ಸಂಕಷ್ಟದ ದಿನಗಳಲ್ಲಿ ಒಬ್ಬೊಬ್ಬರಿಗೆ ಪರಸ್ಪರ ಸಹಾಯ, ಸಹಕಾರ ಮಾಡೋಣ: ಶಾಸಕ ಯು.ಟಿ.ಖಾದರ್

Update: 2020-05-17 13:00 GMT

ಬಂಟ್ವಾಳ, ಮೇ 17: ಲಾಕ್ ಡೌನ್ ನಿಂದ ಕಾರ್ಮಿಕರು, ಶ್ರಮ ಜೀವಿಗಳ, ಬಡ, ಮಧ್ಯಮ ವರ್ಗದ ಕುಟುಂಬಗಳು ತೀವ್ರ ಸಂಕಷ್ಟಕ್ಕೆ ಒಳಗಾ ಗಿದ್ದು ಈ ಕಾಲಘಟ್ಟಗಳಲ್ಲಿ ನಾವು ಪರಸ್ಪರ ಒಬ್ಬೊಬ್ಬರಿಗೆ ಸಹಾಯ, ಸಹಕಾರ ಮಾಡಲು ಸಾಧ್ಯವಾಗದಿದ್ದರೆ ಮತ್ತೆ ಯಾವಾಗ ಮಾಡಲು ಸಾಧ್ಯ ಎಂದು ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕ ಯು.ಟಿ.ಖಾದರ್ ಪ್ರಶ್ನಿಸಿದರು. 

ತನ್ನ ವೈಯಕ್ತಿಕ ಖರ್ಚಿನಲ್ಲಿ ಪುದು, ತುಂಬೆ, ಕಳ್ಳಿಗೆ, ಮೇರಮಜಲು, ಕೊಡ್ಮಾನ್ ಗ್ರಾಮಗಳ ಟೈಲರ್ ಗಳಿಗೆ ಫರಂಗಿಪೇಟೆ ಸೇವಾಂಜಲಿ ಪ್ರತಿಷ್ಠಾನದ ಸಭಾ ಭವನದಲ್ಲಿ ರವಿವಾರ ಆಹಾರ ಸಾಮಗ್ರಿಗಳನ್ನು ವಿತರಿಸಿದ ಬಳಿಕ ಅವರು ಮಾತನಾಡಿದರು. 

ಈಗಾಗಲೇ ಒಂದೂವರೆ ತಿಂಗಳಿಂದ ಕೆಲಸವಿಲ್ಲದೆ ಟೈಲರ್ ಗಳ ಕುಟುಂಬಗಳು ತೀವ್ರ ಸಂಕಷ್ಟಕ್ಕೆ ಒಳಗಾಗಿವೆ. ಜನರು ಇನ್ನೂ ಅವರ ಬಳಿ ಹೋಗದಿದ್ದರೆ ಇನ್ನಷ್ಟು ಸಂಕಷ್ಟಕ್ಕೆ ಒಳಗಾಗಲಿದ್ದಾರೆ. ಅವರು ಸ್ವಾಭಿಮಾನದಿಂದ ಬದುಕಬೇಕು ಎಂಬುದು ನಮ್ಮ ಆಶಯ. ಅದಕ್ಕಾಗಿ ಮಾನವೀಯ ನೆಲೆಯಲ್ಲಿ ನಮ್ಮಿಂದಾಗುವ ಸಹಕಾರ ನೀಡುತ್ತಿದ್ದೇವೆ ಎಂದು ಅವರು ಹೇಳಿದರು. 

ಕೇಂದ್ರ ಸರಕಾರ ಇಪ್ಪತ್ತು ಲಕ್ಷ ಕೋಟಿ ರೂಪಾಯಿ ಪ್ಯಾಕೇಜ್ ನಲ್ಲಿ ಟೈಲರ್ ಗಳ ಕಲ್ಯಾಣಕ್ಕೆ ಹಣ ಮೀಸಲಿಡದಿರುವುದು ದುರದೃಷ್ಟಕರವಾಗಿದೆ. ಹಾಗೆಯೇ ರಾಜ್ಯ ಸರಕಾರ ಕೂಡಾ ಟೈಲರ್ ಗಳ ಕಷ್ಟಕ್ಕೆ ಸ್ಪಂದಿಸಿಲ್ಲ. ಟೈಲರ್ ಗಳ ಕಷ್ಟಗಳ ಬಗ್ಗೆ ಸರಕಾರದ ಕಣ್ಣು ತೆರೆಸುವ ಕೆಲಸ ಆಗಬೇಕು. ಟೈಲರ್ ಗಳನ್ನು ಸರಕಾರ ಕೂಡಲೇ ಪರಿಗಣಿಸಿ ಅವರಿಗೆ ಬೇಕಾದ ನೆರವನ್ನು ಕೂಡಲೇ ಘೋಷಿಸಬೇಕು ಎಂದು ಒತ್ತಾಯಿಸಿದರು. 

ಇಪ್ಪತ್ತೊಂದು ವರ್ಷಗಳ ಹಿಂದೆ ನನ್ನ ತಂದೆ‌ ಟೈಲರ್ ಅಸೋಸಿಯೇಷನ್ ಅನ್ನು ತೊಕ್ಕೋಟಿನಲ್ಲಿ ಉದ್ಘಾಟಿಸಿದ್ದರು. ಆ ಬಳಿಕ ನಾನು ಶಾಸಕನಾಗಿ ಟೈಲರ್ ಗಳ ಕ್ಷೇಮಾಭಿವೃದ್ಧಿಗೆ ಬೇಕಾಗಿ ವಿಧಾನ ಸೌಧದಲ್ಲಿ ಸರಕಾರದ ಗಮನ ಸೆಳೆದಿದ್ದೇನೆ. ಕೊರೋನ ಸಂಕಷ್ಟದ ಈ ಕಾಲದಲ್ಲಿ ನಾವೇಲ್ಲರೂ ಪರಸ್ಪರ ಸಹಾಯ, ಸಹಕಾರದಿಂದ ಬಾಳೋಣ. ಮಾರಕ ಕೊರೋನ ವೈರಸ್ ಆದಷ್ಟು ಬೇಗ ಜಗತ್ತಿನಿಂದ ನಾಶವಾಗಲಿ ಎಂದು ಹೇಳಿದರು. 

ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಮಾತನಾಡಿ, ಶಾಸಕ ಯು.ಟಿ.ಖಾದರ್ ಅವರು ತನ್ನ ಕ್ಷೇತ್ರದಾದ್ಯಂತ ಲಾಕ್ ಡೌನ್ ನಿಂದ ಸಂಕಷ್ಟದಲ್ಲಿರುವ ಟೈಲರ್ ಗಳು, ಆಟೋ, ಗೂಡ್ಸ್, ಪ್ರವಾಸಿ ಕಾರುಗಳ ಚಾಲಕರು, ಆಶಾ ಕಾರ್ಯಕರ್ತೆಯರು, ಅಕ್ಷರ ದಾಸೋಹ ಸಿಬ್ಬಂದಿ ಸಹಿತ ಸಾವಿರಾರು ಕಾರ್ಮಿಕರು, ಶ್ರಮ ಜೀವಿಗಳಿಗೆ ಜಾತಿ, ಧರ್ಮ, ಪಕ್ಷ ಎಂಬ ಭೇದ ಭಾವ ಇಲ್ಲದೆ ಆಹಾರ ಸಾಮಗ್ರಿಗಳನ್ನು ವಿತರಿಸುವ ಮೂಲಕ ನೆರವಾಗುತ್ತಿದ್ದಾರೆ. ಇದು ಅವರ ಜಾತ್ಯತೀತ ಮತ್ತು ಮಾನವೀಯ ಗುಣವನ್ನು ತೋರಿಸುತ್ತದೆ ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಮಂಗಳೂರು ತಾಪಂ ಅಧ್ಯಕ್ಷ ಮುಹಮ್ಮದ್ ಮೋನು, ಪುದು ಗ್ರಾಪಂ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ, ಸೇವಾಂಜಲಿ ಪ್ರತಿಷ್ಠಾನದ ಸಂಚಾಲಕ ಕೆ.ಕೆ.ಪೂಂಜ, ಜಿಪಂ ಮಾಜಿ ಸದಸ್ಯ ಉಮರ್ ಫಾರೂಕ್ ಫರಂಗಿಪೇಟೆ, ದ.ಕ. ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಎನ್.ಎಸ್.ಕರೀಂ, ಮುಡಿಪು ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಇಮ್ತಿಯಾಝ್ ಆಲ್ಫಾ ತುಂಬೆ, ಪುದು ಗ್ರಾಪಂ ಉಪಾಧ್ಯಕ್ಷ ಲಿಡಿಯಾ ಪಿಂಟೋ, ಟೈಲರ್ ಅಸೋಸಿಯೇಷನ್ ರಾಜ್ಯ ಉಪಾಧ್ಯಕ್ಷ ಸುರೇಶ್, ಬಂಟ್ವಾಳ  ತಾಲೂಕು ಟೈಲರ್ ಅಸೋಸಿಯೇಷನ್ ಅಧ್ಯಕ್ಷ ಈಶ್ವರ್ ಕುಲಾಲ್, ಖಜಾಂಚಿ ಯಾದೇಶ್ ತುಂಬೆ, ಟೈಲರ್ ಅಸೋಸಿಯೇಷನ್ ಮಾಜಿ ಅಧ್ಯಕ್ಷ ಸಲೀಂ ಟೈಲರ್ ಫರಂಗಿಪೇಟೆ, ಪುದು ವಲಯ ಟೈಲರ್ ಅಸೋಸಿಯೇಷನ್ ಅಧ್ಯಕ್ಷೆ ಉಮಾ ಕುಲಾಲ್, ಗ್ರಾಪಂ ಸದಸ್ಯರಾದ ಭಾಸ್ಕರ ರೈ, ಹುಸೈನ್ ಪಡಿ, ಫೈಝಲ್ ಅಮೆಮಾರ್, ಝಾಹಿರ್ ಕುಂಪನಮಜಲು, ಇಕ್ಬಾಲ್ ಸುಜೀರ್, ಕಿಶೋರ್ ಸುಜೀರ್, ರಝಾಕ್ ಅಮೆಮಾರ್, ಝಿನರ್ ಬದ್ರು, ರಶೀದಾ ಪೇರಿಮಾರ್, ಮೋನು ಫರಂಗಿಪೇಟೆ, ಪುದು ಕಾಂಗ್ರೆಸ್ ವಲಯ ಅಧ್ಯಕ್ಷ ರಫೀಕ್ ಪೇರಿಮಾರ್, ಯೂತ್ ಕಾಂಗ್ರೆಸ್ ಮುಖಂಡರಾದ ಮಜೀದ್ ಪೇರಿಮಾರ್, ಸಲ್ಮಾನ್ ಫಾರಿಶ್ ಫರಂಗಿಪೇಟೆ, ರಿಲ್ವಾನ್ ಫರಂಗಿಪೇಟೆ, ಇಬ್ರಾಹೀಂ ವಲವೂರು, ಇನ್ಶಾದ್ ಮಾರಿಪಳ್ಳ, ಸಲಾಂ ಮಲ್ಲಿ, ಸೋಶಿಯಲ್ ಮೀಡಿಯಾ ಉಸ್ತುವಾರಿ ಆತಿಕ್ ಫರಂಗಿಪೇಟೆ, ಶಮೀಝ್ ಫರಂಗಿಪೇಟೆ ಸಹಿತ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News