‘ಮೇ 16ರ ವೇಳೆಗೆ ಕೊರೋನ ಪ್ರಕರಣಗಳು ಇರುವುದಿಲ್ಲ’: ಎಪ್ರಿಲ್ ನ ನಕ್ಷೆಗಾಗಿ ಕ್ಷಮೆಯಾಚಿಸಿದ ಮೋದಿ ಸರಕಾರ

Update: 2020-05-22 17:23 GMT

ಹೊಸದಿಲ್ಲಿ: ದೇಶದಲ್ಲಿ ಮೇ 16ರ ವೇಳೆಗೆ ಯಾವುದೇ ಹೊಸ ಕೋವಿಡ್-19 ಪ್ರಕರಣಗಳು ಇರುವುದಿಲ್ಲ ಎಂಬ ಅರ್ಥ ಬರುವ ರೀತಿಯಲ್ಲಿ ಕಳೆದ ತಿಂಗಳು ಬಿಡುಗಡೆ ಮಾಡಿದ ನಕ್ಷೆಯೊಂದರ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾದ ನಂತರ ‘ತಪ್ಪುಗ್ರಹಿಕೆಗಾಗಿ’ ನರೇಂದ್ರ ಮೋದಿ ಸರ್ಕಾರ ಶುಕ್ರವಾರ ಕ್ಷಮೆ ಯಾಚಿಸಿದೆ.

ಮಾರ್ಚ್ 25ರಂದು ದೇಶವ್ಯಾಪಿ ಆರಂಭವಾದ ಲಾಕ್‍ಡೌನ್‍ನ ಪ್ರಯೋಜನವನ್ನು ಅಂದಾಜಿಸುವ ಈ ನಕ್ಷೆಯನ್ನು ಏಪ್ರಿಲ್ 24ರಂದು ಬಿಡುಗಡೆ ಮಾಡಲಾಗಿತ್ತು.

“ಆ ನಕ್ಷೆಯನ್ನು ಸರಿಪಡಿಸಲು ನಾನು ಬಯಸುತ್ತೇನೆ ಹಾಗೂ ತಪ್ಪುಗ್ರಹಿಕೆಗಾಗಿ ಕ್ಷಮೆಯಾಚಿಸುತ್ತೇನೆ. ನಾನು ಹೇಳಲು ಬಯಸಿದ್ದು ಅದನ್ನಲ್ಲ” ಎಂದು ನೀತಿ ಆಯೋಗದ ಸದಸ್ಯ ಡಾ.ವಿ.ಕೆ.ಪಾಲ್ ಹೇಳಿದ್ದಾರೆ.

ಭಾರತ ಕೋವಿಡ್-19 ಸಾಂಕ್ರಾಮಿಕವನ್ನು ಪರಿಣಾಮಕಾರಿಯಾಗಿ ತಡೆಯುತ್ತಿದೆ ಎಂದು ಬರೆದು ಪಾಲ್ ಈ ನಕ್ಷೆ ಬಿಂಬಿಸಿದ್ದರು. ಇದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆಗಳು ವ್ಯಕ್ತವಾಗಿದ್ದವು. ಈ ನಕ್ಷೆ ಈಗ ಲಭ್ಯವಿಲ್ಲ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಪಾಲ್ ಈ ಬಗ್ಗೆ ಸ್ಪಷ್ಟನೆ ನೀಡಿ, “ಪ್ರಕರಣಗಳ ಸಂಖ್ಯೆ ಶೂನ್ಯವಾಗಲಿದೆ ಎಂಬ ಪ್ರತಿಪಾದನೆ ಮಾಡಿರಲಿಲ್ಲ” ಎಂದು ಸಮರ್ಥಿಸಿಕೊಂಡರು.

“ಈ ನಕ್ಷೆಯಲ್ಲಿರುವ ರೇಖೆ ಗಣಿತಾತ್ಮಕ ಟ್ರೆಂಡ್‍ಲೈನ್. ನಾವು ಗಣಿತಾತ್ಮಕ ಅಂಕಿ ಅಂಶಗಳನ್ನು ತೋರಿಸುವಾಗ ಅದರ ಮೂಲವನ್ನು ತೋರಿಸಬೇಕಾದ್ದು ನಮ್ಮ ಕರ್ತವ್ಯ. ಇದು ಕೇವಲ ಔಪಚಾರಿಕ. ಆದರೆ ಅದರ ವಿವರಣೆಯಲ್ಲಿ ಎಲ್ಲೂ ಶೂನ್ಯವಾಗುತ್ತದೆ ಎಂದು ಹೇಳಲಿಲ್ಲ; ಇದು ತಪ್ಪುಗ್ರಹಿಕೆ” ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News