ಅಂಫಾನ್ ಚಂಡಮಾರುತದಿಂದ ಕೋಲ್ಕತಾ ಏರ್‌ಪೋರ್ಟ್‌ನಲ್ಲಿ ಪ್ರವಾಹ, ಹಲವು ವಸ್ತುಗಳಿಗೆ ಹಾನಿ
ಕೋಲ್ಕತಾ,ಮೇ 21: ಸುಮಾರು ಆರು ಗಂಟೆಗಳ ಅಂಫಾನ್ ಚಂಡಮಾರುತ ಹೊಡೆತಕ್ಕೆ ಸಿಲುಕಿರುವ ಕೋಲ್ಕತಾದ ಏರ್‌ಪೋರ್ಟ್‌ನೊಳಗೆ ಪ್ರವಾಹದ ನೀರು ನುಗ್ಗಿದ್ದು ಹಲವು ವಸ್ತುಗಳಿಗೆ ಹಾನಿಯಾಗಿದೆ.
ಗಂಟೆಗೆ 120 ಕಿ.ಮೀ.ವೇಗದಲ್ಲಿ ಅಪ್ಪಳಿಸಿದ ಚಂಡಮಾರುತಕ್ಕೆ ಬಂಗಾಳದಲ್ಲಿ ಕನಿಷ್ಠ 12 ಜನರು ಸಾವನ್ನಪ್ಪಿದ್ದಾರೆ. ಚಂಡಮಾರುತದ ಕಾರಣಕ್ಕೆ ಭಾರೀ ಮಳೆ ಸುರಿದಿದೆ. ಕೋಲ್ಕತಾ ಏರ್‌ಪೋರ್ಟ್‌ನಲ್ಲಿ ನೆರೆ ನೀರು ನಿಂತಿದ್ದು,ರನ್ ವೇಗಳು ನೆರೆ ನೀರಿನಿಂದ ತುಂಬಿಹೋಗಿದೆ. ಮೊಣಕಾಲುದ್ದ ನೀರಿನಲ್ಲಿ ವಿಮಾನ ಮುಳುಗಿರುವುದು ಕಂಡುಬಂದಿದ್ದು ಎರಡು ಹ್ಯಾಂಗರ್ಸ್‌ಗಳಿಗೆ ಹಾನಿಯಾಗಿದೆ. ರಿಪೇರಿಯಾಗದ ಹಂತದಲ್ಲಿರುವ ಇವುಗಳನ್ನು ಪ್ರಸ್ತುತ ಬಳಸಲಾಗುತ್ತಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಏರ್‌ಪೋರ್ಟ್‌ನ ಎಲ್ಲ ಚಟುವಟಿಕೆಯನ್ನು ಇಂದು ಸಂಜೆ 5ರ ತನಕ ರದ್ದುಪಡಿಸಲಾಗಿದೆ. ಮಾ.25ರಿಂದ ಲಾಕ್‌ಡೌನ್ ಹಿನ್ನೆಲೆಯಲ್ಲಿ ಪ್ರಯಾಣಿಕ ವಿಮಾನ ಸಂಚಾರವನ್ನು ಸ್ಥಗಿತಗೊಳಿಸಲಾಗಿದ್ದು,ಇದೀಗ ಕಾರ್ಗೊ ಹಾಗೂ ವಿಶೇಷ ವಿಮಾನಗಳು ಮಾತ್ರ ಹಾರಾಟ ನಡೆಸುತ್ತಿದ್ದವು.