ಟ್ವೆಂಟಿ-20 ವಿಶ್ವಕಪ್ ಮುಂದೂಡಿಕೆಯಾದರೆ ಐಪಿಎಲ್ ಬಾಗಿಲು ತೆರೆಯಲಿದೆ: ಮಾರ್ಕ್ ಟೇಲರ್

Update: 2020-05-17 18:27 GMT

ಮೆಲ್ಬೋರ್ನ್, ಮೇ 17: ಕೋವಿಡ್-19 ಸಾಂಕ್ರಾಮಿಕ ಕಾಯಿಲೆಯ ಕಾರಣಕ್ಕೆ ಈ ವರ್ಷ ನಡೆಯಬೇಕಾಗಿರುವ ಐಸಿಸಿ ಟ್ವೆಂಟಿ-20 ವಿಶ್ವಕಪ್ ಮುಂದೂಡಲಾಗುತ್ತದೆ. ಈ ಮೂಲಕ ಬಿಸಿಸಿಐಗೆ ಈ ವರ್ಷದ ಐಪಿಎಲ್ ಟ್ವೆಂಟಿ-20 ಟೂರ್ನಿ ಆರಂಭಿಸಲು ಬಾಗಿಲು ತೆರೆಯಲಿದೆ ಎಂದು ಆಸ್ಟ್ರೇಲಿಯದ ಮಾಜಿ ನಾಯಕ ಮಾರ್ಕ್ ಟೇಲರ್ ಅಭಿಪ್ರಾಯಪಟ್ಟಿದ್ದಾರೆ.

ಐಸಿಸಿ ಟ್ವೆಂಟಿ-20 ವಿಶ್ವಕಪ್ ಆಸ್ಟ್ರೇಲಿಯದಲ್ಲಿ ಅಕ್ಟೋಬರ್ 18ರಿಂದ ನವೆಂಬರ್ 15ರ ತನಕ ನಿಗದಿಯಾಗಿದೆ. ಕೆಲವು ಕ್ರೀಡಾ ಚಟುವಟಿಕೆಗಳು ಕಟ್ಟುನಿಟ್ಟಿನ ಮಾರ್ಗಸೂಚಿಯೊಂದಿಗೆ ಆರಂಭವಾಗಿದ್ದರೂ ವಿಶ್ವಕಪ್ ನಡೆಯುವ ಕುರಿತು ಅನಿಶ್ಚಿತತೆ ಮುಂದುವರಿದಿದೆ.

‘‘ನನ್ನ ಪ್ರಕಾರ ಟ್ವೆಂಟಿ-20 ವಿಶ್ವಕಪ್ ಮುಂದೂಡಿಕೆಯಾಗುವ ಎಲ್ಲ ಲಕ್ಷಣ ಕಾಣಿಸುತ್ತಿದೆ.ಅಕ್ಟೋಬರ್ ಹಾಗೂ ನವೆಂಬರ್ ಮಧ್ಯೆ ಆಸ್ಟ್ರೇಲಿಯಕ್ಕೆ 15 ತಂಡಗಳು ಆಗಮಿಸುವ ಯೋಜನೆ ಹಾಕಿಕೊಂಡಿವೆ. ಏಳು ತಾಣಗಳಲ್ಲಿ 45 ಪಂದ್ಯಗಳು ನಡೆಯಲಿವೆ. ನಾವಿರುವ ಜಗತ್ತಿನಲ್ಲಿ ರಾಷ್ಟ್ರೀಯ ಪ್ರಯಾಣವೇ ಅತ್ಯಂತ ಕಷ್ಟಕರವಾಗಿದೆ. ವಿಶ್ವಕಪ್‌ಗಿಂತ ಮೊದಲು 14 ದಿನಗಳ ಐಸೋಲೇಶನ್ ಮತ್ತಷ್ಟು ಕಠಿಣವಾಗಿಸಲಿದೆ. ಟೂರ್ನಿಯು ನಡೆಯದಿರುವ ಸಂಭವವೇ ಅಧಿಕ. ಒಂದು ವೇಳೆ ಐಸಿಸಿ ಟಿ-20 ಟೂರ್ನಿಯನ್ನು ಮುಂದೂಡಲು ನಿರ್ಧರಿಸಿದರೆ ಬಿಸಿಸಿಐಗೆ ಬಾಗಿಲು ತೆರೆಯಲಿದೆ’’ಎಂದು ಟೇಲರ್ ಹೇಳಿದ್ದಾರೆ.

ಟ್ವೆಂಟಿ-20 ವಿಶ್ವಕಪ್ ರದ್ದಾಗಿ ಐಪಿಎಲ್ ನಡೆದರೆ, ಈಗಾಗಲೇ ಆಸ್ಟ್ರೇಲಿಯದಲ್ಲಿ ನಿಗದಿಯಾಗಿರುವ ಸರಣಿಯ ಕುರಿತು ಕ್ರಿಕೆಟ್ ಆಸ್ಟ್ರೇಲಿಯ ಹಾಗೂ ಬಿಸಿಸಿಐ ನಡುವೆ ಗಂಭೀರ ಮಾತುಕತೆಗೆ ಅವಕಾಶ ತೆರೆಯುತ್ತದೆ. ಕ್ರಿಕೆಟ್ ಆಸ್ಟ್ರೇಲಿಯ ಟ್ವೆಂಟಿ-20 ವಿಶ್ವಕಪ್‌ನ್ನು ಸ್ಪಷ್ಟವಾಗಿ ಬಯಸುತ್ತದೆ. ಅದೇ ಸಮಯದಲ್ಲಿ ನಮ್ಮ ಆಟಗಾರರು ಐಪಿಎಲ್‌ಗಾಗಿ ಭಾರತಕ್ಕೆ ಹೋದರೆ, ಭಾರತ ಕ್ರಿಕೆಟಿಗರು ಆಸ್ಟ್ರೇಲಿಯಕ್ಕೆ ಮುಂದಿನ ವರ್ಷದ ಕ್ರಿಕೆಟ್ ಋತುವಿನಲ್ಲಿ ಸರಣಿ ಆಡಲು ಬರಬೇಕು ಎಂದು ಕ್ರಿಕೆಟ್ ಆಸ್ಟ್ರೇಲಿಯ ಬಯಸಬಹುದು ಎಂದು 55ರ ಹರೆಯದ ಮಾಜಿ ಆರಂಭಿಕ ಆಟಗಾರ ಹೇಳಿದ್ದಾರೆ.

ಎಲ್ಲರಿಗೂ ಸ್ವಲ್ಪ ಯೋಜನೆ ರೂಪಿಸಲು ಸ್ವಲ್ಪ ಸಮಯ ಲಭಿಸಿದೆ. ಕ್ರಿಕೆಟ್ ಆಸ್ಟ್ರೇಲಿಯ ಇದೀಗ ಟ್ವೆಂಟಿ-20 ವಿಶ್ವಕಪ್ ಬದಲಿಗೆ ಐಪಿಎಲ್ ಕುರಿತು ಯೋಚಿಸುತ್ತಿರಬಹುದು ಎನ್ನುವುದರಲ್ಲಿ ನನಗೆ ಸಂಶಯವಿಲ್ಲ. ಕ್ರಿಕೆಟ್ ಆಸ್ಟ್ರೇಲಿಯವು ಭಾರತ ಆಸ್ಟ್ರೇಲಿಯಕ್ಕೆ ಬರುವುದನ್ನು ಇಚ್ಛಿಸುತ್ತದೆ. ಅದನ್ನೇ ಭಾರತವೂ ಬಯಸುತ್ತದೆ ಎಂದು ಟೇಲರ್ ಹೇಳಿದ್ದಾರೆ.

ಭಾರತೀಯ ಕ್ರಿಕೆಟ್ ತಂಡ 2020ರ ಅಕ್ಟೋಬರ್‌ನಿಂದ ಜನವರಿ 2021ರ ತನಕ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಭಾಗವಾಗಿರುವ 4 ಪಂದ್ಯಗಳ ಟೆಸ್ಟ್ ಸರಣಿಯಲ್ಲದೆ ತಲಾ 3 ಪಂದ್ಯಗಳ ಏಕದಿನ ಹಾಗೂ ಟ್ವೆಂಟಿ-20 ಸರಣಿಯನ್ನು ಆಡಲು ಆಸ್ಟ್ರೇಲಿಯಕ್ಕೆ ತೆರಳಲು ವೇಳಾಪಟ್ಟಿ ನಿಗದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News