ಪಾಕ್ ಏಕದಿನ ಕ್ರಿಕೆಟ್ ನಾಯಕನಾಗಿ ಆಝಂ ಆಯ್ಕೆ

Update: 2020-05-14 06:47 GMT

ಲಾಹೋರ್(ಪಾಕಿಸ್ತಾನ),: ಬ್ಯಾಟ್ಸ್ ಮನ್ ಬಾಬರ್ ಆಝಂರನ್ನು ಏಕದಿನ ಕ್ರಿಕೆಟ್ ತಂಡದ ನೂತನ ನಾಯಕರನ್ನಾಗಿ ನೇಮಕಗೊಳಿಸಲಾಗಿದೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ)ಬುಧವಾರ ತಿಳಿಸಿದೆ.

 ಬಲಗೈ ಬ್ಯಾಟ್ಸ್‌ಮನ್ ಆಝಂ ಕಳೆದ ಒಂದು ವರ್ಷದಿಂದ ಎಲ್ಲ ಮಾದರಿಯ ಕ್ರಿಕೆಟ್‌ನಲ್ಲಿ ವಿಶ್ವದ ಓರ್ವ ಉತ್ತಮ ಬ್ಯಾಟ್ಸ್ ಮನ್ ಆಗಿ ಹೊರಹೊಮ್ಮಿದ್ದು ಇದೀಗ ಸರ್ಫರಾಝ್ ಅಹಮದ್‌ರಿಂದ ತೆರವಾದ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ.

ಇದೇ ವೇಳೆ, ಅಝರ್ ಅಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ನಾಯಕನಾಗಿ ಮುಂದುವರಿದಿದ್ದಾರೆ. ಆಝಂ ಇದೀಗ ಏಕದಿನ ಹಾಗೂ ಟ್ವೆಂಟಿ-20 ಕ್ರಿಕೆಟ್ ತಂಡಗಳ ನಾಯಕನಾಗಿ ಆಯ್ಕೆಯಾಗಿದ್ದಾರೆ.

 ‘‘ನಾಯಕತ್ವದಲ್ಲಿ ಮುಂದುವರಿಯುತ್ತಿರುವ ಅಝರ್ ಅಲಿ ಹಾಗೂ ಬಾಬರ್ ಆಝಂಗೆ ನಾನು ಅಭಿನಂದನೆ ಸಲ್ಲಿಸುವೆ. ಇದು ಖಂಡಿತವಾಗಿಯೂ ಉತ್ತಮ ನಿರ್ಧಾರ. ಇಬ್ಬರೂ ತಮ್ಮ ಭವಿಷ್ಯದ ಪಾತ್ರಗಳ ಬಗ್ಗೆ ಖಚಿತತೆ ಹಾಗೂ ಸ್ಪಷ್ಟತೆ ಹೊಂದಿರುವ ಅಗತ್ಯವಿದೆ. ಇದೀಗ ಇಬ್ಬರೂ ಭವಿಷ್ಯದತ್ತ ನೋಡಲು ಆರಂಭಿಸಲಿದ್ದಾರೆಂಬ ವಿಶ್ವಾಸ ನನಗಿದೆ’’ಎಂದು ಪಾಕ್‌ನ ಮುಖ್ಯಆಯ್ಕೆಗಾರ ಹಾಗೂ ಮುಖ್ಯ ಕೋಚ್ ಕೂಡ ಆಗಿರುವ ಮಿಸ್ಬಾವುಲ್ ಹಕ್ ಪ್ರಕಟನೆಯೊಂದರಲ್ಲಿ ತಿಳಿಸಿದ್ದಾರೆ.

 ಮುಂಬರುವ ಋತುವಿನಲ್ಲಿ ಪಾಕಿಸ್ತಾನ ತಂಡ ಐರ್‌ಲ್ಯಾಂಡ್‌ನಲ್ಲಿ ಜುಲೈನಲ್ಲಿ ನಿಗದಿಯಾಗಿರುವ 2 ಪಂದ್ಯಗಳ ಟ್ವೆಂಟಿ-20 ಸರಣಿಯಲ್ಲಿ ಆಡಲಿದ್ದು, ಇಂಗ್ಲೆಂಡ್‌ನಲ್ಲಿ(ಜುಲೈ-ಸೆಪ್ಟಂಬರ್)ಮೂರು ಟೆಸ್ಟ್ ಹಾಗೂ ಮೂರು ಟ್ವೆಂಟಿ-20, ದಕ್ಷಿಣ ಆಫ್ರಿಕಾದಲ್ಲಿ(ಅಕ್ಟೋಬರ್)ಮೂರು ಏಕದಿನ ಹಾಗೂ ಮೂರು ಟಿ-20 ಹಾಗೂ ಝಿಂಬಾಬ್ವೆಯಲ್ಲಿ ನವೆಂಬರ್‌ನಲ್ಲಿ ನಡೆಯಲಿರುವ ಸ್ವದೇಶಿ ಸರಣಿಯಲ್ಲಿ ಮೂರು ಏಕದಿನ ಹಾಗೂ ಮೂರು ಟ್ವೆಂಟಿ-20 ಪಂದ್ಯಗಳನ್ನಾಡಲಿದೆ.

ಪಾಕ್ ತಂಡ ಡಿಸೆಂಬರ್‌ನಲ್ಲಿ ನ್ಯೂಝಿಲ್ಯಾಂಡ್‌ನಲ್ಲಿ 2 ಟೆಸ್ಟ್ ಹಾಗೂ 3 ಟಿ-20, ಜನವರಿ 2021ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 2 ಟೆಸ್ಟ್, 3 ಟಿ-20 ಹಾಗೂ ಎಪ್ರಿಲ್ 2021ರಲ್ಲಿ ಝಿಂಬಾಬ್ವೆ ವಿರುದ್ಧ 2 ಟೆಸ್ಟ್ ಹಾಗೂ 3 ಟಿ-20 ಪಂದ್ಯಗಳ ಸರಣಿಯಲ್ಲಿ ಆಡುವ ಯೋಜನೆಯಿದೆ.

ಪಾಕ್ ತಂಡ ದ್ವಿಪಕ್ಷೀಯ ಸರಣಿಗಳಲ್ಲದೆ ಏಶ್ಯಕಪ್ ಟಿ-20 ಟೂರ್ನಮೆಂಟ್ ಹಾಗೂ ಆಸ್ಟ್ರೇಲಿಯದಲ್ಲಿ ಐಸಿಸಿ ಟಿ-20 ಪುರುಷರ ವಿಶ್ವಕಪ್‌ನಲ್ಲಿ ಆಡಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News