ ಅರ್ಜುನ ಪ್ರಶಸ್ತಿ ಪಡೆದಿದ್ದರು.

 ಈ ತಿಂಗಳಾಂತ್ಯದಲ್ಲಿ ಬಿಸಿಸಿಐ ಪದಾಧಿಕಾರಿಗಳು ಪುರುಷರ ಹಾಗೂ ಮಹಿಳಾ ವಿಭಾಗಗಳಿಗೆ ನಾಮನಿರ್ದೇಶನ ಮಾಡುವ ನಿರೀಕ್ಷೆ ಇಲ್ಲ. ಆದಾಗ್ಯೂ ಕಳೆದ ನಾಲ್ಕು ವರ್ಷಗಳಿಂದ ಭರ್ಜರಿ ಪ್ರದರ್ಶನ ನೀಡುತ್ತಿರುವ ಗುಜರಾತ್‌ನ ವೇಗದ ಬೌಲರ್ ಬುಮ್ರಾ ಅತ್ಯಂತ ಅರ್ಹ ಅಭ್ಯರ್ಥಿಯಾಗುವ ಸಾಧ್ಯತೆಯಿದೆ.

ಒಂದು ವೇಳೆ ಪುರುಷರ ವಿಭಾಗದಲ್ಲಿ ಬಿಸಿಸಿಐ ಹಲವು ಹೆಸರುಗಳನ್ನು ಕಳುಹಿಸಿಕೊಟ್ಟರೆ ಶಿಖರ್ ಧವನ್‌ಗೆ ಆದ್ಯತೆ ಸಿಗಬಹುದು. 2018ರಲ್ಲಿ ಧವನ್ ಹೆಸರನ್ನು ಬಿಸಿಸಿಐ ನಾಮನಿರ್ದೇಶನ ಮಾಡಿರುವ ಹೊರತಾಗಿಯೂ ಪ್ರಶಸ್ತಿ ಲಭಿಸಿರಲಿಲ್ಲ. ಕಳೆದ ವರ್ಷ ನಾವು ಪುರುಷರ ವಿಭಾಗದಲ್ಲಿ ಬುಮ್ರಾ, ರವೀಂದ್ರ ಜಡೇಜ ಹಾಗೂ ಮುಹಮ್ಮದ್ ಶಮಿ ಸಹಿತ ಮೂರು ಹೆಸರುಗಳನ್ನು ಕಳುಹಿಸಿಕೊಟ್ಟಿದ್ದೆವು. ಕನಿಷ್ಠ ಮೂರು ವರ್ಷಗಳ ಕಾಲ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಪ್ರದರ್ಶನ ನೀಡುವುದು ಪ್ರಶಸ್ತಿ ಆಯ್ಕೆ ಮಾನದಂಡವಾಗಿದೆ. ಬುಮ್ರಾ ಕಳೆದ ವರ್ಷ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮೂರು ವರ್ಷ ಪೂರೈಸಿದ್ದರು. ಆದರೆ ಹಲವು ವರ್ಷಗಳಿಂದ ಸ್ಥಿರ ಪ್ರದರ್ಶನ ನೀಡುತ್ತಿರುವ ಹಾಗೂ ಹಿರಿಯ ಆಟಗಾರನಾಗಿರುವ ಜಡೇಜಗೆ ಅರ್ಜುನ ಪ್ರಶಸ್ತಿ ಲಭಿಸಿತ್ತು ಎಂದು ಬಿಸಿಸಿಐಮೂಲಗಳು ತಿಳಿಸಿವೆ. 26ರ ಹರೆಯದ ಬುಮ್ರಾ 14 ಟೆಸ್ಟ್ ಪಂದ್ಯಗಳಲ್ಲಿ 68 ವಿಕೆಟ್‌ಗಳು, 64 ಏಕದಿನ ಪಂದ್ಯಗಳಲ್ಲಿ 104 ವಿಕೆಟ್‌ಗಳು ಹಾಗೂ 50 ಟಿ-20 ಪಂದ್ಯಗಳಲ್ಲಿ 59 ವಿಕೆಟ್‌ಗಳನ್ನು ಪಡೆದಿದ್ದಾರೆ.

ನಾಲ್ಕು ವರ್ಷಗಳ ವೃತ್ತಿಜೀವನದಲ್ಲಿ ಬುಮ್ರಾ ಅಮೋಘ ಪ್ರದರ್ಶನ ನೀಡಿದ್ದು, ಐಸಿಸಿ ನಂ.1 ರ್ಯಾಂಕಿನ ಏಕದಿನ ಬೌಲರ್ ಆಗಿದ್ದಾರೆ. ದಕ್ಷಿಣ ಆಫ್ರಿಕ, ಇಂಗ್ಲೆಂಡ್, ಆಸ್ಟ್ರೇಲಿಯ ಹಾಗೂ ವೆಸ್ಟ್ ಇಂಡೀಸ್‌ನಲ್ಲಿ ಐದು ವಿಕೆಟ್ ಗೊಂಚಲು ಪಡೆದ ಏಶ್ಯದ ಏಕೈಕ ಬೌಲರ್ ಆಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಹಿರಿತನದ ಆಧಾರದಲ್ಲಿ ಧವನ್ ಅರ್ಜುನ ಪ್ರಶಸ್ತಿ ಸ್ವೀಕರಿಸಿದರೆ, ಅವರ ಎಲ್ಲ ಸಮಕಾಲೀನರು(ವಿರಾಟ್ ಕೊಹ್ಲಿ, ರವಿಚಂದ್ರನ್ ಅಶ್ವಿನ್, ರೋಹಿತ್ ಶರ್ಮಾ, ಅಜಿಂಕ್ಯ ರಹಾನೆ, ಚೇತೇಶ್ವರ ಪೂಜಾರ ಹಾಗೂ ಜಡೇಜ)ಪ್ರಶಸ್ತಿ ಪಡೆದಂತಾಗುತ್ತದೆ. ಧವನ್ ಕಳೆದ ವರ್ಷ ಗಾಯದ ಸಮಸ್ಯೆ ಯಿಂದಾಗಿ ಗಣನೀಯ ಅವಧಿಯ ತನಕ ಕ್ರಿಕೆಟ್‌ನಿಂದ ದೂರ ಉಳಿದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News