ಇಎಂಐ ಪಾವತಿ: ಗ್ರಾಹಕರಿಗೆ ಸಿಹಿಸುದ್ದಿ ನೀಡಿದ ಆರ್ ಬಿಐ

Update: 2020-05-22 08:36 GMT

 ಹೊಸದಿಲ್ಲಿ, ಮೇ 22: : ಆರ್‌ಬಿಐ ಶುಕ್ರವಾರ ರೆಪೋ ದರ ಪ್ರಕಟಿಸಿದ್ದು ಹಿಂದಿನ ದರದಲ್ಲಿ 40 ಅಂಶಗಳನ್ನು ಕಡಿತಗೊಳಿಸುವ ಮೂಲಕ ಶೇ.4 ನಿಗದಿಪಡಿಸಿದೆ. ಈ ಮೂಲಕ ಆರ್ಥಿಕತೆಗೆ ಉತ್ತೇಜನ ನೀಡಲು ಅಚ್ಚರಿಯ ಹೆಜ್ಜೆ ಇಟ್ಟಿದೆ.

ರಿವರ್ಸ್ ರೆಪೋ ದರ ಸಹ ಕಡಿತಗೊಳಿಸಲಾಗಿದ್ದು ಶೇಕಡಾ 3.75ರಿಂದ ಶೇ.3.35ಕ್ಕೆ ನಿಗದಿಪಸಡಿಸಲಾಗಿದೆ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ತಿಳಿಸಿದ್ದಾರೆ. ಇಎಮ್ಐ ಪಾವತಿಗೆ ಮೂರು ತಿಂಗಳ ಅವಕಾಶಕ್ಕೆ ಆರ್‌ಬಿಐ ಅನುಮತಿ ನೀಡಿದೆ.

ರಿಸರ್ವ್ ಬ್ಯಾಂಕ್ ವಿವಿಧ ವಾಣಿಜ್ಯ ಬ್ಯಾಂಕುಗಳಿಗೆ ನೀಡುವ ಅಲ್ಪಾವಧಿಯ ಸಾಲದ ಮೇಲೆ 2000ರಿಂದೀಚಿಗಿನ  ಅತ್ಯಂತ ಕನಿಷ್ಠ ರೆಪೋ ರೇಟ್ ಅಥವಾ ಬಡ್ಡಿ ದರ ಇದಾಗಿದೆ. ಈ ಕ್ರಮದಿಂದಾಗಿ  ಬ್ಯಾಂಕುಗಳಿಗೆ ತಮ್ಮ ಸಾಲಗಾರರ ಮೇಲಿನ ಇಎಂಐ ಹೊರೆಯನ್ನು ತಗ್ಗಿಸಲು ಅನುವಾಗಲಿದೆ. ಸಾಲದ ಮೇಲಿನ ಇಎಂಐ ಪಾವತಿ ಅವಧಿ ವಿನಾಯಿತಿಯನ್ನೂ ಆರ್‍ಬಿಐ ಗವರ್ನರ್ ಮೂರು ತಿಂಗಳುಗಳ ಕಾಲ-ಆಗಸ್ಟ್ ತನಕ ವಿಸ್ತರಿಸಿದ್ದಾರೆ.

► ಸರಕಾರವು ದೇಶದ ಆರ್ಥಿಕ ಪುನಶ್ಚೇತನಕ್ಕೆ ರೂ 20 ಲಕ್ಷ ಕೋಟಿ ಪ್ಯಾಕೇಜ್ ಘೋಷಿಸಿದ ನಂತರ ಆರ್‍ಬಿಐ ಗರ್ವನರ್ ಇದೇ ಮೊದಲ ಬಾರಿಗೆ ವೀಡಿಯೋ ಕಾನ್ಫರೆನ್ಸ್ ಮೂಲಕ ಪತ್ರಿಕಾಗೋಷ್ಠಿ ನಡೆಸಿದ್ದಾರೆ. ಕೋವಿಡ್-19 ಸಮಸ್ಯೆಯಿಂದಾಗಿ ದೇಶದ ಆರ್ಥಿಕತೆ ಪ್ರಸಕ್ತ ಹಣಕಾಸು ವರ್ಷದಲ್ಲಿ ಋಣಾತ್ಮಕವಾಗಿಯೇ ಮುಂದುವರಿಯಲಿದೆ ಎಂದು ಹೇಳಿದ ಅವರು.  ಹಣದುಬ್ಬರ ಕೂಡ ಈ ಆರ್ಥಿಕ ವರ್ಷದ ಪ್ರಥಮಾರ್ಧದಲ್ಲಿ  ಸಾಕಷ್ಟಿರಲಿದ್ದು ದ್ವಿತೀಯಾರ್ಧದಲ್ಲಿ ಕಡಿಮೆಯಾಗುವ ನಿರೀಕ್ಷೆಯಿದೆ ಎಂದು ಹೇಳಿದರು.

► ವಾಣಿಜ್ಯ ಬ್ಯಾಂಕುಗಳಿಂದ ಆರ್‍ಬಿಐ ಪಡೆಯುವ ಹಣದ ಮೇಲಿನ ಬಡ್ಡಿ ದರ- ರಿವರ್ಸ್ ರೆಪೋ ರೇಟ್ ಅನ್ನೂ ಈಗಿನ ಶೇ 3.75ರಿಂದ ಶೇ 3.35ಗೆ ಇಳಿಸಿರುವ ಕುರಿತು ಶಕ್ತಿಕಾಂತ ದಾಸ್  ಮಾಹಿತಿ ನೀಡಿದರು.

► ದೇಶದ ಅರ್ಥವ್ಯವಸ್ಥೆಗೆ ಇನ್ನುಷ್ಟು ಚೈತನ್ಯ ತುಂಬಲು ಆರ್ಥಿಕ ನೀತಿಯನ್ನು ಇನ್ನಷ್ಟು ಸಡಿಲಗೊಳಿಸಲು ಸಿದ್ಧವಿರುವುದಾಗಿಯೂ ಆರ್‍ಬಿಐ ತಿಳಿಸಿದೆ.

► ರೆಪೋ ರೇಟ್ ಕಡಿತಗೊಳಿಸುವ ಪರವಾಗಿ ವಿತ್ತ ನೀತಿ ಸಮಿತಿಯ ಐದು ಮಂದಿ ಸದಸ್ಯರು ಮತ ಚಲಾಯಿಸಿದ್ದಾರೆ ಎಂದು ಆರ್‍ಬಿಐ ಗವರ್ನರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News