ಫ್ಯಾಕ್ಟ್ ಚೆಕ್: ‘ಲಾಕ್ ಡೌನ್ ಉಲ್ಲಂಘಿಸಿ ಹೈದರಾಬಾದ್ ನಲ್ಲಿ ಮುಸ್ಲಿಮರ ಶಾಪಿಂಗ್’ ಎನ್ನುವ ವಿಡಿಯೋ ಪಾಕಿಸ್ತಾನದ್ದು

Update: 2020-05-22 09:31 GMT

ಹೊಸದಿಲ್ಲಿ : ಜನರಿಂದ ಕಿಕ್ಕಿರಿದು ತುಂಬಿದ್ದ ಮಾರ್ಕೆಟ್ ಪ್ರದೇಶವೊಂದರ 24 ಸೆಕೆಂಡ್ ಅವಧಿಯ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮುಸ್ಲಿಮರು ಲಾಕ್ ಡೌನ್ ನಿಯಮಗಳನ್ನು ಉಲ್ಲಂಘಿಸಿ ಈದ್ ಶಾಪಿಂಗ್ ಮಾಡುತ್ತಿದ್ದಾರೆಂಬ ವಿವರಣೆಯನ್ನೂ ನೀಡಲಾಗಿತ್ತಲ್ಲದೆ, ಈ ವೀಡಿಯೋವನ್ನು ಹೈದರಾಬಾದ್‍ನ ಮದೀನಾ ಮಾರ್ಕೆಟ್‍ನಲ್ಲಿ ಚಿತ್ರೀಕರಿಸಲಾಗಿದೆ ಎಂದು ಆರೋಪಿಸಲಾಗಿತ್ತು.

ತೆಲಂಗಾಣದ ಬಿಜೆಪಿ ಐಟಿ ಘಟಕದ ಸಂಚಾಲಕ ವಿವೇಕಾನಂದ ಪಿ., ಬಿಜೆಪಿ ನಾಯಕ ವರುಣ್ ಗಾಂಧಿಯ ಕಾರ್ಯದರ್ಶಿ ಇಶಿತಾ ಯಾದವ್ ಸಹಿತ ಹಲವರು ಈ ವೀಡಿಯೋವನ್ನು ಪೋಸ್ಟ್ ಮಾಡಿದ್ದಾರಲ್ಲದೆ ಸಾವಿರಾರು ಜನ ಅದನ್ನು ಶೇರ್ ಮಾಡಿದ್ದಾರೆ.

ವಾಸ್ತವವೇನು?

ಈ ವೀಡಿಯೋವನ್ನು altnews.in ರಿವರ್ಸ್ ಸರ್ಚ್ ಮಾಡಿದಾಗ ಇದೇ ವೀಡಿಯೋವನ್ನು ಮೇ 18ರಂದು @ಮಿಶಾಲ್‍ಶಹೀನ್ ಎನ್ನುವವರು ಟ್ವೀಟ್ ಮಾಡಿದ್ದರು ಎಂದು ತಿಳಿದು ಬಂದಿದೆ. ಪಾಕಿಸ್ತಾನದ ಫೈಸಲಾಬಾದ್‍ನ ಅನಾರ್ಕಲಿ ಬಝಾರ್‍ನಲ್ಲಿ ಈ ವೀಡಿಯೋ ಚಿತ್ರೀಕರಿಸಲಾಗಿದೆ.
ಜನರು ಕೊರೋನವೈರಸ್ ಭಯವಿಲ್ಲದೆ ಈದ್‍ಗಾಗಿ ಶಾಪಿಂಗ್ ನಡೆಸುತ್ತಿದ್ದಾರೆಂದೂ ವೀಡಿಯೋ ಜತೆಗೆ ಬರೆಯಲಾಗಿತ್ತು. ಪಾಕಿಸ್ತಾನದ ಪತ್ರಕರ್ತ ವಖಾಸ್ ಸಹಿತ ಹಲವು ಟ್ವಿಟ್ಟರಿಗರು ಇದೇ ವೀಡಿಯೋ ಪೋಸ್ಟ್ ಮಾಡಿದ್ದರು. ವೀಡಿಯೋದ ಹತ್ತು ಸೆಕೆಂಡ್ ಅವಧಿಯಲ್ಲಿ ಉರ್ದುವಿನಲ್ಲಿ ಐನಿ ಶೂಸ್ ಎಂದು  ಬರೆಯಲಾಗಿರುವ ಮಳಿಗೆ ಕಾಣಿಸುತ್ತದೆ. ಇದನ್ನು ಗೂಗಲ್ ಸರ್ಚ್ ಮಾಡಿದಾಗ ಫೈಸಲಾಬಾದ್‍ನ ಅನಾರ್ಕಲಿ ಮಾರ್ಕೆಟ್ ‍ನಲ್ಲಿ ಈ ಹೆಸರಿನ ಅಂಗಡಿ ಇದೆಯೆಂದು ತಿಳಿದು ಬಂದಿದೆ.

ಆದುದರಿಂದ ಹೈದರಾಬಾದ್‍ನ ಮಾರ್ಕೆಟ್‍ನಲ್ಲಿ ಹಲವಾರು ಮುಸ್ಲಿಮರು ಲಾಕ್ ಡೌನ್ ಹೊರತಾಗಿಯೂ ಈದ್ ಶಾಪಿಂಗ್ ಮಾಡುತ್ತಿದ್ದಾರೆ ಎಂಬ ಸುಳ್ಳು ವಿವರಣೆಯೊಂದಿಗೆ ಈ ವೀಡಿಯೋವನ್ನು  ಪೋಸ್ಟ್ ಮಾಡಿ ಮುಸ್ಲಿಮರ ವಿರುದ್ಧ ದ್ವೇಷ ಹರಡಲು ನಡೆಸಿರುವ ಮತ್ತೊಂದು ಪ್ರಯತ್ನ ಎನ್ನುವುದು ಸ್ಪಷ್ಟ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News