ವಲಸೆ ಕಾರ್ಮಿಕರಿಗೆ ಕಳಪೆ ಅಕ್ಕಿ ಪೂರೈಕೆ ಕುರಿತಂತೆ ಕೂಲಂಕುಷ ಪರಿಶೀಲನೆ: ದ.ಕ. ಜಿಲ್ಲಾಧಿಕಾರಿ

Update: 2020-05-15 08:53 GMT

ಮಂಗಳೂರು, ಮೇ 15: ಜಾರ್ಖಂಡ್, ಬಿಹಾರ, ಉತ್ತರ ಪ್ರದೇಶ ಸೇರಿದಂತೆ ತಮ್ಮ ಊರುಗಳಿಗೆ ತೆರಳಲು ಜೋಕಟ್ಟೆ ಪ್ರದೇಶದಲ್ಲಿ ಬೀಡು ಬಿಟ್ಟಿದ್ದ ವಲಸೆ ಕಾರ್ಮಿಕರಿಗೆ ಪೂರೈಕೆ ಮಾಡಲಾಗಿದ್ದ ಕಳಪೆ ಅಕ್ಕಿ ಇಲಾಖೆಯಿಂದ ಪೂರೈಕೆ ಮಾಡಿದ್ದಲ್ಲ ಎಂಬ ವರದಿಯನ್ನು ಕಾರ್ಮಿಕ ಇಲಾಖೆ ನೀಡಿದೆ. ಹಾಗಾಗಿ ಆ ಕಳಪೆ ಅಕ್ಕಿ ಕುರಿತಂತೆ ಕೂಲಂಕುಷ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಪ್ರಶ್ನೆಗೆ ಈ ಪ್ರತಿಕ್ರಿಯೆ ನೀಡಿದ ಜಿಲ್ಲಾಧಿಕಾರಿ, ಕಾರ್ಮಿಕ ಇಲಾಖೆಯು 21,000 ಕಾರ್ಮಿಕರಿಗೆ ಆಹಾರ ಪೂರೈಕೆ ಮಾಡಿದೆ. ಕಳಪೆ ಆಹಾರ ಕುರಿತಂತೆ ನಮಗೆ ದೂರು ಬಂದಿಲ್ಲ ಎಂದು ಅವರು ಹೇಳಿದರು.

ಜೋಕಟ್ಟೆ ಬಳಿ ಕಾರ್ಮಿಕರಿಗೆ ನೀಡಲಾದ ಕಳಪೆ ಅಕ್ಕಿ ಕುರಿತು ಡಿವೈಎಫ್‌ಐ ಸಂಘಟನೆ ದೂರು ನೀಡಿರುವ ಬಗ್ಗೆ ಪ್ರಶ್ನಿಸಿದಾಗ, ಈ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ಹೇಳಿದರು. ಇದಕ್ಕೂ ಮೊದಲು ವಲಸೆ ಕಾರ್ಮಿಕರ ಪ್ರಯಾಣದ ಬಗ್ಗೆ ಮಾಹಿತಿ ನೀಡಿದ ಜಿಲ್ಲಾಧಿಕಾರಿ, ಈಗಾಗಲೇ ಜಿಲ್ಲೆಯಿಂದ ವಿವಿಧ ರಾಜ್ಯಗಳಿಗೆ 12,998 ಮಂದಿ ರೈಲಿನ ಮೂಲಕ ತೆರಳಿದ್ದಾರೆ. ಇಂದು ಕೂಡಾ ಬಿಹಾರ ಮತ್ತು ಜಾರ್ಖಂಡ್‌ಗೆ ರೈಲು ಪ್ರಯಾಣ ಬೆಳೆಸಲಿದೆ ಎಂದು ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News