ಮಂಗಳೂರು ವಿಮಾನ ದುರಂತದಲ್ಲಿ ಮೃತಪಟ್ಟಿದ್ದ ಪ್ರಯಾಣಿಕನ ಕುಟುಂಬಕ್ಕೆ 7.64 ಕೋ.ರೂ. ಪರಿಹಾರ

Update: 2020-05-22 15:38 GMT

ಹೊಸದಿಲ್ಲಿ,ಮೇ 22: ಹತ್ತು ವರ್ಷಗಳ ಹಿಂದೆ ಮಂಗಳೂರಿನಲ್ಲಿ ಸಂಭವಿಸಿದ್ದ ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದ ಪ್ರಯಾಣಿಕರೋರ್ವರಿಗೆ 7.64 ಕೋ.ರೂ.ಪರಿಹಾರವನ್ನು ಪಾವತಿಸುವಂತೆ ಸರ್ವೋಚ್ಚ ನ್ಯಾಯಾಲಯವು ಏರ್ ಇಂಡಿಯಾಕ್ಕೆ ಆದೇಶಿಸಿದೆ.

2010, ಮೇ 22ರಂದು ಬೆಳಿಗ್ಗೆ ದುಬೈನಿಂದ ಆಗಮಿಸಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ಪತನಗೊಂಡು ಅದರಲ್ಲಿದ್ದ 166 ಪ್ರಯಾಣಿಕರ ಪೈಕಿ 158 ಜನರು ಸಜೀವ ದಹನಗೊಂಡಿದ್ದರು.

ಈ ಮೊದಲು ರಾಷ್ಟ್ರೀಯ ಬಳಕೆದಾರರ ದೂರುಗಳ ಇತ್ಯರ್ಥ ಆಯೋಗವು ಕರ್ನಾಟಕದ ದಾಂಡೇಲಿ ಮೂಲದ ಮಹೇಂದ್ರ ಕೋಡ್ಕಣಿ(45) ಅವರ ಪತ್ನಿ, ಪುತ್ರ ಮತ್ತು ಪುತ್ರಿಗೆ 7.35 ಕೋ.ರೂ.ಗಳ ಪರಿಹಾರವನ್ನು ಮಂಜೂರು ಮಾಡಿತ್ತು.

ಏರ್ ಇಂಡಿಯಾ ಇನ್ನೂ ಪಾವತಿಸಬೇಕಿರುವ ಹಣದ ಮೇಲೆ ಶೇ.9ರಷ್ಟು ಬಡ್ಡಿಯು ಸೇರುವುದರೊಂದಿಗೆ ಈ ಮೊತ್ತವು ಈಗ 7,64,29,437 ಕೋ.ರೂ.ಗೆ ಏರಲಿದೆ. ಎರಡು ತಿಂಗಳುಗಳಲ್ಲಿ ಈ ಮೊತ್ತವನ್ನು ಕೋಡ್ಕಣಿ ಕುಟುಂಬಕ್ಕೆ ಪಾವತಿಸುವಂತೆ ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ ಮತ್ತು ಅಜಯ ರಸ್ತೋಗಿ ಅವರ ಪೀಠವು ತನ್ನ ತೀರ್ಪಿನಲ್ಲಿ ತಿಳಿಸಿದೆ.

ಕೋಡ್ಕಣಿ ಅವರು ಯುಎಇ ಮೂಲದ ಕಂಪನಿಯೊಂದರ ಪ್ರಾದೇಶಿಕ ನಿರ್ದೇಶಕ (ಮಧ್ಯ ಪ್ರಾಚ್ಯ)ರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News