​2,050 ಶ್ರಮಿಕ್ ರೈಲಿನ ಬಳಿಕವೂ ಮರಳಲು ಸಾಧ್ಯವಾದದ್ದು 30% ವಲಸೆ ಕಾರ್ಮಿಕರಿಗೆ ಮಾತ್ರ !

Update: 2020-05-22 06:35 GMT

ಹೊಸದಿಲ್ಲಿ : ಲಾಕ್‌ಡೌನ್‌ನಿಂದಾಗಿ ದೇಶದ ವಿವಿಧೆಡೆ ಸಿಕ್ಕಿಹಾಕಿಕೊಂಡಿರುವ ವಲಸೆ ಕಾರ್ಮಿಕರು ತವರು ರಾಜ್ಯಕ್ಕೆ ಮರಳಲು ಅನುಕೂಲವಾಗುವಂತೆ ಭಾರತೀಯ ರೈಲ್ವೆ 2050 ಶ್ರಮಿಕ್ ವಿಶೇಷ ರೈಲುಗಳಲ್ಲಿ 30 ಲಕ್ಷ ಮಂದಿಯನ್ನು ಕರೆದೊಯ್ದಿದ್ದರೂ, ಇದುವರೆಗೆ ಮರಳಿರುವ ಕಾರ್ಮಿಕರು ಶೇಕಡ 30ರಷ್ಟು ಮಾತ್ರ ಎನ್ನುವುದು ಅಂಕಿ ಅಂಶಗಳಿಂದ ತಿಳಿದುಬರುತ್ತದೆ.

ದೊಡ್ಡ ಸಂಖ್ಯೆಯ ವಲಸೆ ಕಾರ್ಮಿಕರು ಇನ್ನೂ ರೈಲು ಅಥವಾ ಬಸ್ಸುಗಳಿಗಾಗಿ ಕಾಯುತ್ತಿದ್ದಾರೆ. ಮಹಾರಾಷ್ಟ್ರ, ದೆಹಲಿ, ಕರ್ನಾಟಕ, ಹರ್ಯಾಣ ಮತ್ತು ಪಂಜಾಬ್‌ಗಳಲ್ಲಿ ಶೇಕಡ 30ಕ್ಕಿಂತ ಅಧಿಕ ವಲಸೆ ಕಾರ್ಮಿಕರು ವಾಪಸ್ಸಾಗಿಲ್ಲ ಎನ್ನುವುದು ವಿಶ್ಲೇಷಣೆಯಿಂದ ತಿಳಿಯುತ್ತದೆ.

ದೊಡ್ಡ ಸಂಖ್ಯೆಯ ವಲಸೆ ಕಾರ್ಮಿಕರು ಇನ್ನೂ ವಿವಿಧೆಡೆ ಇರುವ ಹಿನ್ನೆಲೆಯಲ್ಲಿ ಬೇಡಿಕೆ ಇರುವವರೆಗೂ ಪ್ರತಿದಿನ 300-350 ಶ್ರಮಿಕ್ ರೈಲುಗಳನ್ನು ಓಡಿಸಲು ಮುಂದಾಗಿದೆ ಎಂದು ಮೂಲಗಳು ಹೇಳಿವೆ. ಈ ಪೈಕಿ 1054 ಅಂದರೆ ಶೇಕಡ 50ರಷ್ಟು ಶ್ರಮಿಕ್ ರೈಲುಗಳು ಉತ್ತರ ಪ್ರದೇಶಕ್ಕೆ ಮತ್ತು ಶೇಕಡ 25ರಷ್ಟು ರೈಲುಗಳು ಬಿಹಾರಕ್ಕೆ ತಲುಪಿವೆ ಎಂದು ರೈಲ್ವೆ ಸಚಿವ ಪಿಯೂಶ್ ಗೋಯಲ್ ಹೇಳಿದ್ದಾರೆ.

ಗುಜರಾತ್‌ನಿಂದ ಗರಿಷ್ಠ ಅಂದರೆ 636 ರೈಲುಗಳು ಹೊರಟಿವೆ. ರೈಲುಗಳಲ್ಲಿ ವಲಸೆ ಕಾರ್ಮಿಕರು ಮರಳುವ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ಪಶ್ಚಿಮ ಬಂಗಾಳ, ರಾಜಸ್ಥಾನ ಮತ್ತು ಜಾರ್ಖಂಡ್ ಸೇರಿದಂತೆ ಕೆಲ ರಾಜ್ಯಗಳು ಸಹಕಾರ ನೀಡುತ್ತಿಲ್ಲ ಎಂದು ಅವರು ಆಪಾದಿಸಿದ್ದಾರೆ.
ಮಹಾರಾಷ್ಟ್ರದಿಂದ ತಮ್ಮ ರಾಜ್ಯಗಳಿಗೆ ಮರಳಲು ಸುಮಾರು 20 ಲಕ್ಷ ಕಾರ್ಮಿಕರು ಹೆಸರು ನೊಂದಾಯಿಸಿದ್ದು, ಆ ಪೈಕಿ 5 ಲಕ್ಷ ಮಂದಿ ಮಾತ್ರ ಹೋಗಲು ಅವಕಾಶವಾಗಿದೆ. ಇನ್ನೂ ದೊಡ್ಡ ಸಂಖ್ಯೆಯ ಕಾರ್ಮಿಕರು ಬಾಕಿ ಇದ್ದಾರೆ ಎನ್ನುವುದರ ಸೂಚಕ ಇದಾಗಿದೆ ಎಂದು ಮೂಲಗಳು ಹೇಳಿವೆ.

ದೆಹಲಿಯಲ್ಲಿ ಸುಮಾರು ನಾಲ್ಕು ಲಕ್ಷ ಮಂದಿ ಹೆಸರು ನೋಂದಾಯಿಸಿದ್ದರೆ, ಈವರೆಗೆ ಕೇವಲ 65 ಸಾವಿರ ಮಂದಿ ಮಾತ್ರ ಪ್ರಯಾಣ ಮಾಡಲು ಅವಕಾಶವಾಗಿದೆ. ಕರ್ನಾಟಕದಿಂದ 1.6 ಲಕ್ಷ ಕಾರ್ಮಿಕರು ರೈಲುಗಳಲ್ಲಿ ತಮ್ಮ ಊರುಗಳಿಗೆ ಮರಳಿದ್ದರೆ, 7.88 ಲಕ್ಷ ಮಂದಿ ಹೆಸರು ನೋಂದಾಯಿಸಿಕೊಂಡಿದ್ದಾರೆ.

ಆದರೆ ಆರ್ಥಿಕ ಚಟುವಟಿಕೆಗಳು ಪುನಾರಂಭವಾದರೆ ಶ್ರಮಿಕ್ ವಿಶೇಷ ರೈಲುಗಳಿಗೆ ಬೇಡಿಕೆ ಕುಸಿಯಬಹುದು ಎನ್ನುವುದು ರೈಲ್ವೆ ಇಲಾಖೆಯ ಅಂದಾಜು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News