ಕರಾವಳಿ ಕರ್ನಾಟಕದಲ್ಲಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಸಂಬಂಧಿಸಿದ 44 ಕೊರೋನ ಪ್ರಕರಣಗಳು

Update: 2020-05-19 15:43 GMT

ಕಳೆದ ಮಂಗಳವಾರ, ದಕ್ಷಿಣ ಕನ್ನಡದಲ್ಲಿ 38 ವರ್ಷದ ಮಹಿಳೆಯೊಬ್ಬರು ಕೋವಿಡ್ 19 ಪಾಸಿಟಿವ್ ಆದಾಗ ಕರ್ನಾಟಕದ ಕರಾವಳಿ ಪ್ರದೇಶದ ಮೂರು ಜಿಲ್ಲೆಗಳಲ್ಲಿ ಹಲವು ಕೊರೋನ ಪ್ರಕರಣಗಳು ಮಂಗಳೂರಿನ ಪಡೀಲ್ ನಲ್ಲಿರುವ ಫಸ್ಟ್ ನ್ಯೂರೋ ಆಸ್ಪತ್ರೆಗೆ ಸಂಬಂಧಿಸಿದ್ದು ಎನ್ನುವುದು ಅಧಿಕಾರಿಗಳಿಗೆ ಖಚಿತವಾಗಿತ್ತು.

ದಕ್ಷಿಣ ಕನ್ನಡ ಜಿಲ್ಲೆಯ 15 ಪ್ರಕರಣಗಳು ನೇರವಾಗಿ ಇದೇ ಆಸ್ಪತ್ರೆಗೆ ಸಂಬಂಧಿಸಿದ್ದಾಗಿದೆ. ಭಟ್ಕಳದ ಇತರ 29 ಪ್ರಕರಣಗಳು ಕೂಡ ಇದೇ ಆಸ್ಪತ್ರೆಗೆ ಸಂಬಂಧಿಸಿದ್ದಾಗಿದೆ.

ಕಳೆದ ಮೂರು ವಾರಗಳಿಂದ ಫಸ್ಟ್ ನ್ಯೂರೋದ 200 ಸಿಬ್ಬಂದಿಯನ್ನು ಆಸ್ಪತ್ರೆ ಪರಿಸರದಲ್ಲಿ ಕ್ವಾರಂಟೈನ್ ನಲ್ಲಿರಿಸಲಾಗಿದೆ. ಆದರೆ ಈ ಪ್ರದೇಶದಲ್ಲಿ 800ಕ್ಕೂ ಹೆಚ್ಚು ಜನರನ್ನು ಕೊರೋನಗಾಗಿ ತಪಾಸಣೆಗೊಳಪಡಿಸಿದ್ದರೂ ದಕ್ಷಿಣ ಕನ್ನಡ ಜಿಲ್ಲಾಡಳಿತವು ವೈರಸ್ ನ ಮೂಲ ಯಾವುದು ಎನ್ನುವುದರ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ.

ವೈರಸ್ ಹರಡಿರುವ ಮೂಲವನ್ನು ಜಿಲ್ಲಾಡಳಿತ ತನಿಖೆ ನಡೆಸುತ್ತಿದೆ. ಕಳೆದ 2 ತಿಂಗಳುಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ರೋಗಿಗಳಿಂದ ಇದು ಆರಂಭವಾಗಿತ್ತೇ ಅಥವಾ ಕೊರೋನ ವೈರಸ್ ಇದ್ದ ಯಾರದ್ದಾದರೂ ಸಂಪರ್ಕಕ್ಕೆ ಅವರು ಬಂದಿದ್ದಾರೆಯೇ ಎನ್ನುವ ಬಗ್ಗೆ ತನಿಖೆ ನಡೆಸಲಾಗುತ್ತಿದೆ.

“ಸೋಂಕಿನ ಮೂಲ ಯಾವುದು ಎಂದು ಇನ್ನೂ ಸ್ಪಷ್ಟಗೊಂಡಿಲ್ಲ. ಒಂದೇ ಕುಟುಂಬದ 2 ಸಾವುಗಳು ಸಂಭವಿಸಿದ ಬಂಟ್ವಾಳದ ಕುಟುಂಬವು ಸೋಂಕಿನ ಮೂಲವೇ ಎನ್ನುವ ಬಗ್ಗೆ ನಾವು ತನಿಖೆ ನಡೆಸುತ್ತಿದ್ದೇವೆ. ಫಸ್ಟ್ ನ್ಯೂರೋ ಆಸ್ಪತ್ರೆಗೆ ಉತ್ತರ ಕನ್ನಡ, ಉಡುಪಿ, ಕಾಸರಗೋಡುಗಳಿಂದ ರೋಗಿಗಳು ದಾಖಲಾಗುವುದರಿಂದ ಇತರ ಮೂಲಗಳ ಬಗ್ಗೆಯೂ ನಾವು ತನಿಖೆ ನಡೆಸುತ್ತಿದ್ದೇವೆ” ಎಂದು ದ.ಕ. ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ತಿಳಿಸಿದ್ದಾರೆ.

ಫಸ್ಟ್ ನ್ಯೂರೋದಲ್ಲಿ ಕೆಲಸ ಮಾಡುತ್ತಿದ್ದ ಮೂವರಿಗೆ ಸೋಂಕು ತಗಲಿದೆ ಎಂದವರು ಮಾಹಿತಿ ನೀಡಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲಾ ವೈದ್ಯಾಧಿಕಾರಿ ಡಾ. ರಾಮಚಂದ್ರ ಬಾಯರಿಯವರ ನೇತೃತ್ವದ ಸಮಿತಿಯು ದಕ್ಷಿಣ ಕನ್ನಡದಲ್ಲಿ ವರದಿಯಾಗುತ್ತಿರುವ ಪ್ರಕರಣಗಳಿಗೆ ಆಸ್ಪತ್ರೆಯ ಸಂಬಂಧದ ಬಗ್ಗೆ ಪರಿಶೀಲನೆ ನಡೆಸುತ್ತಿದೆ.

ಆಸ್ಪತ್ರೆಯಲ್ಲಿದ್ದ ಬಂಟ್ವಾಳದ ರೋಗಿಗೆ ಪಾಸಿಟಿವ್

“ಮಾರ್ಚ್ 8ರಂದು ಬಂಟ್ವಾಳದ 75 ವರ್ಷದ ಮಹಿಳೆ ಆಸ್ಪತ್ರೆಗೆ ದಾಖಲಾಗಿದ್ದರು. ಇವರಿಗೆ ಯಾವುದೇ ಕೊರೋನ ಲಕ್ಷಣಗಳಿರಲಿಲ್ಲ ಮತ್ತು ಬೇರೆ ಸಮಸ್ಯೆಗಳಿಗಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಮಾರ್ಚ್ 18ರಂದು ಅವರನ್ನು ಐಸಿಯುಗೆ ದಾಖಲಿಸಲಾಗಿತ್ತು ಮತ್ತು ಅವರ ಆರೋಗ್ಯ ಸ್ಥಿತಿ ಸುಧಾರಿಸಿದ ನಂತರ ಎಪ್ರಿಲ್ 1ರಂದು ವಾರ್ಡ್ ಗೆ ಸ್ಥಳಾಂತರಿಸಲಾಯಿತು. ಎಪ್ರಿಲ್ 2ರಂದು ಮಹಿಳೆಯ 50 ವರ್ಷದ ಸೊಸೆ ಆಸ್ಪತ್ರೆಗೆ ಬಂದಿದ್ದರು. ಅವರು ಆಸ್ಪತ್ರೆಗೆ ಆಗಮಿಸಿದ್ದಾಗಲೂ ಯಾವುದೇ ಲಕ್ಷಣಗಳಿರಲಿಲ್ಲ” ಎಂದು ಫಸ್ಟ್ ನ್ಯೂರೋ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ.ರಾಜೇಶ್ ಶೆಟ್ಟಿ ತಿಳಿಸಿದ್ದಾರೆ.

2 ವಾರಗಳ ನಂತರ ಎಪ್ರಿಲ್ 18ರಂದು ಮಹಿಳೆಯ ಸೊಸೆ ನಗರದ ವೆನ್ಲಾಕ್ ಆಸ್ಪತ್ರೆಗೆ ದಾಖಲಾದರು. ಅವರು ಆಗ ತೀವ್ರ ಉಸಿರಾಟದ ಸೋಂಕಿನಿಂದ ಬಳಲುತ್ತಿದ್ದರು. ಎಪ್ರಿಲ್ 19ರಂದು ಅವರು ಆಸ್ಪತ್ರೆಯಲ್ಲಿ ಮೃತಪಟ್ಟರು. ಮೃತಪಟ್ಟ ನಂತರ ಅವರಿಗೆ ಕೊರೋನ ಸೋಂಕು ಇರುವುದು ತಿಳಿದುಬಂತು ಎಂದವರು ಹೇಳುತ್ತಾರೆ.

“ಈ ಸಮಯದಲ್ಲಿ ನಮಗೆ ಮೃತ ಮಹಿಳೆ ಆಸ್ಪತ್ರೆಗೆ ಭೇಟಿ ನೀಡಿದ್ದು ತಿಳಿದುಬಂತು. ಒಬ್ಬರು ಮೃತಪಟ್ಟಿದ್ದಾರೆ ಮತ್ತು ಅವರು ನಮ್ಮ ಆಸ್ಪತ್ರೆಗೆ ದಾಖಲಾದವರ ಸಂಬಂಧಿ ಎಂದು ಪೊಲೀಸರು ತಿಳಿಸಿದರು” ಎಂದು ರಾಜೇಶ್ ಹೇಳುತ್ತಾರೆ.

ಎಪ್ರಿಲ್ 22ರಂದು ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿದ್ದ ಮಹಿಳೆಯನ್ನು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಯಿತು ಮತ್ತು ಮರುದಿನ ಅವರು ಮೃತಪಟ್ಟರು. ಅವರಿಗೂ ಕೊರೋನ ಪಾಸಿಟಿವ್ ಇತ್ತು. ಮಹಿಳೆ ಮೃತಪಟ್ಟ ನಂತರ ಆಸ್ಪತ್ರೆಯನ್ನು ಸೀಲ್ ಮಾಡಲಾಯಿತು ಮತ್ತು ಒಳಗಿದ್ದ ಸಿಬ್ಬಂದಿಯನ್ನು ತಕ್ಷಣ ಕ್ವಾರಂಟೈನ್ ಗೊಳಪಡಿಸಲಾಯಿತು. ಆಸ್ಪತ್ರೆಯಲ್ಲಿರುವ ಹೊರ ರೋಗಿ ವಿಭಾಗದ ಮತ್ತು ಒಳರೋಗಿ ವಿಭಾಗಗಳ ರೋಗಿಗಳ ಬಗ್ಗೆ ಆಸ್ಪತ್ರೆಯು ಜಿಲ್ಲಾಡಳಿತದೊಂದಿಗೆ ಫೆಬ್ರವರಿ 1ರಿಂದ ಮಾಹಿತಿ ಹಂಚಿಕೊಳ್ಳುತ್ತಿದೆ ಎಂದವರು ಮಾಹಿತಿ ನೀಡಿದ್ದಾರೆ.

75 ವರ್ಷದ ಮಹಿಳೆ ಮೃತಪಟ್ಟ ನಂತರ ಎಪ್ರಿಲ್ ತಿಂಗಳಲ್ಲಿ ಫಸ್ಟ್ ನ್ಯೂರೋ ಆಸ್ಪತ್ರೆಗೆ ಭೇಟಿ ನೀಡಿದ್ದ ರೋಗಿಗಳ ಮಾಹಿತಿ ಸಂಗ್ರಹಿಸಲು ಜಿಲ್ಲಾಡಳಿತವು ಪರದಾಡಿತು. “ಎರಡನೆ ಮಹಿಳೆ ಮೃತಪಟ್ಟ ನಂತರ, ಎಪ್ರಿಲ್ 1ರಿಂದ ಎಪ್ರಿಲ್ 23ರವರೆಗಿನ ಒಳರೋಗಿ ವಿಭಾಗದ ರೋಗಿಗಳ ಬಗ್ಗೆ ಮಾಹಿತಿ ಸಂಗ್ರಹಿಸಿದೆವು. ಎಪ್ರಿಲ್ 27ರಂದು ನೆರೆಯ ಜಿಲ್ಲೆಗಳೊಂದಿಗೆ ಈ ಮಾಹಿತಿಯನ್ನು ಹಂಚಿಕೊಳ್ಳಲಾಯಿತು. ಕೆಲ ಸಮಯ ಹಿಡಿದ ಕಾರಣಕ್ಕಾಗಿ ಹೊರರೋಗಿಗಳ ಮಾಹಿತಿಯನ್ನು ಮೇ 5ರಂದು ಹಂಚಿಕೊಂಡೆವು. ಈ ಪ್ರಕ್ರಿಯೆಯು ತಡವಾಗಿಲ್ಲ ಎಂದು ಡಾ.ರಾಮಚಂದ್ರ ಬಾಯರಿ ಮಾಹಿತಿ ನೀಡಿದರು.

ಫಸ್ಟ್ ನ್ಯೂರೋಗೆ ಸಂಬಂಧಿಸಿದ ಉತ್ತರ ಕನ್ನಡದ ಪ್ರಕರಣಗಳು

ಎಪ್ರಿಲ್ 20ರಂದು ಭಟ್ಕಳದ ದಂಪತಿ ಮತ್ತು 5 ತಿಂಗಳ ಮಗುವೊಂದು ಫಸ್ಟ್ ನ್ಯೂರೋ ಆಸ್ಪತ್ರೆಗೆ ಆಗಮಿಸಿದ್ದರು. ಸಂಬಂಧಿತ ಅಧಿಕಾರಿಗಳಿಂದ ಅನುಮತಿ ಪಡೆದು ಬಂದಿದ್ದ ಅವರು ಬೆಳಗ್ಗೆ 9ರಿಂದ ಅಪರಾಹ್ನ 3ರವರೆಗೆ ಆಸ್ಪತ್ರೆಯಲ್ಲಿದ್ದರು ಮತ್ತು ಅದೇ ದಿನ ಮನೆಗೆ ಮರಳಿದ್ದರು. ಮೇ 5ರಂದು ಕುಟುಂಬವು ಕೊರೋನ ಸೋಂಕಿಗೊಳಗಾಗಿರುವುದು ದೃಢಪಟ್ಟಿತ್ತು.  ಇದರಿಂದಾಗಿ ಉತ್ತರ ಕನ್ನಡ ಜಿಲ್ಲೆಯ ಅಧಿಕಾರಿಗಳು ಜಿಲ್ಲೆಯಲ್ಲಿ ವರದಿಯಾಗುತ್ತಿರುವ ಕೊರೋನ ಪ್ರಕರಣಗಳು ಫಸ್ಟ್ ನ್ಯೂರೋ ಆಸ್ಪತ್ರೆಗೆ ಸಂಬಂಧಿಸಿದ್ದೇ ಎನ್ನುವುದನ್ನು ಕಂಡುಕೊಳ್ಳಬೇಕಾಯಿತು.

“ಇದೇ ಆಸ್ಪತ್ರೆ ಸೋಂಕಿನ ಮೂಲವಾಗಿರಬಹುದು ಎಂದು ನಾವು ಸಂಶಯಿಸಿದೆವು ಮತ್ತು ನಮ್ಮ ಜಿಲ್ಲೆಯಿಂದ ಫಸ್ಟ್ ನ್ಯೂರೋಗೆ ಹೋಗಿದ್ದ ರೋಗಿಗಳ ಪಟ್ಟಿಯನ್ನು ದಕ್ಷಿಣ ಕನ್ನಡ ಜಿಲ್ಲಾಡಳಿತದಿಂದ ಕೇಳಿದೆವು. ಎಪ್ರಿಲ್ ತಿಂಗಳಲ್ಲಿ ಉತ್ತರ ಕನ್ನಡದಿಂದ 10 ರೋಗಿಗಳು ಈ ಆಸ್ಪತ್ರೆಗೆ ಹೋಗಿದ್ದು, ಅವರ ಕೊರೋನ ಪರೀಕ್ಷೆ ನಡೆಸಲಾಗಿದೆ” ಎಂದು ಉತ್ತರ ಕನ್ನಡ ಜಿಲ್ಲಾಧಿಕಾರಿ ಹರೀಶ್ ಕುಮಾರ್ ತಿಳಿಸುತ್ತಾರೆ. ಈ 10 ಜನರಲ್ಲಿ ಮೂವರು ಪಾಸಿಟಿವ್ ಆಗಿದ್ದಾರೆ.

ಎಪ್ರಿಲ್ 20ರಂದು ಉತ್ತರ ಕನ್ನಡದ ಮೂವರು ಫಸ್ಟ್ ನ್ಯೂರೋ ಆಸ್ಪತ್ರೆಗೆ ತೆರಳಿದ್ದಾಗ ನಂತರ ಕೊರೋನ ಪಾಸಿಟಿವ್ ಆದ ಬಂಟ್ವಾಳದ 75 ವರ್ಷದ ಮಹಿಳೆ ಆಗ ಆಸ್ಪತ್ರೆಯಲ್ಲಿದ್ದರು ಎಂದ ಅಧಿಕಾರಿಗಳು ಬೆಟ್ಟು ಮಾಡುತ್ತಾರೆ. ಎಪ್ರಿಲ್ 22ರಂದು ಆ ಮಹಿಳೆಯನ್ನು ವೆನ್ಲಾಕ್ ಗೆ ದಾಖಲಿಸಲಾಗಿತ್ತು.

ಆದರೆ “ಸೋಂಕು ಬಂಟ್ವಾಳದಿಂದ ಬಂದ ರೋಗಿಗಳಿಂದ ಹರಡಿದ್ದಾಗಿರಬಹುದು, ಆದರೆ ಅದು ಉತ್ತರ ಕನ್ನಡದಿಂದ ಹರಡಿರಬಹುದಾದ ಸಾಧ್ಯತೆಯೂ ಇದೆ. ಆಸ್ಪತ್ರೆಗೆ ಕೇರಳದ ಕಾಸರಗೋಡಿನಿಂದ ಹಲವು ರೋಗಿಗಳು ಬರುವುದರಿಂದ ವೈರಸ್ ಮೂಲ ಅಲ್ಲಿನದ್ದಾಗಿರಬಹುದಾದ ಸಾಧ್ಯತೆಯೂ ಇದೆ” ಎಂದು ದಕ ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ಹೇಳುತ್ತಾರೆ.

“ಆಸ್ಪತ್ರೆಗೆ ಭೇಟಿ ನೀಡಿದ್ದ ರೋಗಿಗಳ ಬಗ್ಗೆ ಮಾಹಿತಿಯನ್ನು ನಾವು ಕಾಸರಗೋಡು ಜಿಲ್ಲೆಯ ಜೊತೆ ಹಂಚಿಕೊಂಡಿದ್ದೇವೆ. ಅವರ ವರದಿ ನೆಗೆಟಿವ್ ಬಂದಿದೆಯೇ ಎನ್ನುವುದು ಇನ್ನಷ್ಟೇ ತಿಳಿದುಬರಬೇಕಿದೆ” ಎಂದವರು ಹೇಳಿದರು.

“ನಾವು ಇದನ್ನು ಬೇರೆ ದೃಷ್ಟಿಕೋನದಿಂದಲೂ ನೋಡಬಹುದು. ಫಸ್ಟ್ ನ್ಯೂರೋಗೆ ಭೇಟಿ ನೀಡಿದ್ದ ಉತ್ತರ ಕನ್ನಡದ ರೋಗಿಗಳಿಗೆ ಉತ್ತರ ಕನ್ನಡದ ಬೇರೆ ಮೂಲಗಳಿಂದಲೂ ಸೋಂಕು ಹರಡಿರಬಹುದು. ಅವರ ಕುಟುಂಬದಲ್ಲಿ ಇದಕ್ಕೂ ಮೊದಲು ಮತ್ತೊಬ್ಬರಿಗೆ ಕೊರೋನ ಪಾಸಿಟಿವ್ ಆಗಿತ್ತು” ಎಂದು ಡಾ.ರಾಮಚಂದ್ರ ಬಾಯರಿ ಹೇಳುತ್ತಾರೆ.

ಬಂಟ್ವಾಳದಿಂದ ಬಂದ ಪ್ರಕರಣಗಳನ್ನು ದ.ಕ. ಜಿಲ್ಲಾಡಳಿತ ಎಣಿಸುತ್ತಿಲ್ಲ. “ಬಂಟ್ವಾಳದಿಂದ ನಾವು ಪ್ರಕರಣಗಳನ್ನು ಲೆಕ್ಕ ಹಾಕಿದರೆ ಈ ಆಸ್ಪತ್ರೆಗೆ ಸಂಬಂಧಿಸಿದ ಪ್ರಕರಣಗಳ ಸಂಖ್ಯೆ ಅಧಿಕಾವಾಗಬಹುದು. ನಾವು ಸೋಂಕಿನ ಮೂಲವನ್ನು ಕಂಡುಕೊಳ್ಳಲು ಯತ್ನಿಸುತ್ತಿದ್ದೇವೆ. ಆದರೆ ಪ್ರಮುಖವಾಗಿ ನಾವು ಅದನ್ನು ನಿಯಂತ್ರಿಸಬೇಕಾಗಿದೆ” ಎಂದು ಸಿಂಧೂ ರೂಪೇಶ್ ಹೇಳುತ್ತಾರೆ.

Writer - ಪ್ರಜ್ವಲ್ ಭಟ್, thenewsminute.com

contributor

Editor - ಪ್ರಜ್ವಲ್ ಭಟ್, thenewsminute.com

contributor

Similar News