ವಿಟ್ಲ: ಮೇ 18ರಿಂದ ಎಲ್ಲ ಜವಳಿ, ಫ್ಯಾನ್ಸಿ, ಫೂಟ್ ವೇರ್ ಅಂಗಡಿಗಳು ಬಂದ್

Update: 2020-05-15 06:27 GMT

ವಿಟ್ಲ, ಮೇ 15: ರಮಝಾನ್ ಹಬ್ಬದ ಪ್ರಯುಕ್ತ ಖರೀದಿಗಾಗಿ ಜನಜಂಗುಳಿ ಸೇರುವ ಸಂಭವವಿರುವುದರಿಂದ ಕೋವಿಡ್-19 ನಿಯಂತ್ರಣದ ಉದ್ದೇಶದಿಂದ ವಿಟ್ಲ ಪೇಟೆಯ ಜವಳಿ ವಸ್ತ್ರ, ಪಾದರಕ್ಷೆ, ಫ್ಯಾನ್ಸಿ, ಟೈಲರ್ ಅಂಗಡಿಗಳನ್ನು ಮೇ 18ರಿಂದ ರಮಝಾನ್ ತಿಂಗಳು ಮುಗಿಯುವ ತನಕ ಸಂಪೂರ್ಣವಾಗಿ ಮುಚ್ಚಲು ನಿರ್ಧರಿಸಲಾಗಿದೆ.

 ಮೇ 13ರಂದು ವಿಟ್ಲ ಅರಮನೆ ರಸ್ತೆಯ ಸುಭಾಶ್‌ನಾಯಕ್ ಅವರ ಕಟ್ಟಡದ 2ನೇ ಮಹಡಿಯ ಕಚೇರಿಯಲ್ಲಿ ನಡೆದ ವಿಟ್ಲ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಭೆಯಲ್ಲಿ ಈ ಬಗ್ಗೆ ತೀರ್ಮಾನಿಸಲಾಗಿದೆ.

ವಿಟ್ಲ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ (ವರ್ತಕರ ಸಂಘ) ಅಧ್ಯಕ್ಷ ಬಾಬು ಕೆ.ವಿ. ವಿಟ್ಲ ಸಭೆಯ ಅಧ್ಯಕ್ಷತೆ ವಹಿಸಿದರು. ಮಾರ್ಚ್ 17ರ ನಂತರದ 4ನೇ ಹಂತದ ಸರಕಾರದ ಲಾಕ್‌ಡೌನ್ ನಿಯಮಗಳಿಗೆ ಅನುಗುಣವಾಗಿ ಮುಂದೆ ವಿಟ್ಲದ ವರ್ತಕರು ಕೈಗೊಳ್ಳಬೇಕಾದ ತೀರ್ಮಾನದ ಬಗ್ಗೆ ಇನ್ನೊಂದು ಸಭೆ ಕರೆಯಲು ಸಭೆಯಲ್ಲಿ ನಿರ್ಧರಿಸಲಾಯಿತು.

ಕೋವಿಡ್19 ಮುನ್ನೆಚ್ಚರಿಕಾ ಕ್ರಮವಾಗಿ ವಿಟ್ಲದ ವರ್ತಕರು ಸುರಕ್ಷಿತ ಅಂತರದ ಪಾಲನೆಗಾಗಿ ಕೆಲವೊಂದು ಸೂಚನೆಗಳನ್ನು ಪಾಲಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.

ಮಾಸ್ಕ್ ಧರಿಸದೇ ಬರುವ ಗ್ರಾಹಕರಲ್ಲಿ ಜಾಗೃತಿ ಮೂಡಿಸುವುದು. ಅಂತಹ ಗ್ರಾಹಕರಿಗೆ ಮಾಸ್ಕ್ ಧರಿಸುವಂತೆ ಕಟ್ಟುನಿಟ್ಟಿನ ಕ್ರಮ ಅನುಸರಿಸುವಂತೆ ಪ್ರೇರೇಪಿಸುವುದು. ಸಾಧ್ಯವಾದರೆ ಅಂಗಡಿಗಳಲ್ಲಿ ಮಾಸ್ಕ್ ಧರಿಸದವರಿಗೆ ಪ್ರವೇಶವಿಲ್ಲ ಎಂಬ ಫಲಕ ಹಾಕುವುದು. ಎಲ್ಲ ಅಂಗಡಿಗಳಲ್ಲಿ ಸ್ಯಾನಿಟೈಸರ್ ಉಪಯೋಗಿಸುವುದು. ಸುರಕ್ಷಿತ ಅಂತರ ಕಾಯ್ದುಕೊಳ್ಳಲು ಕ್ರಮ ಕೈಗೊಳ್ಳುವುದು. ವಿಟ್ಲ ಪಟ್ಟಣ ಪಂಚಾಯತು ವಿಟ್ಲ ವ್ಯಾಪ್ತಿಯ ವಾಣಿಜ್ಯ ಅಂಗಡಿ ಮುಗ್ಗಟ್ಟುಗಳಿಗೆ ಸಮಯ ನಿಗದಿ ಮಾಡಿ ಬಂದ್ ಮಾಡಲು ನಿರ್ದೇಶಿಸಿದರೆ ಅದಕ್ಕೆ ವರ್ತಕರ ಸಂಘದಿಂದ ಬೆಂಬಲ ಸೂಚಿಸಲು ಸಭೆ ತೀರ್ಮಾನಿಸಿತು.

ವರ್ತಕರ ಸಂಘದ ಗೌರವಾಧ್ಯಕ್ಷ ಜಗನ್ನಾಥ ಸಾಲ್ಯಾನ್, ರಾಮದಾಸ ಶೆಣೈ, ರಶೀದ್ ವಿಟ್ಲ (ಅಲ್ ನೂರ್), ಶ್ರೀಕೃಷ್ಣ ವಿಟ್ಲ ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು. ಕೋಶಾಧಿಕಾರಿ ಅಂತೋನಿ ಲೋಬೊ, ಅಚ್ಯುತ ಈಶ್ವರ ಆ್ಯಂಡ್ ಸನ್ಸ್, ವಿ.ಎಸ್.ಇಬ್ರಾಹೀಂ, ಅನಂತ ಪ್ರಸಾದ್, ಆರ್.ಎಸ್.ಲಕ್ಷ್ಮಣ ಪೂಜಾರಿ, ಶೀನ ಕಾಶೀಮಠ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯದರ್ಶಿ ಕ್ಲಿಫರ್ಡ್ ವೇಗಸ್ ಸ್ವಾಗತಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News