ಕಾರ್ಮಿಕರು, ಅನಿವಾಸಿ ಕನ್ನಡಿಗರಿಗೆ ತೊಂದರೆಗೆ ಜನಪ್ರತಿನಿಧಿಗಳ ಹಸ್ತಕ್ಷೇಪ ಕಾರಣ: ರಮಾನಾಥ ರೈ

Update: 2020-05-15 09:18 GMT

ಮಂಗಳೂರು, ಮೇ 15: ಕೊರೋನ ಸೋಂಕಿನ ಸಂಕಷ್ಟದ ಜತೆಯಲ್ಲೇ, ಸುಶಿಕ್ಷಿತರ ಜಿಲ್ಲೆಯಾದ ದಕ್ಷಿಣ ಕನ್ನಡದಲ್ಲಿ ವಲಸೆ ಕಾರ್ಮಿಕರು, ಅನಿವಾಸಿ ಕನ್ನಡಿಗರಿಗೆ ತೊಂದರೆಯಾಗಲು ಅಧಿಕಾರಿಗಳ ಕಾರ್ಯದಲ್ಲಿ ಚುನಾಯಿತ ಜನಪ್ರತಿನಿಧಿಗಳ ಹಸ್ತಕ್ಷೇಪ, ಎಡವಟ್ಟು ಕಾರಣ ಎಂದು ಮಾಜಿ ಸಚಿವ ರಮಾನಾಥ ರೈ ಆರೋಪಿಸಿದ್ದಾರೆ.

ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಅಭಿವೃದ್ಧಿಗೆ ಕಾರ್ಮಿಕರು, ವಲಸೆ ಕಾರ್ಮಿಕರು ಸೇರಿದಂತೆ ಅನಿವಾಸಿ ಕನ್ನಡಿಗರು ಬಹಳಷ್ಟು ಕೊಡುಗೆ ನೀಡಿದ್ದಾರೆ. ಆದರೆ ಸಂಕಷ್ಟದ ಸಂದರ್ಭದಲ್ಲಿ ಅವರೆಲ್ಲರನ್ನೂ ತೀರಾ ನಿರ್ಲಕ್ಷದಿಂದ ಕಾಣಲಾಗಿದೆ. ಅಧಿಕಾರಿಗಳಿಗೆ ಆಡಳಿತ ನಡೆಸಲು ಜನಪ್ರತಿನಿಧಿಗಳು ಬಿಡದ ಕಾರಣ ಸಮಸ್ಯೆಯಾಗಿದೆ ಎಂದು ದೂರಿದ್ದಾರೆ.

ಸಂಕಷ್ಟದಲ್ಲಿದ್ದ ವಲಸೆ ಕಾರ್ಮಿಕರಿಗೆ ಕಾಂಗ್ರೆಸ್ ನಾಯಕರು ಸಾಂತ್ವನಿಸಲು ಹೋದರೆ, ಸೋಂಕು ಬಂದರೆ ಅದಕ್ಕೆ ಕಾಂಗ್ರೆಸ್ ಕಾರಣ ಎಂದೆನ್ನುವ ಮೂಲಕ ರಾಜಕೀಯ ಮಾಡುತ್ತಾರೆ. ಜನಸಾಮಾನ್ಯರು ಸುರಕ್ಷಿತ ಅಂತರವನ್ನು ಕಾಯ್ದುಕೊಂಡು ಕೊರೋನ ನಿಯಂತ್ರಿಸುವಲ್ಲಿ ಜವಾಬ್ದಾರಿಯುತ ನಡೆಯನ್ನು ಆಡಳಿತ ವಹಿಸಬೇಕಾಗಿತ್ತು. ಲಾಕ್‌ಡೌನ್ ಸಂದರ್ಭ ದಿನಬಳಕೆಯ ಆಹಾರ ವಸ್ತುಗಳ ಕಿಟ್‌ಗಳನ್ನು ಅವರ ಮನೆಗಳಿಗೆ ತಲುಪಿಸುವಂತೆ ಕೋರಲಾಗಿತ್ತು. ಆದರೆ ಆ ಕಾರ್ಯವನ್ನು ಮಾಡಲಾಗಿಲ್ಲ. ಕೇರಳದಲ್ಲಿ ಪಂಚಾಯತ್‌ಗಳಲ್ಲಿ ಗಂಜಿ ಕೇಂದ್ರ ತೆರೆದು ಕಾರ್ಮಿಕರು ಸೇರಿದಂತೆ ಜನಸಾಮಾನ್ಯರಿಗೆ ತೊಂದರೆಯಾಗದಂತೆ ಕ್ರಮ ವಹಿಸಲಾಗಿತ್ತು. ಈ ನಿಟ್ಟಿನಲ್ಲಿ ರಾಜ್ಯ ಸರಕಾರ ಕ್ರಮ ವಹಿಸಿಲ್ಲ. ರೈತರು ಬೆಳೆದ ಬೆಳೆಯ ಖರೀದಿ ಸೇರಿದಂತೆ ಕಾರ್ಮಿಕರನ್ನು ಗೌರವದಿಂದ ಕಾಣಲಾಗಿಲ್ಲ ಎಂದು ರೈ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪ್ಯಾಕೇಜ್ ಘೋಷಣೆ ಮಾಡುತ್ತಾರೆ. ಆದರೆ ಅದು ಕೆಲವು ಬ್ಯಾಂಕ್ ಸಾಲದ ರೂಪದಲ್ಲಿ. ಅದು ಸಿಕ್ಕ ಮೇಲೆ ಮಾತನಾಡಬಹುದು. ಕಳೆದ ವರ್ಷ ಪ್ರಾಕೃತಿಕ ವಿಕೋಪದಲ್ಲಿ ಮನೆಗಳನ್ನು ಕಳೆದುಕೊಂಡವರಿಗೆ ಐದು ಲಕ್ಷ ರೂ. ಕೊಡುವುದಾಗಿ ಘೋಷಿಸಲಾಗಿತ್ತು. ಎಷ್ಟು ಮಂದಿಗೆ ಸೂರು ಒದಗಿಸಲಾಗಿದೆ ಎಂದು ಸರಕಾರ ಹೇಳಲಿ ಎಂದವರು ಒತ್ತಾಯಿಸಿದರು.

ವಿದ್ಯುತ್ ಬಿಲ್ ಗೊಂದಲದ ಬಗ್ಗೆ ಪ್ರತಿಕ್ರಿಯಿಸಿದ ರಮಾನಾಥ ರೈ, ಈ ಬಗ್ಗೆ ಜಿಲ್ಲಾಧಿಕಾರಿ ಮಧ್ಯ ಪ್ರವೇಶಿಸಿ ತನಿಖೆ ಮಾಡಬೇಕು ಎಂದರು.

ವಲಸೆ ಕಾರ್ಮಿಕರು ಜಿಲ್ಲೆಯಿಂದ ಅವರ ಊರುಗಳಿಗೆ ತೆರಳಿದರೆ ಮತ್ತೆ ಅವರು ವಾಪಾಸಾಗುವುದು ಅನಿಶ್ಚಿತವಾಗಿದ್ದು, ಇದರಿಂದ ಜಿಲ್ಲೆಯ ಅಭಿವೃದ್ಧಿಗೆ ಬಾಧಕವಾಗಲಿದೆ ಎನ್ನುವುದು ವಾಸ್ತವ. ಆದರೆ ಅವರನ್ನು ಉಳಿಸಿಕೊಳ್ಳಲು ಜಿಲ್ಲಾಡಳಿತ, ಸರಕಾರ ಯಾವ ಕ್ರಮ ಕೈಗೊಂಡಿದೆ ಎಂದು ಪ್ರಶ್ನಿಸಿದ ಮಾಜಿ ಸಚಿವ ರಮಾನಾಥ ರೈ, ಕನಿಷ್ಠ ಅವರನ್ನು ಅತಿಥಿ ಕಾರ್ಮಿಕರೆಂದು ಸಂಬೋಧಿಸಿದರೆ ಸಾಕಿತ್ತು ಎಂದರು.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಶಶಿಧರ ಹೆಗ್ಡೆ, ಅಬ್ದುಲ್ ರವೂಫ್, ಇಬ್ರಾಹೀಂ ಕೋಡಿಜಾಲ್, ಭಾಸ್ಕರ ಕೆ., ಮುಹಮ್ಮದ್ ಮೋನು, ಸದಾಶಿವ ಉಳ್ಳಾಲ್, ಶಾಲೆಟ್ ಪಿಂಟೋ, ಸದಾಶಿವ ಶೆಟ್ಟಿ, ಸುರೇಂದ್ರ ಕಾಂಬ್ಳಿ, ಬೇಬಿ ಕುಂದರ್, ಹರಿನಾಥ್, ಅಶೋಕ್ ಡಿ.ಕೆ., ಶಾಹುಲ್ ಹಮೀದ್, ಶುಭೋದಯ ಆಳ್ವ, ನಝೀರ್ ಬಜಾಲ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News