ಜಪಾನ್‌ನ ಯುವ ಕುಸ್ತಿಪಟು ಸಾವು

Update: 2020-05-14 06:08 GMT

ಟೋಕಿಯೊ, ಮೇ 13: ಕೊರೋನ ವೈರಸ್ ಸೋಂಕು ಮತ್ತು ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಜಪಾನ್‌ನ 28 ವರ್ಷದ ಸುಮೋ ಕುಸ್ತಿಪಟು ಬುಧವಾರ ನಿಧನರಾದರು.

ಇದು ಮಹಾಮಾರಿ ಕೋವಿಡ್ -19 ಕಾರಣದಿಂದಾಗಿ ಪ್ರಾಚೀನ ಕ್ರೀಡೆಯಲ್ಲಿ ಮೃತಪಟ್ಟ ಮೊದಲ ಪ್ರಕರಣವಾಗಿದೆ ಎಂದು ರಾಷ್ಟ್ರೀಯ ಕುಸ್ತಿ ಸಂಘ ತಿಳಿಸಿದೆ. ಟೋಕಿಯೊದ ತಕಾಡಗಾವಾದ ಕೆಳ ಶ್ರೇಯಾಂಕದ ಕುಸ್ತಿಪಟು ಶೋಬುಶಿ ಅವರು ಕಳೆದ ಒಂದು ತಿಂಗಳಿನಿಂದ ಈ ಕಾಯಿಲೆಯೊಂದಿಗೆಹೋರಾಟ ನಡೆಸುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಮುಂಜಾನೆ ನಿಧನರಾದರು.

ಎ. 4ರಂದು ಅವರಿಗೆ ಜ್ವರ ಕಾಣಿಸಿಕೊಂಡಿತ್ತು. ಆದರೆ ಸ್ಥಳೀಯ ಸಾರ್ವಜನಿಕ ಆರೋಗ್ಯ ಇಲಾಖಾಕಚೇರಿಯನ್ನು ಸಂಪರ್ಕಿಸಲು ತೊಂದರೆಯಾಯಿತು ಯಾಕೆಂದರೆ ಫೋನ್ ಮಾರ್ಗಗಳು ನಿರಂತರವಾಗಿ ಕಾರ್ಯನಿರತವಾಗಿದ್ದವು ಎಂದು ಸುಮೋ ಅಸೋಸಿಯೇಶನ್ ಹೇಳಿಕೆಯಲ್ಲಿತಿಳಿಸಿದೆ. ಶೋಬುಶಿ ರಕ್ತ ವಾಂತಿ ಮಾಡಲು ಪ್ರಾರಂಭಿಸಿದ ನಂತರ ಎಪ್ರಿಲ್ 8 ರ ಸಂಜೆ ಟೋಕಿಯೊ ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ಅದು ಹೇಳಿದೆ.

ಅಲ್ಲಿನ ಆರಂಭಿಕ ಕೊರೊನಾ ವೈರಸ್ ಪರೀಕ್ಷೆಯು ನೆಗಟಿವ್ ಆಗಿತ್ತು. ಆದರೆ ನಂತರ ಅವರನ್ನು ಇನ್ನೊಂದು ಆಸ್ಪತ್ರೆಗೆ ಎಪ್ರಿಲ್ 10 ರಂದು ದಾಖಲಿಸಲಾಯಿತು. ಬಳಿಕ ಇನ್ನೊಮ್ಮೆ ಪರೀಕ್ಷೆ ನಡೆಸಿದಾಗ ಪಾಸಿಟಿವ್ ಕಂಡು ಬಂತು. ಎಪ್ರಿಲ್ 19ರಿಂದ ಅವರನ್ನು ತೀವ್ರ ನಿಗಾದಲ್ಲಿ ಇರಿಸಲಾಗಿತ್ತು. ‘‘ಒಂದು ತಿಂಗಳ ಕಾಲ ಈ ಕಾಯಿಲೆಯ ವಿರುದ್ಧ ಹೋರಾಡುವುದು ತುಂಬಾ ನೋವಿನ ಸಂಗತಿಯಾಗಿದೆ. ಆದರೆ ಸುಮೋ ಕುಸ್ತಿಪಟು ಸತತ ಪರಿಶ್ರಮದಿಂದ ಸಹಿಸಿಕೊಂಡರು, ಕೊನೆಯವರೆಗೂ ಹೋರಾಡಿದರು’’ ಎಂದು ಸುಮೋ ಅಸೋಸಿಯೇಷನ್ ಕಾರ್ಯದರ್ಶಿ ಹಕ್ಕಾಕು ಹೇಳಿದರು. ಬೆರಳೆಣಿಕೆಯಷ್ಟು ಕುಸ್ತಿಪಟುಗಳು , ಪ್ರಶಿಕ್ಷಣಾರ್ಥಿಗಳು ಮತ್ತು ಸುಮೋ ಸ್ಟೇಬಲ್ ಮಾಸ್ಟರ್ ಗಳು ಜಪಾನ್‌ನಲ್ಲಿ ವೈರಸ್ ಪಾಸಿಟಿವ್ ಪರೀಕ್ಷೆಗೊಳಗಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News