ಕೊರೋನ ಪರಿಣಾಮ: ಆಘಾತಕಾರಿ ಫೋಟೊ ಶೇರ್ ಮಾಡಿದ ಗುಣಮುಖನಾದ ವ್ಯಕ್ತಿ

Update: 2020-05-22 10:45 GMT

ಕ್ಯಾಲಿಫೋರ್ನಿಯಾ: ಕೊರೋನವೈರಸ್ ಸೋಂಕಿಗೆ ತುತ್ತಾಗಿ ಇದೀಗ ಗುಣಮುಖನಾಗಿರುವ ಕ್ಯಾಲಿಫೋರ್ನಿಯಾದ 43  ವರ್ಷದ ನರ್ಸ್ ವೃತ್ತಿಯ ಮೈಕ್ ಶುಲ್ಟ್ ಎಂಬ ವ್ಯಕ್ತಿ ತಾವು ಆರು ವಾರಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ವೇಳೆ 20 ಕೆಜಿಗೂ ಹೆಚ್ಚು ದೇಹತೂಕ ಕಳೆದುಕೊಂಡಿರುವುದಾಗಿ ಹೇಳಿದ್ದಾರೆ.

ಕಳೆದ ವಾರ ಇವರು ತಮಗೆ ಕೊರೋನ ಸೋಂಕು ತಗಲುವ ಒಂದು ತಿಂಗಳ ಮುಂಚಿನ ತಮ್ಮ ಚಿತ್ರ ಹಾಗೂ ಕೊರೋನ ಸೋಂಕು ತಗಲಿ ಗುಣಮುಖವಾದ ನಂತರದ ಚಿತ್ರವನ್ನು ಇನ್‍ ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ಧಾರೆ.

ಹಿಂದೆ 190 ಪೌಂಡ್ ಅಥವಾ 86 ಕೆಜಿ ದೇಹ ತೂಕ ಹೊಂದಿದ್ದ ಅವರು ಕೊರೋನವೈರಸ್ ಸೋಂಕಿಗೆ ತುತ್ತಾದ ನಂತರ ಬರೋಬ್ಬರಿ 23 ಕೆಜಿ ತೂಕ ಕಳೆದುಕೊಂಡು ಕೃಶಕಾಯರಾಗಿದ್ದಾರೆ. ತಮ್ಮ ದೇಹತೂಕ ಈಗ 63 ಕೆಜಿ ಆಗಿರುವುದಾಗಿ ಅವರು ಬರೆದಿದ್ದಾರೆ.

ಆಸ್ಪತ್ರೆಯಲ್ಲಿ ಎದ್ದು ನಿಂತು ಫೋಟೋ ತೆಗೆಯುವಷ್ಟೂ ಶಕ್ತಿ ತನ್ನಲ್ಲಿರಲಿಲ್ಲ. ಈ ಸೋಂಕು ಯಾರಿಗೂ ತಗಲಬಹುದು ಎಂದು ಆರು ವಾರಗಳ ಕಾಲ ವೆಂಟಿಲೇಟರಿನಲ್ಲಿ ಇರಿಸಿದ ಪರಿಣಾಮವನ್ನು ಅವರು ವಿವರಿಸಿದ್ದಾರೆ. “ಕೋವಿಡ್-19 ನನ್ನ ಶ್ವಾಸಕೋಶದ ಸಾಮರ್ಥ್ಯವನ್ನು ನ್ಯುಮೋನಿಯಾ ಕಾರಣದಿಂದ ಕಡಿಮೆಗೊಳಿಸಿದೆ'' ಎಂದೂ ಅವರು ಹೇಳಿದ್ದಾರೆ.

ಮೈಕ್ ಅವರಿಗೆ ಇತರ ಯಾವುದೇ ಆರೋಗ್ಯ ಸಮಸ್ಯೆ ಇರಲಿಲ್ಲ ಹಾಗೂ ಅವರು ನಿಯಮಿತವಾಗಿ ವ್ಯಾಯಾಮ ಮಾಡಿಕೊಂಡು ದೈಹಿಕ ಕ್ಷಮತೆ ಕಾಪಾಡಿಕೊಂಡಿದ್ದರು. ಆದರೆ ಮಾರ್ಚ್ ತಿಂಗಳಲ್ಲಿ ಮಿಯಾಮಿ ಬೀಚ್‍ನಲ್ಲಿ ಭಾಗವಹಿಸಿದ ಬಳಿಕ ಅವರಿಗೆ ಸೋಂಕು ತಗಲಿತ್ತು. ಈ ಪಾರ್ಟಿಯಲ್ಲಿ ಭಾಗವಹಿಸಿದ್ದ ಹಲವು ಮಂದಿ  ಇತರರಿಗೆ ಸೋಂಕು ತಗಲಿರುವುದನ್ನು ಇಲ್ಲಿ ಸ್ಮರಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News