ಮೇ 18ರಂದು ದುಬೈನಿಂದ 2ನೇ ವಿಮಾನ ಮಂಗಳೂರಿಗೆ

Update: 2020-05-15 08:47 GMT

ಮಂಗಳೂರು, ಮೇ 15: ದುಬೈನಿಂದ ಕನ್ನಡಿಗರನ್ನು ಹೊತ್ತ ಎರಡನೇ ವಿಮಾನ ಮೇ 18ರಂದು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಲಿದೆ ಎಂದು ಜಿಲ್ಲಾಧಿಕಾರಿ ಸಿಂಧು ಬಿ. ರೂಪೇಶ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಜಿಲ್ಲಾಧಿಕಾರಿ, ಅವರೆಲ್ಲಾ ಯಾವ ಜಿಲ್ಲೆಯವರು, ಎಷ್ಟು ಮಂದಿ ಪ್ರಯಾಣಿಕರಿದ್ದಾರೆ ಎಂಬ ಬಗ್ಗೆ ನಿಖರವಾದ ಮಾಹಿತಿ ಲಭಿಸಿಲ್ಲ. ಆದರೆ ಕೇಂದ್ರ ಹಾಗೂ ರಾಜ್ಯ ಆರೋಗ್ಯ ಇಲಾಖೆಯ ನಿಯಮಗಳಂತೆ ಅವರೆಲ್ಲರೂ ತಮ್ಮದೇ ಸ್ವಂತ ಖರ್ಚಿನಲ್ಲಿ ಕ್ವಾರಂಟೈನ್‌ಗೊಳಪಡುವ ಷರತ್ತಿಗೆ ಒಪ್ಪಿಕೊಂಡೇ ಆಗಮಿಸುತ್ತಿದ್ದಾರೆ. ಮಂಗಳೂರು ವಿಮಾನ ನಿಲ್ದಾಣದಲ್ಲಿ ದುಬೈನಿಂದ ಬಂದ ಪ್ರಥಮ ವಿಮಾನದಲ್ಲಿ ಬಂದ ಪ್ರಯಾಣಿಕರಿಗೆ ತೊಂದರೆಗಳಾಗಿರುವ ಬಗ್ಗೆ ದೂರುಗಳ ಹಿನ್ನೆಲೆಯಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ವಿಮಾನ ನಿಲ್ದಾಣ ಪ್ರಾಧಿಕಾರ ನಿರ್ದೇಶಕರ ಜತೆ ಚರ್ಚಿಸಲಾಗಿದೆ. ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ಪ್ರಯಾಣಿಕರು ಕೂಡಾ ಜಿಲ್ಲಾಡಳಿತಕ್ಕೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ದ.ಕ. ಕೊರೋನ ಸೋಂಕಿನ ಮೂಲ ಪತ್ತೆ: ಕೇರಳದಿಂದ ಅಂಕಿಅಂಶ ಸಂಗ್ರಹಕ್ಕೆ ರಾಜ್ಯ ಸರಕಾರಕ್ಕೆ ವರದಿ

 ದ.ಕ. ಜಿಲ್ಲೆಯಲ್ಲಿ ಕೊರೋನ ಸೋಂಕು ವ್ಯಾಪಕವಾಗಲು ಪಡೀಲ್‌ನ ಖಾಸಗಿ ಆಸ್ಪತ್ರೆ ಕಾರಣವೆನ್ನಲಾಗುತ್ತಿರುವ ಕುರಿತಂತೆ ಮೂಲ ಪತ್ತೆಗೆ ಜಿಲ್ಲಾಡಳಿತದಿಂದ ಕ್ರಮವಾಗುತ್ತಿದೆ. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ರೋಗಿಗಳ ಅಂಕಿಅಂಶವನ್ನು ರಾಜ್ಯ ಸರಕಾರವು ಕೇರಳ ಸರಕಾರದಿಂದ ಪಡೆಯಬೇಕಾಗಿದೆ. ಆ ಬಳಿಕ ಮೂಲ ಪತ್ತೆ ತನಿಖೆ ಸಮರ್ಪಕವಾಗಲಿದೆ ಎಂದು ಸುದ್ದಿಗಾರರ ಪ್ರಶ್ನೆಗೆ ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಮಚಂದ್ರ ಬಾಯರಿ ತಿಳಿಸಿದ್ದಾರೆ.

ಕಾಸರಗೋಡಿನಲ್ಲಿ ಜನವರಿ 30ರಂದು ಕೊರೋನ ಸೋಂಕು ಪತ್ತೆಯಾಗಿತ್ತು. ಆ ಹಿನ್ನೆಲೆಯಲ್ಲಿ ಕಾಸರಗೋಡು ಸೇರಿದಂತೆ ಕೇರಳದಿಂದ ಪಡೀಲ್‌ನ ಖಾಸಗಿ ಆಸ್ಪತ್ರೆಯಲ್ಲಿ ಫೆಬ್ರವರಿ ತಿಂಗಳಿನಿಂದ ಚಿಕಿತ್ಸೆ ಪಡೆದವರ ಮಾಹಿತಿ ಕೋರಲಾಗಿದೆ. ಫೆ.1ರಿಂದ ಕೇರಳದಿಂದ ಹೊರ ರೋಗಿಗಳಿಗಾಗಿ 1,200ಕ್ಕೂ ಅಧಿಕ ಮಂದಿ ಹಾಗೂ ಒಳರೋಗಿಗಳಾಗಿ 177 ಮಂದಿ ಚಿಕಿತ್ಸೆ ಪಡೆದಿರುವ ಮಾಹಿತಿ ಇದೆ. ಇವರಲ್ಲಿ ಯಾರಿಗಾದರೂ ಸೋಂಕು ದೃಢವಾಗಿದೆಯೇ ಅಥವಾ ಕ್ವಾರಂಟೈನ್‌ಗೊಳಪಟ್ಟಿದ್ದಾರೆಯೇ ಎಂಬ ಬಗ್ಗೆ ಮಾಹಿತಿಯನ್ನು ಕೇರಳ ಸರಕಾರದಿಂದ ಕೋರುವಂತೆ ಜಿಲ್ಲಾಡಳಿತ ಎರಡು ದಿನಗಳ ಹಿಂದೆ ರಾಜ್ಯ ಸರಕಾರಕ್ಕೆ ಮನವಿ ಮಾಡಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News